ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಅಕ್ರಮವಾಗಿ ನಿವೇಶನ ಪಡೆದ ಆರೋಪ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ.

ಬೆಂಗಳೂರು : ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಅಕ್ರಮವಾಗಿ ನಿವೇಶನ ಪಡೆದ ಆರೋಪ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ.

ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ ಸೇರಿ ನಾಲ್ವರು ಆರೋಪಿಗಳ ವಿರುದ್ಧ ಲೋಕಾಯುಕ್ತ ತನಿಖಾಧಿಕಾರಿ ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ ಅನ್ನು ನಗರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂಗೀಕರಿಸಿದೆ.

ಲೋಕಾಯುಕ್ತದ ಬಿ ರಿಪೋರ್ಟ್‌ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ಕುರಿತು ಸುದೀರ್ಘ ವಾದ-ಪ್ರತಿವಾದ ಆಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಬುಧವಾರ ಪ್ರಕಟಿಸಿದರು.

ಆರೋಪಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ ಮತ್ತು ಭೂಮಿಯ ಮಾಲೀಕ ದೇವರಾಜು ವಿರುದ್ಧದ ಆರೋಪಗಳ ಸಾಬೀತಿಗೆ ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿ ಲೋಕಾಯುಕ್ತ ತನಿಖಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಬಿ ರಿಪೋರ್ಟ್‌ ಅನ್ನು ನ್ಯಾಯಾಲಯ ಒಪ್ಪಿಕೊಂಡಿತು.

ನ್ಯಾಯಾಂಗ ನಿಂದನೆ ಅರ್ಜಿ ವಜಾ:

ದೂರುದಾರ ಸ್ನೇಹಮಯಿ ಕೃಷ್ಣ ಲೋಕಾಯುಕ್ತ ತನಿಖಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಕೋರಿ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು. ಇದೇ ವೇಳೆ ಈ ಪ್ರಕರಣದಲ್ಲಿ ಸೀಮಿತ ವ್ಯಾಪ್ತಿವರೆಗೆ ಮಧ್ಯಪ್ರವೇಶಿಸಲು ಜಾರಿ ನಿರ್ದೇಶನಾಲಯ(ಇ.ಡಿ.) ಹಕ್ಕು ಹೊಂದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮುಚ್ಚಿದ ಲಕೋಟೆಯಲ್ಲಿರುವ ಕರಡು ತನಿಖಾ ಅಂತಿಮ ವರದಿ ಮತ್ತು ಸಿ.ಡಿ.ದಾಖಲೆಗಳನ್ನು ಸಂಬಂಧಿತ ತನಿಖಾಧಿಕಾರಿಗೆ ನೀಡಲು ಕಚೇರಿಗೆ ನಿರ್ದೇಶಿಸಲಾಗಿದೆ. ಈ ಪ್ರಕರಣ ಸಂಬಂಧ ಅಂತಿಮ ವರದಿ ಸಲ್ಲಿಸಲು ಲೋಕಾಯುಕ್ತ ತನಿಖಾಧಿಕಾರಿಗೆ ಸೂಚಿಸಿದ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಫೆ.9ಕ್ಕೆ ಮುಂದೂಡಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರು ಬದಲಿ ನಿವೇಶನದ ಹೆಸರಿನಲ್ಲಿ ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ, ಬಾವಮೈದುನ ಮಲ್ಲಿಕಾರ್ಜುನಸ್ವಾಮಿ, ದೇವರಾಜು ಹಾಗೂ ಇತರರ ವಿರುದ್ಧ ವಿಶೇಷ ತನಿಖಾ ದಳ(ಎಸ್ಐಟಿ) ಅಥವಾ ಬೇರೆ ಯಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ಆದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು 2024ರ ಆ.8ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ಇದರ ಬೆನ್ನಲ್ಲೇ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಇತರೆ ಆರೋಪಿಗಳ ವಿರುದ್ಧ ತನಿಖೆಗೆ ಅನುಮತಿಸಿದ್ದರು. ಇದನ್ನು ಸಿದ್ಧರಾಮಯ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್‌ ರಾಜ್ಯಪಾಲರ ಅನುಮತಿಯನ್ನು ಎತ್ತಿ ಹಿಡಿದಿತ್ತು. ಇದರ ಬೆನ್ನಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು. ಅದರಂತೆ ಲೋಕಾಯುಕ್ತ ಪೊಲೀಸರು 2024ರ ಸೆ.27ರಂದು ಎಫ್‌ಐಆರ್‌ ದಾಖಲಿಸಿದ್ದರು. ಈ ನಡುವೆ ಬಿ.ಎಂ.ಪಾವರ್ತಿ ಅವರು ಮುಡಾದಿಂದ ಪಡೆದಿದ್ದ 14 ಬದಲಿ ನಿವೇಶನಗಳನ್ನು ಮುಡಾಗೆ ಹಿಂದಿರುಗಿಸಿದ್ದರು.

ಮತ್ತೊಂದೆಡೆ ತನಿಖೆ ಆರಂಭಿಸಿದ್ದ ಲೋಕಾಯುಕ್ತ ಪೊಲೀಸರು, ಆರೋಪಿಗಳ ವಿಚಾರಣೆ ನಡೆಸಿದ್ದರು. ಬಳಿಕ ಆರೋಪ ಸಾಬೀತುಪಡಿಸಲು ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿ 2025ರ ಫೆ.20ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಈ ಬಿ ರಿಪೋರ್ಟ್‌ ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ಹಿನ್ನೆಲೆ:

ಮುಡಾದಿಂದ ಸಿಎಂ ಪತ್ನಿ ಅಕ್ರಮವಾಗಿ 14 ಸೈಟ್‌ ಪಡೆದಿದ್ದಾರೆ ಎಂದು ಸ್ನೇಹಮಯಿ ದೂರು

ಈ ಬಗ್ಗೆ ತನಿಖೆಗೆ ಜನಪ್ರತಿನಿಧಿ ಕೋರ್ಟ್‌ ಆದೇಶ. ತನಿಖೆ ನಡೆಸಿದ ಲೋಕಾ ವರದಿ ಸಲ್ಲಿಕೆ

ವರದಿಯಲ್ಲಿ ಸಿಎಂ, ಪತ್ನಿ ಪಾರ್ವತಿ ಸೇರಿ ನಾಲ್ವರಿಗೆ ಕ್ಲೀನ್‌. ಈ ವರದಿ ಇದೀಗ ಅಂಗೀಕಾರ

ಆದರೆ ಅಧಿಕಾರಿಗಳ ವಿರುದ್ಧ ವರದಿ ಶಿಫಾರಸಿನಂತೆ ತನಿಖೆ ಮುಂದುವರೆಸಲು ಅನುಮತಿ

ಪ್ರಕರಣ ಇಲ್ಲಿಗೇ ಬಿಡಲ್ಲ

ಇದು ಆರೋಪಿಗಳಿಗೆ ತಾತ್ಕಾಲಿಕ ರಿಲೀಫ್‌ ಅಷ್ಟೇ. ಕೋರ್ಟ್‌ ಯಾವ ಅಂಶಗಳ ಆಧಾರದ ಮೇಲೆ ಈ ಆದೇಶ ನೀಡಿದೆ ಎಂದು ಪರಿಶೀಲಿಸುತ್ತೇನೆ. ಯಾವುದೇ ಕಾರಣಕ್ಕೂ ಈ ಪ್ರಕರಣ ಇಲ್ಲಿಗೆ ಬಿಡುವುದಿಲ್ಲ. ಮುಂದೆ ಹೈಕೋರ್ಟಲ್ಲಿ ಪ್ರಶ್ನಿಸುತ್ತೇನೆ .

- ಸ್ನೇಹಮಯಿ ಕೃಷ್ಣ, ದೂರುದಾರ