;Resize=(412,232))
ಟೆಲ್‌ಅವೀವ್: ಇರಾನ್‌ನ ಸರ್ವೋಚ್ಚ ಧಾರ್ಮಿಕ ನಾಯಕನನ್ನು ಕುಳಿತ ಸ್ಥಳದಲ್ಲೇ ಹತ್ಯೆಗೈದ ಅಮೆರಿಕ- ಇಸ್ರೇಲ್ ಸೇನೆ ಇದಕ್ಕಾಗಿ ಹಲವು ತಿಂಗಳಿನಿಂದ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಇದರ ಜೊತೆಗೆ ಖಮೇನಿಯ ಎಲ್ಲಾ ಆಪ್ತರು ಒಂದೆಡೆ ಸಭೆ ಸೇರುವ ರಹಸ್ಯ ಮಾಹಿತಿಯೊಂದು ಕಡೆಗಳಿಗೆಯಲ್ಲಿ ಸಿಗುತ್ತಲೇ ದಾಳಿಯನ್ನೇ ಹಿಂದೂಡಿ ಏಕಕಾಲಕ್ಕೆ 30 ಬಾಂಬ್ ಬಳಸಿ ಹತ್ತಾರು ಜನರನ್ನು ಒಂದೇ ಏಟಿಗೆ ಮುಗಿಸಲಾಯಿತು ಎಂದು ಮೂಲಗಳು ತಿಳಿಸಿವೆ.ಈ ನಡುವೆ ಖಮೇನಿ ಸಭೆ ನಡೆಸುತ್ತಿದ್ದ ಮನೆಯ ಮೇಲೆ ನಡೆಸಿದ ಬಾಂಬ್ ದಾಳಿಯ ವಿಡಿಯೋವನ್ನು ಇಸ್ರೇಲಿ ಸೇನೆ ಭಾನುವಾರ ಹಂಚಿಕೊಂಡಿದ್ದು ಅದು ದಾಳಿಯ ತೀವ್ರತೆಯನ್ನು ತೋರಿಸುವಲ್ಲಿ ಯಶಸ್ವಿಯಾಗಿದೆ.
ಪರಮಾಣು ಒಪ್ಪಂದಕ್ಕೆ ಸಹಿ ಹಾಕುವ ಕುರಿತು ಇರಾನ್ ಜೊತೆಗೆ ಒಂದೆಡೆ ಸಭೆ ನಡೆಸುತ್ತಿದ್ದ ಅಮೆರಿಕ, ಮತ್ತೊಂದೆಡೆ ಹಲವು ತಿಂಗಳಿನಿಂದ ಖಮೇನಿ ಚಲನವಲನದ ಮೇಲೆ ನಿಗಾ ಇಟ್ಟಿತ್ತು. ಇದರ ಮಾಹಿತಿ ಇದ್ದ ಖಮೇನಿ ಹಲವು ತಿಂಗಳಿಂದ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಕೆಲ ತಿಂಗಳಿಂದ ಆತ ತನ್ನ ಬಿಗಿಭದ್ರತೆಯ ಸುರಕ್ಷಿತ ಮನೆಯಲ್ಲೇ ಇದ್ದ. ಈ ಮಾಹಿತಿ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಮತ್ತು ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ಬಳಿ ಇತ್ತು.
ಹೀಗಾಗಿ ಶನಿವಾರ ಸಂಜೆ ಖಮೇನಿ ಮನೆ ಮೇಲೆ ದಾಳಿಗೆ ಅಮೆರಿಕ ಸಿದ್ಧತೆ ನಡೆಸಿತ್ತು. ಈ ನಡುವೆ ಖಮೇನಿ ತನ್ನೆಲ್ಲಾ ಆಪ್ತರ ಜೊತೆಗೆ ಶನಿವಾರ ಬೆಳಗ್ಗೆ ಸಭೆ ಆಯೋಜಿಸಿದ್ದ ರಹಸ್ಯ ಮಾಹಿತಿಯೊಂದು ಅಮೆರಿಕದ ಕಿವಿಗ ಬಿದ್ದಿತ್ತು. ಪ್ರತಿದಾಳಿಗೆ ರಣತಂತ್ರ ರೂಪಿಸಲು ಕರೆಯಲಾಗಿದ್ದ ಸಭೆಗೆ ಸರ್ಕಾರ, ಸೇನೆಯ ಹಿರಿಯರೆಲ್ಲಾ ಭಾಗವಹಿಸುವುದು ಖಚಿತವಾಗಿತ್ತು.
ಟೆಹರಾನ್‌ನ ಅಂಡರ್‌ಗ್ರೌಂಡ್ ಬಂಕರ್ ನಿವಾಸ ಎಂದೇ ಕರೆಯಲ್ಪಡುವ ಬೈತ್ ರಹಬರಿಯಲ್ಲಿ ಸಭೆ ನಡೆವ ಮಾಹಿತಿಯನ್ನು ಅಮೆರಿಕ, ಇಸ್ರೇಲ್ ಜೊತೆ ಹಂಚಿಕೊಂಡಿತ್ತು. ಹೀಗಾಗಿ ದಾಳಿಯ ಪ್ಲ್ಯಾನ್ ಅನ್ನೇ ಬದಲಾಯಿಸಿದ ಇಸ್ರೇಲ್ ಶನಿವಾರ ಸಂಜೆ ಬದಲು ಬೆಳಗ್ಗೆಯೇ ಉಪಗ್ರಹದ ನೆರವು ಪಡೆದು ವಿಮಾನದ ಮೂಲಕ ಖಮೇನಿ ಮತ್ತಿತರರು ಸಭೆ ನಡೆಸುತ್ತಿದ್ದ ಸ್ಥಳಕ್ಕೆ ಕರಾರುವಕ್ಕಾದ ದಾಳಿ ನಡೆಸಿತು. ದಾಳಿಯ ತೀವ್ರತೆಗೆ ಇಡೀ ಕಟ್ಟಡ ಸಮುಚ್ಛಯ ಧ್ವಂಸಗೊಂಡು ಒಳಗಿದ್ದವರೆಲ್ಲಾ ಕ್ಷಣಾರ್ಧದಲ್ಲಿ ಸಾವನ್ನಪ್ಪಿದ್ದರು ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಖಮೇನಿ ನಿವಾಸದಲ್ಲಿ ಆಳವಾದ ಎರಡು ಬಂಕರ್‌ಗಳಿದ್ದು, ದಾಳಿ ವೇಳೆ ಆತ ಬಂಕರ್‌ನಲ್ಲಿರಲಿಲ್ಲ. ಹೀಗಾಗಿ ಇಸ್ರೇಲ್ ಹಾರಿಸಿದ ಕ್ಷಿಪಣಿ ಹಾಗೂ ಬಾಂಬ್ ದಾಳಿಗೆ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇಲ್ಲವಾದರೆ ಅಮೆರಿಕದ ವಿಶೇಷ ಬಂಕರ್ ವಿನಾಶಕ ಬಾಂಬ್‌ಗಳನ್ನು ಬಳಸಬೇಕಿತ್ತು ಎನ್ನಲಾಗಿದೆ.
ಅಯಾತೊಲ್ಲಾ ಸರ್ವೋಚ್ಚ ಏಕೆ?
ಟೆಹ್ರಾನ್: ವಿಶ್ವಾದ್ಯಂತ ಇರುವ 30 ಕೋಟಿ ಶಿಯಾ ಮುಸಲ್ಮಾನರ ಸರ್ವೋಚ್ಚ ಧರ್ಮಗುರು ಎಂದು ಅಯಾತೊಲ್ಲಾರನ್ನು ಪರಿಗಣಿಸಲಾಗುತ್ತದೆ. ಇವರು ಇಸ್ಲಾಮಿಕ್ ನ್ಯಾಯಶಾಸ್ತ್ರ, ಧರ್ಮಶಾಸ್ತ್ರ, ನೀತಿಶಾಸ್ತ್ರ ಮತ್ತು ಷರಿಯಾ ಕಾನೂನುಗಳ ಪರಿಣಿತರಾಗಿರುತ್ತಾರೆ. ಆದರೆ 1979ರಲ್ಲಿ ಅಯಾತೊಲ್ಲಾ ಆಗಿದ್ದ ರುಹೊಲ್ಲಾ ಖೊಮೇನಿ, ಇರಾನ್ ಆಡಳಿತವನ್ನು ತಮ್ಮ ಕೈವಶ ಮಾಡಿಕೊಂಡರು. ಅದು ಮುಂದುವರೆದುಕೊಂಡು ಬಂದಿದೆ.
ಅಧ್ಯಕ್ಷರಿರುವ ಹೊರತಾಗಿಯೂ ಇರಾನ್ ಆಡಳಿತದಲ್ಲಿ ಇವರಿಗೆ ಬಲವಾದ ಹಿಡಿತವಿರುತ್ತದೆ. ಸಚಿವರ ನೇಮಕ ಇವರ ಆದೇಶಾನುಸಾರವೇ ಆಗುವುದು. ಸೇನೆಯ ಜತೆ ರೆವಲ್ಯೂಷ್ನರಿ ಗಾರ್ಡ್(ಐಆರ್‌ಜಿಸಿ) ಎಂಬ ಪಡೆಯೂ ಅಯಾತೊಲ್ಲಾಗಳ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ದೇಶವನ್ನು ಯುದ್ಧಕ್ಕೆ ದೂಡುವ ಅಥವಾ ಶಾಂತಿಯತ್ತ ಕರೆದೊಯ್ಯುವ ನಿರ್ಧಾರವೂ ಇವರದ್ದೇ ಆಗಿದೆ.
ಅಯತೋಲ್ಲಾ ಅರಾಫಿಗೆ ಇರಾನ್ ಹಂಗಾಮಿ ಸರ್ವೋಚ್ಚ ನಾಯಕ ಪಟ್ಟ
ಟೆಹ್ರಾನ್: ಖಮೇನಿ ಹತ್ಯೆಯ ಬೆನ್ನಲ್ಲೇ, ಅವರ ತಂಡದ ಪ್ರಮುಖ ಧಾರ್ಮಿಕ ನಾಯಕ ಅಯತೋಲ್ಲಾ ಅಲಿರೆಜಾ ಅರಾಫಿಯನ್ನು ದೇಶದ ಹಂಗಾಮಿ ಸರ್ವೋಚ್ಚ ಧಾರ್ಮಿಕ ನಾಯಕನಾಗಿ ನೇಮಿಸಲಾಗಿದೆ. ಹೊಸ ನಾಯಕನ ಆಯ್ಕೆವರೆಗೂ ಅರಾಫಿ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.
ತಮ್ಮ ಮೇಲೆ ಅಮೆರಿಕ ದಾಳಿ ಖಚಿತವಾಗುತ್ತಲೇ, ತಾವು ಸತ್ತರೆ ಏನು ಮಾಡಬೇಕೆಂದು ಖಮೇನಿ ನಿರ್ಧರಿಸಿದ್ದರು. ಈ ಸಂಬಂಧ ಅವರು ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿಯಾಗಿರುವ ಅಲಿ ಲಾರಿಜಾನಿಯನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ವರದಿಯಾಗಿತ್ತು. ಆದರೆ ಅವರು ಸುನ್ನಿ ಪಂಡಗಕ್ಕೆ ಸೇರಿದವರು. ಹೀಗಾಗಿ ಶಿಯಾ ಪಂಗಡದವರಾದ ಅರಾಫಿಗೆ ಈ ಹುದ್ದೆ ಒಲಿದಿದೆ,