ವಾಷಿಂಗ್ಟನ್: ಇಡೀ ವಿಶ್ವವೇ ಕುತೂಹಲದಿಂದ ಗಮನಿಸುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಂತಿಮ ಹಂತದ ಮತದಾನ ಪ್ರಕ್ರಿಯೆ ಮಂಗಳವಾರ (ಭಾರತೀಯ ಕಾಲಮಾನ ಸಂಜೆ 4.30ಕ್ಕೆ) ಆರಂಭವಾಗಿದೆ. ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರೆಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು ರೋಚಕ ಫಲಿತಾಂಶ ನಿರೀಕ್ಷಿಸಲಾಗಿದೆ. ಫಲಿತಾಂಶ ಸ್ಪಷ್ಟಗೊಳ್ಳಲು 1-2 ದಿನ ಹಿಡಿಯುವ ನಿರೀಕ್ಷೆ ಇದೆ.ಸುಮಾರು 24 ಕೋಟಿ ಮತದಾರರು ಮತದಾನದ ಹಕ್ಕು ಪಡೆದಿದ್ದು, ಇ-ಮೇಲ್ ಮೂಲಕ ಮತದಾನಕ್ಕೆ ಮೊದಲೇ ಅವಕಾಶ ಇದ್ದ ಕಾರಣ ಈಗಾಗಲೇ ಸುಮಾರು 9 ಕೋಟಿ ಮಂದಿ ಹಕ್ಕು ಚಲಾವಣೆ ಮಾಡಿದ್ದಾರೆ. ಮತದಾನದ ಅಂತಿಮ ದಿನವಾದ ಮಂಗಳವಾರ ಇನ್ನೂ ಕೋಟ್ಯಂತರ ಮಂದಿ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾವಣೆ ಮಾಡುವ ಸಾಧ್ಯತೆ ಇದೆ.ಹೆಚ್ಚಿನ ಪೈಪೋಟಿ ಇರುವ ಕಾರಣ ಭಾರಿ ಪ್ರಮಾಣದ ಮತದಾನ ನಿರೀಕ್ಷಿಸಲಾಗಿದೆ. ಅಲ್ಲದೆ, ಅಮೆರಿಕದಲ್ಲಿ ಇವಿಎಂ ಇಲ್ಲ. ಮತಪತ್ರಗಳ ಮೂಲಕ ಮತದಾನ ನಡೆಯುವ ಕಾರಣ ಎಣಿಕೆ ಮತ ಎಣಿಕೆ ವಿಳಂಬ ಆಗುವ ಸಾಧ್ಯತೆ ಇದೆ. ಆದರೂ 1-2 ದಿನದಲ್ಲಿ ಯಾರು ಮುನ್ನಡೆಯಲ್ಲಿದ್ದಾರೆ ಎಂಬ ಟ್ರೆಂಡ್ ತಿಳಿದುಬರುವ ನಿರೀಕ್ಷೆಯಿದೆ.ಅಮೆರಿಕದಲ್ಲಿ ನೇರವಾಗಿ ಜನ ಅಧ್ಯಕ್ಷರನ್ನು ಆಯ್ಕೆ ಮಾಡಲ್ಲ. ಬದಲಾಗಿ ಟ್ರಂಪ್ ಅಥವಾ ಕಮಲಾ ಬೆಂಬಲಿಗರಾದ 538 ಎಲೆಕ್ಟೋರಲ್ ಕಾಲೇಜ್ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಇವರು ಅಧ್ಯಕ್ಷರನ್ನು ಅಧಿಕೃತವಾಗಿ ಆಯ್ಕೆ ಮಾಡಲಿದ್ದು, ಮುಂದಿನ ತಿಂಗಳು ಅಧಿಕೃತ ಘೋಷಣೆ ಆಗಲಿದೆ. 270 ಪ್ರತಿನಿಧಿಗಳ ಬೆಂಬಲ ಪಡೆದವರು ಅಧ್ಯಕ್ಷರಾಗಲಿದ್ದಾರೆ ಹಾಗೂ ಜನವರಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಕೆಲವು ದೇಶಗಳಿಗೂ ಎದೆಬಡಿತ ಹೆಚ್ಚಳ:
ಹಾಲಿ ಅಧ್ಯಕ್ಷ ಜೋ ಬೈಡೆನ್ ಹಿಂದೆ ಸರಿದು ಉಪಾಧ್ಯಕ್ಷೆಯಾಗಿದ್ದ ಕಮಲಾ ಹ್ಯಾರಿಸ್ ಸ್ಪರ್ಧಿಸಿರುವುದು ಡೆಮಾಕ್ರೆಟಿಕ್ ಪಕ್ಷದಲ್ಲಿ ಮತ್ತೆ ಗೆಲ್ಲುವ ಆಶಾಭಾವನೆ ಹುಟ್ಟು ಹಾಕಿದೆ. ಈ ನಡುವೆ ಟ್ರಂಪ್ ಅವರು ಕೊನೆಯ ಬಾರಿ ಕಣಕ್ಕೆ ಇಳಿದಿರುವುದರಿಂದ ಸ್ಪರ್ಧೆ ಹೆಚ್ಚಾಗಿದೆ.ಇದರ ನಡುವೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ವಿಶ್ವಕ್ಕೇ ಮಹತ್ವದ್ದಾದರೂ ಕೆಲವು ದೇಶಗಳಿಗಂತೂ ತೀರಾ ಮಹತ್ವದ್ದು. ಏಕೆಂದರೆ ಇಸ್ರೇಲ್ ದೇಶವು ಪ್ಯಾಲೆಸ್ತೀನ್, ಲೆಬನಾನ್, ಇರಾನ್ ವಿರುದ್ಧ ಯುದ್ಧೋನ್ಮಾದದಲ್ಲಿದೆ. ಇನ್ನೊಂದು ಕಡೆ ರಷ್ಯಾ-ಉಕ್ರೇನ್ ಮಧ್ಯೆ ಯುದ್ಧ ನಿಲ್ಲುತ್ತಲೇ ಇಲ್ಲ. ಯುದ್ಧದಲ್ಲಿ ಉಕ್ರೇನ್ ಹಾಗೂ ಇಸ್ರೇಲ್ ಪರ ಅಮೆರಿಕ ಇದೆ.ಹೀಗಾಗಿ ಈ ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಅಮೆರಿಕ ವಿದೇಶಾಂಗ ನೀತಿ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಈ ಚುನಾವಣೆಯನ್ನು ಹೆಚ್ಚು ವಿದೇಶಗಳು ಗಂಭೀರವಾಗಿ ಪರಿಗಣಿಸಿವೆ.ಕೋರ್ಟಿಗೆ ಹೋಗುವ ಸಾಧ್ಯತೆ:ಚುನಾವಣೆ ಬಳಿಕ ಮತ ಎಣಿಕೆಯಲ್ಲಿ ಹಿನ್ನಡೆ ಸಾಧಿಸಿದರೆ ಟ್ರಂಪ್ ಅವರು 2020ರಂತೆಯೇ, ಚುನಾವಣಾ ಅಕ್ರಮದ ಆರೋಪ ಹೊರಿಸಿ ಕೋರ್ಟಿಗೆ ಹೋಗುವ ಸಾಧ್ಯತೆ ಇದೆ. ಇದು ಫಲಿತಾಂಶವನ್ನು ಇನ್ನಷ್ಟು ವಿಳಂಬ ಮಾಡಬಲ್ಲದು.
==ಇಲ್ಲಿ ಕಮಲಾ-ಟ್ರಂಪ್ ಟೈ!ವಾಷಿಂಗ್ಟನ್: ಅಮೆರಿಕ ಕುಗ್ರಾಮವಾದ ಡಿಕ್ಸ್‌ವಿಲ್ಲೆ ನಾಚ್‌ನಲ್ಲಿ ಮಂಗಳವಾರ ಮತದಾನ ಆರಂಭವಾದ ಕೆಲವೇ ಕ್ಷಣಗಳಲ್ಲಿ ಫಲಿತಾಂಶ ಬಹಿರಂಗವಾಗಿದೆ! ಏಕೆಂದರೆ ಇದು ಅತಿ ಚಿಕ್ಕ ಕುಗ್ರಾಮವಾಗಿದ್ದು ಕೇವಲ 6 ಮತದಾರರನ್ನು ಹೊಂದಿದೆ. ಇಲ್ಲಿ ಕಮಲಾ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್ ತಲಾ 3 ಮತ ಪಡೆದಿದ್ದು, ಫಲಿತಾಂಶ ಟೈ ಆಗಿದೆ ಎಂಬ ಕುತೂಹಲದ ಮಾಹಿತಿ ಹೊರಬಿದ್ದಿದೆ.
==ಟ್ರಂಪ್‌ಗೆ ಜಯ: ಥಾಯ್ ಮರಿ ನೀರಾನೆ ‘ಭವಿಷ್ಯ’ಬ್ಯಾಂಕಾಕ್: ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುತ್ತಾರೆ, ಅವರ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರನ್ನು ಸೋಲಿಸುತ್ತಾರೆ ಎಂದು ಥಾಯ್ಲೆಂಡ್‌ನ ಪ್ರಸಿದ್ಧ ನೀರಾನೆ ‘ಮೂ ಡೆಂಗ್’, ‘ಭವಿಷ್ಯ’ ಹೇಳಿದೆ.ಥಾಯ್‌ನ ಖಾವೊ ಖೋವ್ ಓಪನ್ ಮೃಗಾಲಯದಲ್ಲಿ ಇರುವ ನೀರಾನೆಗೆ, ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ಎಂದು ಬರೆದಿದ್ದ 2 ಕಲ್ಲಂಗಡಿಗಳ ನಡುವೆ ಆಯ್ಕೆಯನ್ನು ನೀಡಿದಾಗ ಟ್ರಂಪ್ ಅವರ ಹೆಸರಿದ್ದ ಕಲ್ಲಂಗಡಿ ಆಯ್ಕೆ ಮಾಡಿಕೊಂಡಿದೆ.ಮೂ ಡೆಂಗ್ ಜುಲೈ 2024 ರಲ್ಲಿ ಜನಿಸಿದ ಮರಿ ನೀರಾನೆ ಆಗಿದ್ದು ತನ್ನ ತುಂಟ ನಡೆಗಳ ಮೂಲಕ ಪ್ರಸಿದ್ಧಿ ಪಡೆದಿದೆ.