ಆದಾಯ ತೆರಿಗೆಯನ್ನೇ ರದ್ದು ಮಾಡಲು ಟ್ರಂಪ್‌ ತಯಾರಿ!

KannadaprabhaNewsNetwork |  
Published : Jan 29, 2025, 01:30 AM IST
ಟ್ರಂಪ್‌ | Kannada Prabha

ಸಾರಾಂಶ

2ನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಹಲವು ಕ್ರಾಂತಿಕಾರಕ ನಿರ್ಧಾರಗಳನ್ನು ಘೋಷಿಸಿರುವ ಡೊನಾಲ್ಡ್‌ ಟ್ರಂಪ್‌, ಇದೀಗ ಜನಸಾಮಾನ್ಯರಿಗೆ ವಿಧಿಸುವ ಆದಾಯ ತೆರಿಗೆಯನ್ನೇ ರದ್ದು ಮಾಡುವ ಸುಳಿವು ನೀಡಿದ್ದಾರೆ.

- ಜನರಿಗೇಕೆ ತೆರಿಗೆ ಹೇರಬೇಕು, ವಿದೇಶಗಳಿಗೆ ವಿಧಿಸೋಣ!ಟಾಪ್‌- ಭಲೇ ಐಡಿಯಾ- ವಿದೇಶಿ ಸುಂಕದಿಂದ ಖಜಾನೆ ತುಂಬೋಣ: ಅಧ್ಯಕ್ಷ

ಭಾರತದ ಉತ್ಪನ್ನಕ್ಕೆ ಹೆಚ್ಚು ತೆರಿಗೆ: ಟ್ರಂಪ್‌

ವಾಷಿಂಗ್ಟನ್‌: ಅಮೆರಿಕಕ್ಕೆ ತೊಂದರೆ ನೀಡುವ ಭಾರತ, ಚೀನಾ, ಬ್ರೆಜಿಲ್‌ ಮತ್ತಿತರ ದೇಶಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದಾಗಿ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಸಿದ್ದಾರೆ. ಈ ದೇಶಗಳು ಅಮೆರಿಕದ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ಹಾಕುತ್ತಿವೆ ಎಂದು ಟ್ರಂಪ್‌ ಆರೋಪಿಸಿದ್ದಾರೆ.

---ವಾಷಿಂಗ್ಟನ್‌: 2ನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಹಲವು ಕ್ರಾಂತಿಕಾರಕ ನಿರ್ಧಾರಗಳನ್ನು ಘೋಷಿಸಿರುವ ಡೊನಾಲ್ಡ್‌ ಟ್ರಂಪ್‌, ಇದೀಗ ಜನಸಾಮಾನ್ಯರಿಗೆ ವಿಧಿಸುವ ಆದಾಯ ತೆರಿಗೆಯನ್ನೇ ರದ್ದು ಮಾಡುವ ಸುಳಿವು ನೀಡಿದ್ದಾರೆ. ಜನರಿಗೆ ತೆರಿಗೆ ಹೇರಿ ಆದಾಯ ಸಂಗ್ರಹಿಸುವ ಬದಲು, ವಿದೇಶಗಳ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ಹೇರಿ ಅದರ ಮೂಲಕ ಖಜಾನೆ ಭರ್ತಿ ಮಾಡುವ ಪ್ರಸ್ತಾಪವನ್ನು ಟ್ರಂಪ್‌ ಮುಂದಿಟ್ಟಿದ್ದಾರೆ.

ಫ್ಲೋರಿಡಾದಲ್ಲಿ ಸೋಮವಾರ ನಡೆದ ರಿಪಬ್ಲಿಕನ್‌ ಪಕ್ಷದ ಸಮಾರಂಭವೊಂದರಲ್ಲಿ ಮಾತನಾಡಿದ ಟ್ರಂಪ್‌, ‘ಅಮೆರಿಕ ಶ್ರೀಮಂತ ಮತ್ತು ಶಕ್ತಿಯುತ ಇತಿಹಾಸಕ್ಕೆ ಮರಳುವ ಸಮಯ ಸಮೀಪದಲ್ಲಿದೆ. ಸುಂಕದ ವ್ಯವಸ್ಥೆ ಹಿಂದೆ ಅಮೆರಿಕವನ್ನು ಶ್ರೀಮಂತಗೊಳಿಸಿತ್ತು. ನಮ್ಮ ದೇಶದ ಜನರಿಗೆ ತೆರಿಗೆ ವಿಧಿಸಿ ಆದಾಯ ಸಂಗ್ರಹಿಸುವ ಬದಲು ನಾವು ವಿದೇಶಿ ರಾಷ್ಟ್ರಗಳಿಗೆ ಸುಂಕ ಮತ್ತು ತೆರಿಗೆ ವಿಧಿಸಬೇಕು’ ಎಂದಿದ್ದಾರೆ.

ಹಿಂದೆ ತೆರಿಗೆ ಇರಲಿಲ್ಲ!:1870ರಿಂದ 1913 ರವರೆಗೆ ಅಮೆರಿಕದಲ್ಲಿ ಆದಾಯ ತೆರಿಗೆ ಇರಲಿಲ್ಲ. ಆಗಿನ ಸುಂಕಗಳು, ತೆರಿಗೆಗಳು ಅಮೆರಿಕದ ಇತಿಹಾಸವನ್ನು ಶ್ರೀಮಂತವಾಗಿರಿಸಿತ್ತು. ಇದರಿಂದ ಎಷ್ಟು ಆದಾಯ ಸಂಗ್ರಹವಾಗುತ್ತಿತ್ತು ಎಂದರೆ ದುಡ್ಡನ್ನು ಏನು ಮಾಡಬೇಕು ಎಂದು ಶಿಫಾರಸು ಮಾಡಲೇ ಒಂದು ಸಮಿತಿ ರಚಿಸಲಾಗಿತ್ತು. ಈ ಆದಾಯಗಳೇ ದೇಶವನ್ನು ಮುನ್ನಡೆಸಲು ಆಗಿನ ಅಧ್ಯಕ್ಷರುಗಳಿಗೆ ಬಂಡವಾಳ ಒದಗಿಸಿದ್ದವು.

ಹೀಗಾಗಿ 1913ರವರೆಗೆ ದೇಶದಲ್ಲಿ ಆದಾಯ ಸಂಗ್ರಹಕ್ಕೆ ಯಾವ ನೀತಿ ಪಾಲಿಸಲಾಗುತ್ತಿತ್ತೋ ಆ ನೀತಿಯನ್ನೇ ಮತ್ತೆ ನಾವು ಜಾರಿ ಮಾಡಬೇಕಿದೆ. ನಮ್ಮ ಜನರ ಮೇಲೆ ತೆರಿಗೆ ಹೇಳಿ ವಿದೇಶಗಳನ್ನು ಶ್ರೀಮಂತ ಮಾಡುವ ಬದಲು, ವಿದೇಶಿ ವಸ್ತುಗಳ ಮೇಲೆ ತೆರಿಗೆ ನಮ್ಮ ದೇಶವನ್ನು ಶ್ರೀಮಂತ ಮಾಡಬೇಕು. ನಮ್ಮ ನಾಗರಿಕರ ಮೇಲೆ ಹೇರುವ ಆದಾಯ ತೆರಿಗೆ ರದ್ದು ಮಾಡಬೇಕು ಎಂದು ಟ್ರಂಪ್‌ ಹೇಳಿದ್ದಾರೆ. ಚುನಾವಣಾ ಪ್ರಚಾರದ ವೇಳೆಯೂ ಡೊನಾಲ್ಡ್‌ ಟ್ರಂಪ್‌, ಆದಾಯ ತೆರಿಗೆ ರದ್ದತಿ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದ್ದರು.

ಏನಾಗಬಹುದು?:

ಆರ್ಥಿಕ ತಜ್ಞರ ಲೆಕ್ಕಾಚಾರದ ಅನ್ವಯ, ಒಂದು ವೇಳೆ ಟ್ರಂಪ್‌ ಆದಾಯ ತೆರಿಗೆ ರದ್ದುಪಡಿಸಿದರೆ ಅದು ಅಮೆರಿಕದ ಖಜಾನೆಯ ಮೇಲೆ 170 ಲಕ್ಷ ಕೋಟಿ ರು. ಹೊರೆ ಹೊರಿಸಲಿದೆ. ಇಷ್ಟು ಹಣವನ್ನು ತುಂಬಿಸಲು ಟ್ರಂಪ್‌ ಸರ್ಕಾರ ಭಾರೀ ಸಾಹಸ ಮಾಡಬೇಕಾಗುತ್ತದೆ. ಕಾರಣ ಅಮೆರಿಕದ ಒಟ್ಟು ಜಿಡಿಪಿಯಲ್ಲಿ ಆಮದಿನ ಪಾಲು ಶೇ.14ರಷ್ಟು ಪಾಲಿದೆ. ಈ ಆಮದು ವಸ್ತುಗಳ ಮೇಲೆ ತೆರಿಗೆ ಹಾಕುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಬೇಕಾದರೆ, ಈಗ ಆ ವಸ್ತುಗಳ ಮೇಲೆ ಹಾಕುತ್ತಿರುವ ತೆರಿಗೆಯನ್ನು ಶೇ.133ರಷ್ಟು ಹೆಚ್ಚಿಸಬೇಕು ಎಂದು ನೊಬೆಲ್‌ ಪುರಸ್ಕೃತ ಪೌಲ್‌ ಕ್ರುಗ್‌ಮನ್‌ ಅಂದಾಜಿಸಿದ್ದಾರೆ.

--

PREV

Recommended Stories

ರಷ್ಯಾ ಅಣುಸ್ಥಾವರದ ಮೇಲೆ ಉಕ್ರೇನ್‌ ದಾಳಿ
6 ತಿಂಗಳಲ್ಲಿ ಅಮೆರಿಕ ವಲಸಿಗರ ಸಂಖ್ಯೆಯಲ್ಲಿ 15 ಲಕ್ಷ ಕುಸಿತ