ಸಾರಾಂಶ
ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆ ಬಗ್ಗೆ ಅವರಿಬ್ಬರ (ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್) ನಡುವೆ ಒಪ್ಪಂದ ಆಗಿದೆ ಎನ್ನುವುದಾದರೆ ನಾವೆಲ್ಲ ಯಾಕಿರಬೇಕು? ಅವರಿಬ್ಬರೇ ರಾಜಕಾರಣ ನಡೆಸಲಿ. ಬೇರೆಯವರು ಬೇಡವೇ?’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ‘ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆ ಬಗ್ಗೆ ಅವರಿಬ್ಬರ (ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್) ನಡುವೆ ಒಪ್ಪಂದ ಆಗಿದೆ ಎನ್ನುವುದಾದರೆ ನಾವೆಲ್ಲ ಯಾಕಿರಬೇಕು? ಅವರಿಬ್ಬರೇ ರಾಜಕಾರಣ ನಡೆಸಲಿ. ಬೇರೆಯವರು ಬೇಡವೇ?’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದ ಆಗಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ‘ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದ ಆಗಿರುವ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ದೆಹಲಿ ಹಾಗೂ ರಾಜ್ಯದಲ್ಲಿ ಇಬ್ಬರು-ಮೂವರನ್ನು ಕೇಳಿದ್ದೇನೆ. ಅಂತಹ ಯಾವುದೇ ಒಪ್ಪಂದ ಆಗಿಲ್ಲ ಎಂದಿದ್ದಾರೆ. ಶಿವಕುಮಾರ್ ಹೇಳಿಕೆಗೆ ಸಿದ್ದರಾಮಯ್ಯ ಅವರೂ ಯಾವುದೇ ಒಪ್ಪಂದ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ’ ಎಂದು ಹೇಳಿದರು.
ಒಂದು ವೇಳೆ ಅವರಿಬ್ಬರ ನಡುವೆಯೇ ಒಪ್ಪಂದ ಆಗಿದೆ ಎನ್ನುವುದಾದರೆ ನಾವೆಲ್ಲ ಯಾಕಿರಬೇಕು? ಅವರಿಬ್ಬರೇ ರಾಜಕಾರಣ ನಡೆಸಲಿ. ಬೇರೆಯವರು ಇರುವುದೇ ಬೇಡವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏನೇ ಆಗಿದ್ದರೂ ಹೈಕಮಾಂಡ್ ಅಂತಿಮವಾಗಿ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ನಾವು ಬದ್ಧವಾಗಿರುತ್ತೇವೆ. ನಾವು ಯಾರೂ ಹೈಕಮಾಂಡ್ ಅನ್ನು ಬಿಟ್ಟು ಹೋದವರಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದನ್ನು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದರು.
ನಮ್ಮಲ್ಲಿ ಯಾವುದೇ ಬಣ ಇಲ್ಲ: ಹಾಸನ ಸಮಾವೇಶದಲ್ಲಿ ಬಣ ರಾಜಕೀಯ ಎಂಬ ಪ್ರತಿಪಕ್ಷಗಳ ಆರೋಪಕ್ಕೆ, ಕೆಪಿಸಿಸಿ ಮತ್ತು ಸ್ವಾಭಿಮಾನಿಗಳ ಒಕ್ಕೂಟ ಒಟ್ಟಾಗಿ ಸಮಾವೇಶ ಆಯೋಜಿಸಿದೆ. ನಮ್ಮಲ್ಲಿ ಯಾವುದೇ ಬಣಗಳು ಇಲ್ಲ. ಬಿಜೆಪಿಯಲ್ಲಿ ಮೂರು ಬಣ ಮಾಡಿಕೊಂಡಿದ್ದಾರೆ. ಆದರೆ ನಮ್ಮಲ್ಲಿ ಅಂಥ ಸ್ಥಿತಿ ಇಲ್ಲ. ಬಿಜೆಪಿ ಮತ್ತು ಜೆಡಿಎಸ್‌ನವರು ನಮ್ಮನ್ನು ಜನಸಮುದಾಯದಿಂದ ಬೇರ್ಪಡಿಸಲು ಪ್ರಯತ್ನಿಸಿದರು. ಆದರೆ ಜನರೇ ಉಪ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದರು ಎಂದು ಹೇಳಿದರು.