ಕಾಂಗ್ರೆಸ್ ಗೆದ್ದರೆ ಮಂದಿರಕ್ಕೆ ಬಾಬ್ರಿ ಬೀಗ: ಮೋದಿ!

| Published : May 08 2024, 01:05 AM IST / Updated: May 08 2024, 07:11 AM IST

ಕಾಂಗ್ರೆಸ್ ಗೆದ್ದರೆ ಮಂದಿರಕ್ಕೆ ಬಾಬ್ರಿ ಬೀಗ: ಮೋದಿ!
Share this Article
  • FB
  • TW
  • Linkdin
  • Email

ಸಾರಾಂಶ

ಕಾಶ್ಮೀರಕ್ಕೆ ಮತ್ತೆ ಕಾಂಗ್ರೆಸ್‌ ಪಕ್ಷ ಸಂವಿಧಾನದ 370ನೇ ವಿಧಿ ಬಳಸಿ ವಿಶೇಷ ಸ್ಥಾನ ನೀಡುವುದನ್ನು ತಡೆಯಲು ಹಾಗೂ ಅಯೋಧ್ಯೆಯ ರಾಮಮಂದಿರಕ್ಕೆ ‘ಬಾಬ್ರಿ ಬೀಗ’ ಹಾಕುವುದನ್ನು ತಡೆಯಲು ಬಿಜೆಪಿ ನೇತೃತ್ವದ ಎನ್‌ಡಿಎ  400 ಸೀಟು ಗೆಲ್ಲಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ಬೀಡ್‌ (ಮಹಾರಾಷ್ಟ್ರ) :  ಕಾಶ್ಮೀರಕ್ಕೆ ಮತ್ತೆ ಕಾಂಗ್ರೆಸ್‌ ಪಕ್ಷ ಸಂವಿಧಾನದ 370ನೇ ವಿಧಿ ಬಳಸಿ ವಿಶೇಷ ಸ್ಥಾನ ನೀಡುವುದನ್ನು ತಡೆಯಲು ಹಾಗೂ ಅಯೋಧ್ಯೆಯ ರಾಮಮಂದಿರಕ್ಕೆ ‘ಬಾಬ್ರಿ ಬೀಗ’ ಹಾಕುವುದನ್ನು ತಡೆಯಲು ಬಿಜೆಪಿ ನೇತೃತ್ವದ ಎನ್‌ಡಿಎ ಈ ಸಲದ ಲೋಕಸಭೆ ಚುನಾವಣೆಯಲ್ಲಿ 400 ಸೀಟು ಗೆಲ್ಲಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್‌ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಅವರು, ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ-ಬಾಬ್ರಿ ಮಸೀದಿ ಕುರಿತ ಸುಪ್ರೀಂ ಕೋರ್ಟ್‌ ತೀರ್ಪು ರದ್ದು ಮಾಡುವ ಬಗ್ಗೆ ರಾಹುಲ್‌ ಗಾಂಧಿ ಚಿಂತನೆ ನಡೆಸುತ್ತಿದ್ದಾರೆ’ ಎಂದಿದ್ದರು. ಅದರ ಬೆನ್ನಲ್ಲೇ ಮೋದಿ ಅವರು ‘ಬಾಬ್ರಿ ಬೀಗ’ ಹೇಳಿಕೆ ಹೊರಬಿದ್ದಿದೆ.

ಮಧ್ಯಪ್ರದೇಶದ ಧಾರ್‌ನಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಮಾಡಿದ ಮೋದಿ ಅವರು, ‘ಶಾ ಬಾನೋ ಕೇಸಿನ ತೀರ್ಪು ರದ್ದು ಮಾಡಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಪ್ರತ್ಯೇಕ ಕಾಯ್ದೆ ತಂದರು. ಅದೇ ರೀತಿ ಈಗ ಬಾಬ್ರಿ ಮಸೀದಿ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪು ರದ್ದು ಮಾಡಲು ರಾಹುಲ್‌ ಗಾಂಧಿ ಸಂಚು ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ ಪಾತ್ರ ಬಹಳ ಸಣ್ಣದು ಎನ್ನುವ ಮೂಲಕ ಕಾಂಗ್ರೆಸ್‌ ಪಕ್ಷ ಅಂಬೇಡ್ಕರ್‌ ಅವರಿಗೆ ಅವಮಾನ ಮಾಡುತ್ತಿದೆ. ಸತ್ಯ ಏನೆಂದರೆ ಕಾಂಗ್ರೆಸ್‌ ಪರಿವಾರ ಅಂಬೇಡ್ಕರ್‌ರನ್ನು ತೀವ್ರವಾಗಿ ದ್ವೇಷಿಸುತ್ತದೆ’ ಎಂದು ಕಿಡಿಕಾರಿದರು.

ಈಗಾಗಲೇ ನಮ್ಮಲ್ಲಿ 400+ ಸೀಟು:

‘ಮೋದಿಗೆ 400 ಸೀಟು ಸಿಕ್ಕರೆ ಸಂವಿಧಾನವನ್ನು ಬದಲಿಸುತ್ತಾರೆ ಎಂದು ಕಾಂಗ್ರೆಸ್‌ ಪಕ್ಷ ಸುಳ್ಳು ಹರಡುತ್ತಿದೆ. ಕಾಂಗ್ರೆಸಿಗರ ಬುದ್ಧಿವಂತಿಕೆ ಕೇವಲ ಅವರ ವೋಟ್‌ ಬ್ಯಾಂಕ್‌ ಮೇಲೆ ಕೇಂದ್ರೀಕೃತವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ಈಗಾಗಲೇ ಸಂಸತ್ತಿನಲ್ಲಿ 400ಕ್ಕೂ ಹೆಚ್ಚು ಸೀಟುಗಳಿವೆ. ಅದನ್ನು ನಾವು ಕಾಶ್ಮೀರದ 370ನೇ ವಿಧಿ ರದ್ದುಪಡಿಸಲು ಬಳಸಿದೆವು. ಈಗ ಕಾಂಗ್ರೆಸ್‌ನವರು 370ನೇ ವಿಧಿ ಮತ್ತೆ ತರುವುದನ್ನು ತಡೆಯಲು ಹಾಗೂ ಅಯೋಧ್ಯೆಯ ರಾಮಮಂದಿರಕ್ಕೆ ‘ಬಾಬ್ರಿ ಬೀಗ’ ಹಾಕುವುದನ್ನು ತಡೆಯಲು ಮೋದಿಗೆ 400 ಸೀಟು ಬೇಕಾಗಿದೆ’ ಎಂದು ಹೇಳಿದರು.

ಒಬಿಸಿ ಮೀಸಲಿನ ಡಕಾಯ್ತಿ:

ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲನ್ನು ಕಿತ್ತುಕೊಳ್ಳುವುದಿಲ್ಲ ಹಾಗೂ ಒಬಿಸಿ ಮೀಸಲನ್ನು ಡಕಾಯ್ತಿ ಮಾಡಿ ಮುಸ್ಲಿಮರಿಗೆ ನೀಡುವುದಿಲ್ಲ ಎಂದು ಬರೆದುಕೊಡುವಂತೆ ನಾನು ಕಾಂಗ್ರೆಸ್‌ಗೆ ಕೇಳಿದ್ದೆ. ಅದಕ್ಕೆ ಅವರು ಪ್ರತಿಕ್ರಿಯೆಯನ್ನೇ ನೀಡಲಿಲ್ಲ. ಬಾಯಿಗೆ ಬೀಗ ಹಾಕಿಕೊಂಡು ಕುಳಿತರು. ಒಬಿಸಿ ಮೀಸಲನ್ನು ಡಕಾಯ್ತಿ ಮಾಡಿ ವೋಟ್‌ಬ್ಯಾಂಕ್‌ ರಾಜಕೀಯಕ್ಕಾಗಿ ಅದನ್ನು ಮುಸ್ಲಿಮರಿಗೆ ನೀಡುವುದನ್ನು ತಪ್ಪಿಸಲು ನಮಗೆ 400 ಸೀಟು ಬೇಕು ಎಂದೂ ಮೋದಿ ತಿಳಿಸಿದರು.

ದೇಶದ ಜಾಗ ವಿದೇಶಕ್ಕೆ ನೀಡುತ್ತಾರೆ:

ನಾವು 400 ಸೀಟುಗಳನ್ನು ಎಸ್‌ಸಿ, ಎಸ್‌ಟಿ ಮೀಸಲನ್ನು 10 ವರ್ಷ ವಿಸ್ತರಿಸಲು, ಬುಡಕಟ್ಟು ಮಹಿಳೆಯನ್ನು ಮೊಟ್ಟಮೊದಲ ಬಾರಿ ರಾಷ್ಟ್ರಪತಿ ಮಾಡಲು ಹಾಗೂ ಮಹಿಳೆಯರಿಗೆ ಮೀಸಲು ನೀಡಲು ಬಳಸಿದೆವು. ಇದನ್ನೆಲ್ಲ ಕಾಂಗ್ರೆಸ್‌ ಪಕ್ಷ ಮತ್ತು ಇಂಡಿಯಾ ಒಕ್ಕೂಟದವರು ಕಿತ್ತುಹಾಕುವುದನ್ನು ತಡೆಯಲು ಮತ್ತೆ ನಮಗೆ 400 ಸೀಟು ಕೊಡಿ ಎಂದು ಕೇಳುತ್ತಿದ್ದೇನೆ. ಕಾಂಗ್ರೆಸ್‌ವರು ದೇಶದ ಖಾಲಿ ಜಾಗವನ್ನು ಹಾಗೂ ದ್ವೀಪಗಳನ್ನು ಬೇರೆ ದೇಶದವರಿಗೆ ಕೊಡುವುದನ್ನು ತಪ್ಪಿಸಲು ನಮಗೆ 400 ಸೀಟು ಕೊಡಿ ಎಂದು ಕೇಳುತ್ತಿದ್ದೇನೆ ಎಂದೂ ಮೋದಿ ಹೇಳಿದರು.

ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ವಿರೋಧಿಗಳು ಸೋತಿದ್ದಾರೆ. ಎರಡನೇ ಹಂತದಲ್ಲಿ ನಾಶವಾಗಿದ್ದಾರೆ. ಮೂರನೇ ಹಂತದಲ್ಲಿ ಇನ್ನೂ ಅವರದ್ದೇನಾದರೂ ಉಳಿದಿದ್ದರೆ ಅದೂ ನಾಮಾವಶೇಷವಾಗಲಿದೆ ಎಂದು ಅಭಿಪ್ರಾಯಪಟ್ಟರು.