ನವದೆಹಲಿ: ಮದ್ಯ ಲೈಸೆನ್ಸ್ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ಕುರಿತು ಜರ್ಮನಿ ಸರ್ಕಾರ ಕ್ಯಾತೆ ತೆಗೆದು ಭಾರತದಿಂದ ತಪರಾಕಿ ಹಾಕಿಸಿಕೊಂಡ ಬೆನ್ನಲ್ಲೇ, ಇದೀಗ ಅಮೆರಿಕ ಸರ್ಕಾರ ಕೂಡಾ ಭಾರತದ ಆಂತರಿಕ ವಿಷಯದಲ್ಲಿ ಮಧ್ಯಪ್ರವೇಶ ಮಾಡುವ ಯತ್ನ ಮಾಡಿದೆ.
ಕೇಜ್ರಿವಾಲ್ ಬಂಧನದ ಕುರಿತು ರಾಯಿಟರ್ಸ್ ಸುದ್ದಿಸಂಸ್ಥೆಯ ಇ ಮೇಲ್ ಪ್ರಶ್ನೆಗೆ ಉತ್ತರಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರರು, ‘ಬೆಳವಣಿಗೆಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ನ್ಯಾಯಸಮ್ಮತ, ಪಾರದರ್ಶಕ ಮತ್ತು ಕಾಲಮಿತಿಯಲ್ಲಿನ ಕಾನೂನು ಪ್ರಕ್ರಿಯೆಯನ್ನು ನಾವು ಪ್ರೋತ್ಸಾಹಿಸುತ್ತೇವೆ’ ಎಂದು ಹೇಳಿದ್ದಾರೆ.
ಇತ್ತೀಚೆಗೆ ಜರ್ಮನಿ ಕೂಡಾ ಇದೇ ರೀತಿಯ ಹೇಳಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಜರ್ಮನ್ ರಾಯಭಾರಿಯನ್ನು ಕರೆಸಿಕೊಂಡಿದ್ದ ವಿದೇಶಾಂಗ ಸಚಿವಾಲಯ, ‘ನಿಮ್ಮ ಹೇಳಿಕೆ ಭಾರತದ ಆಂತರಿಕ ವಿಷಯದಲ್ಲಿ ಸ್ಪಷ್ಟ ಹಸ್ತಕ್ಷೇಪವಾಗಿದೆ.
ಇತರೆ ದೇಶಗಳಂತೆ ಭಾರತದಲ್ಲೂ ನ್ಯಾಯಿಕ ಪ್ರಕ್ರಿಯೆ ಅನ್ವಯ ಆಪಾದಿತರ ವಿಚಾರಣೆ ನಡೆಯುತ್ತದೆ. ಹೀಗಾಗಿ ಈ ವಿಷಯವನ್ನು ಪೂರ್ವಾಗ್ರಹ ಪೀಡಿತವಾಗಿ ನೋಡುವುದು ಸಲ್ಲ ಎಂದು ಹೇಳಿ ಕೇವಲ 5 ನಿಮಿಷಗಳಲ್ಲೇ ರಾಯಭಾರಿಯನ್ನು ಕಳುಹಿಸಿಕೊಟ್ಟಿತ್ತು.