ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನಕ್ಕೆ ಆಕ್ಷೇಪ ವ್ಯಕ್ತಪಡಿಸಿ ಭಾರತದ ಸಿಟ್ಟು ಎದುರಿಸಿದ್ದ ಅಮೆರಿಕ ಇದೀಗ ತನ್ನ ಹೇಳಿಕೆಯನ್ನು ಪುನರುಚ್ಚಾರ ಮಾಡಿದ್ದು, ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳ ಜಪ್ತಿ ವಿಚಾರವನ್ನೂ ಪ್ರಸ್ತಾಪಿಸಿದೆ.
ಬುಧವಾರ ಈ ಕುರಿತು ಪ್ರತಿಕ್ರಿಯೆ ನೀಡಿದ ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್, ‘ನ್ಯಾಯಯುತ, ಪಾರದರ್ಶಕ ಹಾಗೂ ಕಾಲಮಿತಿಯ ಕಾನೂನು ಪ್ರಕ್ರಿಯೆಯನ್ನು ನಾವು ಎದುರು ನೋಡುತ್ತಿದ್ದೇವೆ. ಇಂತಹ ವಿಚಾರಗಳನ್ನು ನಾವು ಹತ್ತಿರದಿಂದ ಗಮನಿಸುತ್ತೇವೆ’ ಎಂದು ಹೇಳಿದರು.
ಇದೇ ವೇಳೆ ಪತ್ರಕರ್ತರೊಬ್ಬರು ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳ ಜಪ್ತಿ ಬಗ್ಗೆ ಪ್ರಶ್ನಿಸಿದಾಗ, ‘ತೆರಿಗೆ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಬಗ್ಗೆ ನಮಗೆ ತಿಳಿದಿದೆ.
ಮುಂಬರುವ ಚುನಾವಣೆಯಲ್ಲಿ ಪ್ರಚಾರ ಮಾಡುವುದಕ್ಕೂ ತಮಗೆ ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸಿಗರು ಆರೋಪಿಸಿದ್ದಾರೆ. ಈ ವಿಷಯದಲ್ಲೂ ನ್ಯಾಯಯುತ, ಪಾರದರ್ಶಕ ಹಾಗೂ ಕಾಲಮಿತಿಯ ಕಾನೂನು ಪ್ರಕ್ರಿಯೆ ನಡೆಯುವುದನ್ನು ನಿರೀಕ್ಷಿಸುತ್ತೇವೆ’ ಎಂದು ಹೇಳಿದರು.
ಕೇಜ್ರಿವಾಲ್ ಬಂಧನದ ಕುರಿತು ಅಮೆರಿಕ ಮಂಗಳವಾರ ನೀಡಿದ್ದ ಹೇಳಿಕೆಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿ, ಅಮೆರಿಕದ ದೂತಾವಾಸದ ಅಧಿಕಾರಿಯನ್ನು ಕರೆಸಿಕೊಂಡು ಪ್ರತಿಭಟನೆ ಸಲ್ಲಿಸಿತ್ತು.
ಭಾರತದ ಆಂತರಿಕ ವ್ಯವಹಾರದಲ್ಲಿ ನಿಮ್ಮ ಮೂಗು ತೂರಿಸುವಿಕೆ ಸರಿಯಲ್ಲ ಎಂದು ನೇರವಾಗಿ ಹೇಳಿತ್ತು. ಅದಕ್ಕೆ ಬುಧವಾರ ಅಮೆರಿಕ ಪ್ರತಿಕ್ರಿಯಿಸಿದೆ.