ಹಿಂದೂಗಳ ರಕ್ಷಣೆಗೆ ಬಾಂಗ್ಲಾದೇಶ 2 ಕ್ರಮ

KannadaprabhaNewsNetwork |  
Published : Aug 14, 2024, 01:16 AM IST
ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ, ಶಕ್ತಿ ಪೀಠಗಳಲ್ಲಿ ಒಂದಾದ ಢಾಕೇಶ್ವರಿ ದೇವಸ್ಥಾನಕ್ಕೆ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್‌ ಯೂನಸ್‌ ಮಂಗಳವಾರ ಭೇಟಿ ನೀಡಿದರು. ಹಿಂದೂಗಳ ಜತೆ ಸಭೆ ನಡೆಸಿ, ರಕ್ಷಣೆ ಕೊಡುವುದಾಗಿ ಭರವಸೆ ನೀಡಿದರು. | Kannada Prabha

ಸಾರಾಂಶ

ಶೇಖ್‌ ಹಸೀನಾ ಪ್ರಧಾನಿ ಹುದ್ದೆ ತೊರೆದು ದೇಶದಿಂದ ಪಲಾಯನಗೈದ ಬಳಿಕ ಬಾಂಗ್ಲಾದೇಶದಲ್ಲಿ ಹಿಂದೂ ವಿರೋಧಿ ಕೃತ್ಯಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಿಂದೂಗಳ ರಕ್ಷಣೆಗೆ ಮುಹಮ್ಮದ್‌ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ ಮಂಗಳವಾರ 2 ಕ್ರಮ ಕೈಗೊಂಡಿದೆ.

ಪಿಟಿಐ ಢಾಕಾ

ಶೇಖ್‌ ಹಸೀನಾ ಪ್ರಧಾನಿ ಹುದ್ದೆ ತೊರೆದು ದೇಶದಿಂದ ಪಲಾಯನಗೈದ ಬಳಿಕ ಬಾಂಗ್ಲಾದೇಶದಲ್ಲಿ ಹಿಂದೂ ವಿರೋಧಿ ಕೃತ್ಯಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಿಂದೂಗಳ ರಕ್ಷಣೆಗೆ ಮುಹಮ್ಮದ್‌ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ ಮಂಗಳವಾರ 2 ಕ್ರಮ ಕೈಗೊಂಡಿದೆ. ಖುದ್ದು ಯೂನಸ್ ಅವರು ಶಕ್ತಿ ಪೀಠಗಳಲ್ಲಿ ಒಂದಾದ ಢಾಕೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂದೂಗಳ ರಕ್ಷಣೆಗೆ ತಾವು ಬದ್ಧ ಎಂದು ಸಾರಿ ನೈತಿಕ ಸ್ಥೈರ್ಯ ತುಂಬಿದ್ದಾರೆ. ಇನ್ನೊಂದೆಡೆ ಇಂಥ ದಾಳಿಗಳನ್ನು ತಡೆಯಲು ಬಾಂಗ್ಲಾ ಸರ್ಕಾರ ಹಿಂದೂಗಳಿಗೆ ವಿಶೇಷ ಸಹಾಯವಾಣಿ ಆರಂಭಿಸಿದೆ.

ಶೇಖ್‌ ಹಸೀನಾ ಸರ್ಕಾರದ ಪತನದ ನಂತರ ಹಿಂದೂ ದೇಗುಲಗಳು ಹಾಗೂ ಆಸ್ತಿಪಾಸ್ತಿಗಳ ಮೇಲೆ ಪುಂಡರು ಅವ್ಯಾಹತ ದಾಳಿ ಮಾಡಿದ್ದರು. ಇದರಿಂದ ಬೆಚ್ಚಿದ ಹಿಂದೂಗಳು ಭಾರತಕ್ಕೆ ವಲಸೆ ಹೋಗುವ ಯೋಚನೆ ಮಾಡಿದ್ದರು.

ದಾಳಿಕೋರರ ಮೇಲೆ ಕ್ರಮ- ಯೂನಸ್‌:

ಹಿಂದೂಗಳಲ್ಲಿನ ಆತಂಕ ದೂರ ಮಾಡಲು ಮಧ್ಯಂತರ ಸರ್ಕಾರದ ಸಲಹೆಗಾರ ಮುಹಮ್ಮದ್‌ ಯೂನಸ್‌ ಮಂಗಳವಾರ ಢಾಕೇಶ್ವರಿ ದೇಗುಲಕ್ಕೆಭೇಟಿ ನೀಡಿದರು. ಈ ವೇಳೆ ಅವರು ಮಾತನಾಡಿ, ‘ಹಿಂದೂಗಳ ರಕ್ಷಣೆ ಮಾಡುತ್ತೇವೆ. ನಾವೆಲ್ಲ ಒಂದೇ ಕುಟುಂಬ ಇದ್ದಂತೆ. ಯಾರ ಬಗ್ಗೆಯೂ ತಾರತಮ್ಯ ಮಾಡುವುದಿಲ್ಲ. ಹಿಂದೂಗಳ ಮೇಲೆ ದಾಳಿ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ’ ಎಂದು ಭರವಸೆ ನೀಡಿದರು.

ಅಲ್ಲದೆ, ‘ನಮಗೆಲ್ಲರಿಗೂ ಇರುವ ಹಕ್ಕುಗಳು ಒಂದೇ. ನಮ್ಮನ್ನು ವಿಭಜಿಸಬೇಡಿ. ದೇಶದಲ್ಲಿ ಸೃಷ್ಟಿಯಾಗಿರುವ ಅರಾಜಕತೆಗೆ ಸಾಂಸ್ಥಿಕ ಅವನತಿಯೇ ಕಾರಣ. ತಾಳ್ಮೆಯಿಂದ ನಮ್ಮ ಆಡಳಿತವನ್ನು ನೋಡಿ ನಂತರ ಆ ಬಗ್ಗೆ ವಿಮರ್ಶೆ ಮಾಡಿ. ಒಂದು ವೇಳೆ ನಾನು ವಿಫಲನಾದರೆ ನಂತರ ಟೀಕಿಸಿ’ ಎಂದರು.

ಸಹಾಯವಾಣಿ ಆರಂಭ:

ಈ ನಡುವೆ, ಹಿಂದೂ ಸಮುದಾಯಕ್ಕೆ ಸೇರಿದ ದೇವಸ್ಥಾನ, ಮನೆ, ಆಸ್ತಿಗಳ ಮೇಲಿನ ದಾಳಿಗಳು ಹೆಚ್ಚಾಗುತ್ತಿದ್ದಂತೆ ಅವುಗಳ ರಕ್ಷಣೆಗೆ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಹಿಂದೂಗಳು ಸೇರಿದಂತೆ ಬಾಂಗ್ಲಾದ ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆದರೆ ಅಥವಾ ದಾಳಿಯ ಸುಳಿವು ಸಿಕ್ಕರೆ 01766-843809 ಗೆ ಕರೆ ಮಾಡಿ ಅಥವಾ ಈ ಸಂಖ್ಯೆಗೆ ಸಂದೇಶ ಕಳಿಸಿ ಎಂದು ಬಾಂಗ್ಲಾ ಸರ್ಕಾರ ಕೋರಿದೆ.

--

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ ಯಹೂದಿಗಳ ನರಮೇಧ!
ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌