ಹೋರ್ಮುಜ್‌ ನಮ್ಮ ನಿಯಂತ್ರಣಕ್ಕೆ, ನಮಗೆ 20% ಟೋಲ್‌ ಪಾವತಿಸಿ : ಟ್ರಂಪ್‌

KannadaprabhaNewsNetwork |  
Published : Jul 14, 2026, 03:00 AM ISTUpdated : Jul 14, 2026, 04:22 AM IST
Donald Trump

ಸಾರಾಂಶ

ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನತೆ ತೀವ್ರಗೊಂಡಿರುವ ನಡುವೆಯೇ, ಹೋರ್ಮುಜ್‌ ಜಲಸಂಧಿಯ ಮೇಲೆ ಅಮೆರಿಕ ನಿಯಂತ್ರಣ ಸಾಧಿಸಲಿದೆ. ವಿಶ್ವದ ಪ್ರಮುಖ ಹಡಗು ಮಾರ್ಗಗಳಲ್ಲಿ ಒಂದನ್ನು ಸುರಕ್ಷಿತಗೊಳಿಸಿದ್ದಕ್ಕಾಗಿ ನಮಗೆ ಹಡಗುಗಳು ಶೇ.20ರಷ್ಟು ಟೋಲ್ ಪಾವತಿಸಬೇಕು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸೋಮವಾರ ಹೇಳಿಕೆ ನೀಡಿದ್ದಾರೆ.

ವಾಷಿಂಗ್ಟನ್‌ :  ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನತೆ ತೀವ್ರಗೊಂಡಿರುವ ನಡುವೆಯೇ, ಹೋರ್ಮುಜ್‌ ಜಲಸಂಧಿಯ ಮೇಲೆ ಅಮೆರಿಕ ನಿಯಂತ್ರಣ ಸಾಧಿಸಲಿದೆ. ವಿಶ್ವದ ಪ್ರಮುಖ ಹಡಗು ಮಾರ್ಗಗಳಲ್ಲಿ ಒಂದನ್ನು ಸುರಕ್ಷಿತಗೊಳಿಸಿದ್ದಕ್ಕಾಗಿ ನಮಗೆ ಹಡಗುಗಳು ಶೇ.20ರಷ್ಟು ಟೋಲ್ ಪಾವತಿಸಬೇಕು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸೋಮವಾರ ಹೇಳಿಕೆ ನೀಡಿದ್ದಾರೆ.

ಫಾಕ್ಸ್‌ ನ್ಯೂಸ್‌ಗೆ ಸಂದರ್ಶನ ನೀಡಿದ ಅವರು, ‘ನಾವು ಜಲಸಂಧಿಯನ್ನು ಉಳಿಸಿಕೊಳ್ಳಲಿದ್ದೇವೆ ಮತ್ತು ಬಹುಶಃ ಅದನ್ನು ನಾವೇ ನಡೆಸುತ್ತೇವೆ. ನಾವು ಹೋರ್ಮುಜ್‌ನ ರಕ್ಷಕರಾಗುತ್ತೇವೆ. ನಮ್ಮನ್ನು ಜಲಸಂಧಿಯ ರಕ್ಷಕ ದೇವತೆ (ಏಂಜೆಲ್) ಎಂದು ಕರೆಯಬಹುದು. ಅದಕ್ಕಾಗಿ ನಮಗೆ ಮರುಪಾವತಿ ಮಾಡಬೇಕು’ ಎಂದು ತಿಳಿಸಿದ್ದಾರೆ. ಇರಾನ್‌ ಹೋರ್ಮುಜ್‌ ಅನ್ನು ಬಂದ್‌ ಮಾಡುವುದಾಗಿ ಘೋಷಿಸಿದ ಮರುದಿನವೇ ಟ್ರಂಪ್‌ ಅವರಿಂದ ಈ ಹೇಳಿಕೆ ಬಂದಿದೆ. ಇದು ಜಲಸಂಧಿಯ ನಿಯಂತ್ರಣಕ್ಕಾಗಿ ಎರಡೂ ದೇಶಗಳ ನಡುವೆ ಮತ್ತೊಂದು ಸುತ್ತಿನ ಭೀಕರ ಸಮರಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ.

ಅಮೆರಿಕ ಜತೆಗಿನ ಒಪ್ಪಂದ ಜಾರಿ ಮಾಡಲ್ಲ: ಇರಾನ್‌

ಟೆಹ್ರಾನ್: ಅಮೆರಿಕವು ಕದನ ವಿರಾಮ ಒಪ್ಪಂದವನ್ನು ಬಹಿರಂಗವಾಗಿ ಉಲ್ಲಂಘಿಸುತ್ತಿದೆ ಎಂದು ಸೋಮವಾರ ಆರೋಪಿಸಿರುವ ಇರಾನ್‌, ಇತ್ತೀಚೆಗೆ ಮಾಡಿಕೊಂಡ ತಿಳಿವಳಿಕೆ ಒಪ್ಪಂದವನ್ನು (ಎಂಒಯು) ಜಾರಿಗೆ ತರುವುದಿಲ್ಲ ಎಂದು ಘೋಷಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ, ‘ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಸಂಬಂಧಗಳು ಅನಿಶ್ಚಿತತೆಯ ಅವಧಿಯನ್ನು ಪ್ರವೇಶಿಸಿವೆ. ಅಮೆರಿಕ ತನ್ನ ಬದ್ಧತೆಗಳನ್ನು ಎತ್ತಿಹಿಡಿಯಲು ವಿಫಲವಾಗಿವೆ. ನಾವು ಒಪ್ಪಂದ ಜಾರಿ ಮಾಡಲ್ಲ’ ಎಂದರು.

ಇರಾನ್‌ ಅರೆಸೇನಾಪಡೆ ಐಆರ್‌ಜಿಸಿ, ಐಎಂಆರ್‌ಸಿಗೆ ಬ್ರಿಟನ್‌ ನಿಷೇಧ

ಲಂಡನ್‌: ಇರಾನ್‌ನ ಅರೆಸೇನಾಪಡೆಯಾಗಿರುವ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ (ಐಆರ್‌ಜಿಸಿ) ಮತ್ತು ಇರಾನ್‌ ಬೆಂಬಲಿತ ಐಎಂಆರ್‌ಸಿಯನ್ನು ನಿಷೇಧಿಸುವುದಾಗಿ ಬ್ರಿಟನ್‌ ಘೋಷಿಸಿದೆ.ತಮ್ಮ ದೇಶದಲ್ಲಿ ಯಹೂದಿ ನೆಲೆಗಳ ಮೇಲಿನ ಸರಣಿ ದಾಳಿಗಳ ಹಿಂದೆ ಇರಾನ್‌ ಬೆಂಬಲಿತ ಸಂಘಟನೆಗಳ ಕೈವಾಡ ಇರುವ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಬ್ರಿಟನ್‌ ಸರ್ಕಾರ ಸೋಮವಾರ ಹೇಳಿದೆ.

‘ಬ್ರಿಟನ್‌ನಲ್ಲಿ 7 ದಾಳಿಗಳನ್ನು ಮಾಡಿರುವುದಾಗಿ ಐಎಂಆರ್‌ಸಿ ಹೇಳಿದೆ. ಅದರ ಹಿಂದಿರುವುದು ಐಆರ್‌ಜಿಸಿಯ ಕುದ್ಸ್‌ ಪಡೆ’ ಎಂದು ಭದ್ರತಾ ಸಚಿವೆ ಏಂಜಲಾ ಈಗಲ್ ಹೇಳಿದ್ದಾರೆ.

ಯೆಮೆನ್‌ ಏರ್ಪೋರ್ಟ್‌ ಮೇಲೆ ಸೌದಿ ದಾಳಿ

ಕೈರೋ: ಯೆಮೆನ್‌ ರಾಜಧಾನಿ ಸನಾದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಸೋಮವಾರ ದಾಳಿಯಾಗಿದೆ. ಈ ದಾಳಿಯನ್ನು ಸೌದಿ ಅರೇಬಿಯಾ ನಡೆಸಿದೆ ಎಂದು ಏರ್ಪೋರ್ಟ್‌ನ ನಿಯಂತ್ರಣ ಹೊಂದಿರುವ ಹೌತಿ ಬಂಡುಕೋರರು ಆರೋಪಿಸಿದ್ದಾರೆ.ಈ ಬಗ್ಗೆ ಹೌತಿ ವಕ್ತಾರ ಬ್ರಿಗೇಡಿಯರ್ ಜ. ಯಹ್ಯಾ ಸರೀ ಪ್ರತಿಕ್ರಿಯಿಸಿದ್ದು, ‘ಸನಾ ಏರ್ಪೋರ್ಟ್‌ ಮೇಲೆ ಸೌದಿ ದಾಳಿ ಮಾಡಿದೆ. 

ಈ ದಾಳಿಗೆ ತಕ್ಕ ಉತ್ತರ ನೀಡಲಾಗುತ್ತದೆ. ದಾಳಿಕೋರರಿಗೆ ಶಿಕ್ಷೆಯಾಗುತ್ತದೆ’ ಎಂದು ಟೆಲಿಗ್ರಾಂನಲ್ಲಿ ಎಚ್ಚರಿಕೆ ನೀಡಿದ್ದಾನೆ. ದಾಳಿ ಬೆನ್ನಲ್ಲೇ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಜನರನ್ನು ಖಾಲಿ ಮಾಡುವಂತೆ ಆದೇಶಿಸಲಾಗಿದೆ.ಪ್ರಸ್ತುತ ಸಂಘರ್ಷದ ವಲಯದಲ್ಲಿರುವ ಈ ವಿಮಾನ ನಿಲ್ದಾಣವು ಹೌತಿ ಬಂಡುಕೋರರ ನಿಯಂತ್ರಣದಲ್ಲಿದೆ. ಯೆಮನ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಸೌದಿ ನೇತೃತ್ವದ ಸಂಘಟನೆಯು ಇರಾನ್ ಬೆಂಬಲಿತ ಹೌತಿ ಬಂಡುಕೋರರ ವಿರುದ್ಧ ಹೋರಾಡುತ್ತಿದೆ. ಇರಾನ್‌ನ ವಿಮಾನ ಇಳಿಯುವುದನ್ನು ತಡೆಯಲು ರನ್‌ವೇ ಮೇಲೆ ಈ ದಾಳಿ ಮಾಡಲಾಗಿದೆ ಎನ್ನಲಾಗುತ್ತಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಅಮೆರಿಕ-ಇರಾನ್‌ ನಡುವೆ ಮತ್ತೊಮ್ಮೆ ಭೀಕರ ಯುದ್ಧ : ಹೋರ್ಮುಜ್‌ ಬಂದ್‌
ಟ್ರಂಪ್ ಆಪ್ತ ಲಿಂಡ್ಸೆ ಗ್ರಹಾಂ ನಿಧನ