ವಾಷಿಂಗ್ಟನ್/ನವದೆಹಲಿ: ಭಾರತ ಸೇರಿದಂತೆ ಹಲವು ದೇಶಗಳು ಪರಕೀಯ ದ್ವೇಷಿಗಳಾಗಿವೆ. ಹೀಗಾಗಿಯೇ ಅವು ವಲಸಿಗರನ್ನು ಸ್ವಾಗತಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಅಲ್ಲದೆ, ಭಾರತದ ಆರ್ಥಿಕತೆ ಹೊಯ್ದಾಡುತ್ತಿದೆ, ಚೆನ್ನಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದೂ ದೂಷಿಸಿದ್ದಾರೆ.
ಇದಕ್ಕೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿರುಗೇಟು ನೀಡಿದ್ದು, ಭಾರತ ಯಾವತ್ತಿಗೂ ಮುಕ್ತ ದೇಶವಾಗಿದೆ. ವೈವಿಧ್ಯಮಯ ಸಮಾಜಗಳಿಂದ ಜನರನ್ನು ಸ್ವಾಗತಿಸುತ್ತಿದೆ ಎಂದಿದ್ದಾರೆ. ವಿವಾದ ದೊಡ್ಡದಾದ ಹಿನ್ನೆಲೆಯಲ್ಲಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯೆರ್ರೆ ಸ್ಪಷ್ಟನೆ ನೀಡಿದ್ದು, ವಲಸಿಗರಿಂದ ಅಮೆರಿಕ ಗಳಿಸಿದ ಶಕ್ತಿಯನ್ನು ಒತ್ತಿ ಹೇಳುವ ವಿಶಾಲ ಮನೋಭಾವದಲ್ಲಿ ಬೈಡೆನ್ ಹೇಳಿಕೆ ನೀಡಿದ್ದಾರೆ. ಭಾರತ ಹಾಗೂ ಜಪಾನ್‌ನಂತಹ ದೇಶಗಳ ಜತೆ ರಾಜತಾಂತ್ರಿಕ ಸಂಬಂಧವನ್ನು ವೃದ್ಧಿ ಮಾಡುವ ಮುಖ್ಯ ಗಮನ ಅವರಿಗೆ ಇದೆ ಎಂದಿದ್ದಾರೆ.ಏನಿದು ಬೈಡೆನ್ ಹೇಳಿಕೆ?:
ಭಾರತ ತಿರುಗೇಟು
ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ಹೇಳಿಕೆಗೆ ಭಾರತದಲ್ಲಿ ತಿರುಗೇಟು ನೀಡಿರುವ ವಿದೇಶಾಂಗ ಸಚಿವ ಜೈಶಂಕರ್, ಭಾರತ ಎಂದಿಗೂ ವಿಶಿಷ್ಟ ದೇಶ. ವಿಶ್ವದ ಇತಿಹಾಸದಲ್ಲಿ ಹೇಳುವುದಾದರೆ, ನಮ್ಮದು ಮುಕ್ತ ಸಮಾಜ. ವಿಭಿನ್ನ ಜನರು, ವಿಭಿನ್ನ ಸಮಾಜದಿಂದ ಭಾರತಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ.