ಲೋಕಸಭಾ ಚುನಾವಣೆ : ಜೆಡಿಎಸ್‌ಗೆ 2 ಸ್ಥಾನ ಜಯಿಸುವ ವಿಶ್ವಾಸ

| Published : May 10 2024, 01:35 AM IST / Updated: May 10 2024, 04:36 AM IST

JDS flag
ಲೋಕಸಭಾ ಚುನಾವಣೆ : ಜೆಡಿಎಸ್‌ಗೆ 2 ಸ್ಥಾನ ಜಯಿಸುವ ವಿಶ್ವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಮೈತ್ರಿಯೊಂದಿಗೆ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಜೆಡಿಎಸ್‌ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಪಕ್ಷದ ಮುಖಂಡರು ಹೊಂದಿದ್ದಾರೆ.

 ಬೆಂಗಳೂರು :  ಬಿಜೆಪಿ ಮೈತ್ರಿಯೊಂದಿಗೆ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಜೆಡಿಎಸ್‌ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಪಕ್ಷದ ಮುಖಂಡರು ಹೊಂದಿದ್ದಾರೆ.

ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೂ ಮಂಡ್ಯದಲ್ಲಿ ಜಯ ಖಚಿತ ಎಂದು ಮುಖಂಡರು ಹೇಳುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಜೊತೆಗೆ ಜಿಲ್ಲೆಯಲ್ಲಿ ಕಾರ್ಯಕರ್ತರ ಪಡೆ ದೊಡ್ಡದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಲೆ, ಬಿಜೆಪಿ ಕಾರ್ಯಕರ್ತರ ಬೆಂಬಲದಿಂದಾಗಿ ಕೋಲಾರ ಜೆಡಿಎಸ್‌ ತೆಕ್ಕೆಗೆ ಬರಲಿದೆ ಎಂದು ಬಲವಾಗಿ ನಂಬಿದ್ದಾರೆ.

ಆದರೆ, ಅನೇಕ ವರ್ಷಗಳಿಂದ ಜೆಡಿಎಸ್‌ ಭದ್ರಕೋಟೆ ಎನಿಸಿರುವ ಹಾಸನ ಈ ಬಾರಿ ಕೈ ತಪ್ಪುವ ಸಾಧ್ಯತೆ ಇದೆ ಎಂಬ ಆತಂಕವಿದೆ ಎನ್ನುವ ಮುಖಂಡರು, ಮೈತ್ರಿಗೆ ವಿರುದ್ಧವಾಗಿ ಕೆಲವರು ಕೆಲಸ ಮಾಡಿರುವುದು, ಮತದಾನಕ್ಕೂ ಮುನ್ನ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಕ್ಷೇತ್ರದಲ್ಲಿ ಹಂಚಿಕೆಯಾಗಿರುವುದು ಸೇರಿದಂತೆ ವಿವಿಧ ಕಾರಣದಿಂದಾಗಿ ಗೆಲುವು ಸುಲಭವಲ್ಲ. ಚುನಾವಣೆ ಬಳಿಕ ಪಕ್ಷವೇ ನಡೆಸಿದ ಲೆಕ್ಕಾಚಾರದಲ್ಲಿಯೂ ಸಹ ಹಾಸನ ಕ್ಷೇತ್ರದಲ್ಲಿ ಗೆಲುವು ಕಷ್ಟ ಎನ್ನಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಮುಖಂಡರು ವಿವರಿಸಿದರು.

ಇನ್ನು, ಮಂಡ್ಯದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ ಕಾರಣ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್‌ ನಿರ್ದೇಶನ ಮೇರೆಗೆ ಪಕ್ಷದ ನಾಯಕರು, ಕಾರ್ಯಕರ್ತರು ಒಗ್ಗೂಡಿ ಚುನಾವಣೆಯಲ್ಲಿ ಶ್ರಮವಹಿಸಿದ್ದಾರೆ. ಕುಮಾರಸ್ವಾಮಿ ಗೆದ್ದರೆ ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ ಎಂಬ ಮಾತುಗಳು ಮತದಾರರ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಮಂಡ್ಯದಲ್ಲಿ ಜೆಡಿಎಸ್‌ ಗೆಲುವು ನಿಶ್ಚಿತವೆಂದು ಪಕ್ಷದಲ್ಲಿನ ಬಹುತೇಕ ಮುಖಂಡರು ಹೇಳುತ್ತಾರೆ.