ಜಿಂದಾಲ್‌ಗೆ ಕಡಿಮೆ ಬೆಲೆಗೆ ಸಾವಿರಾರು ಎಕರೆ ಭೂಮಿ ನೀಡಿ ರಾಜ್ಯ ಸರ್ಕಾರ ಮತ್ತೊಂದು ಹಗರಣ

| Published : Aug 24 2024, 01:19 AM IST / Updated: Aug 24 2024, 05:13 AM IST

Siddaramaiah

ಸಾರಾಂಶ

ವಿರೋಧದ ಮಧ್ಯೆಯೂ ಜಿಂದಾಲ್‌ ಕಂಪನಿಗೆ ಸಾವಿರಾರು ಎಕರೆ ಪರಭಾರೆ ಮಾಡುವ ಮೂಲಕ ರಾಜ್ಯ ಸರ್ಕಾರ ಇನ್ನೊಂದು ದೊಡ್ಡ ಹಗರಣಕ್ಕೆ ಕೈ ಹಾಕಿದೆ ಎಂದು ವಿಧಾನಸಭೆಯ ಉಪ ನಾಯಕ, ಶಾಸಕ ಅರವಿಂದ ಬೆಲ್ಲದ ಆರೋಪಿಸಿದರು.

ಧಾರವಾಡ: ಮುಡಾ ಹಗರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯನವರು ಆ.29ರ ನಂತರ ಮುಖ್ಯಮಂತ್ರಿಗಳಾಗಿ ಇರುತ್ತಾರೋ, ಇಲ್ಲವೋ ಗೊತ್ತಿಲ್ಲ. ಇಂತಹ ಸಮಯದಲ್ಲಿ ವಿರೋಧದ ಮಧ್ಯೆಯೂ ಜಿಂದಾಲ್‌ ಕಂಪನಿಗೆ ಸಾವಿರಾರು ಎಕರೆ ಪರಭಾರೆ ಮಾಡುವ ಮೂಲಕ ರಾಜ್ಯ ಸರ್ಕಾರ ಇನ್ನೊಂದು ದೊಡ್ಡ ಹಗರಣಕ್ಕೆ ಕೈ ಹಾಕಿದೆ ಎಂದು ವಿಧಾನಸಭೆಯ ಉಪ ನಾಯಕ, ಶಾಸಕ ಅರವಿಂದ ಬೆಲ್ಲದ ಆರೋಪಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಜಿಂದಾಲ್‌ ಕಂಪನಿಗೆ ರಾಜ್ಯ ಸರ್ಕಾರ ಕಡಿಮೆ ದರದಲ್ಲಿ 3,666 ಎಕರೆ ಜಮೀನು ಮಾರಾಟ ಮಾಡಿದ್ದು ತಪ್ಪು. ಇದು ರಾಜ್ಯದ ಜನರ ಆಸ್ತಿ. ಸಂಡೂರು ಭಾಗದಲ್ಲಿ ಮಣ್ಣಿಗೆ ಚಿನ್ನದ ಬೆಲೆ ಇದೆ. ಇಂತಹ ಭೂಮಿಗೆ ಎಕರೆಗೆ ₹1.22 ಲಕ್ಷ ಮಾತ್ರ ಪರಿಹಾರ ಪಡೆಯಲಾಗುತ್ತಿದೆ ಎಂದರು.

2013ರಲ್ಲೂ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಈ ಪ್ರಸ್ತಾವನೆ ಬಂದಿತ್ತು. ಆಗ ನಾವು ಹೋರಾಟ ಮಾಡಿದ್ದೆವು. ಮುಂದೆ ಮೈತ್ರಿ ಸರ್ಕಾರದಲ್ಲೂ ಎಚ್‌.ಕೆ. ಪಾಟೀಲ ಸೇರಿದಂತೆ ನಾವೆಲ್ಲರೂ ವಿಧಾನಸಭೆಯಲ್ಲಿಯೇ ಮಲಗಿ ಪ್ರತಿಭಟನೆ ಮಾಡಿದ್ದೆವು. ಈಗ ಮತ್ತೆ ಹೋರಾಟ ಮಾಡುವ ಸಮಯ ಬಂದಿದೆ. ಕಾನೂನು ಹೋರಾಟ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ರಾಜ್ಯದ ಸಂಪತ್ತನ್ನು ನಾಶ ಮಾಡಲು ನಾವು ಬಿಡುವುದಿಲ್ಲ ಎಂದರು.