ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸೆ ಮುಂದುವರಿದಿದ್ದು, ಮತಾಂಧರು ಹಿಂದೂ ವ್ಯಕ್ತಿಯೊಬ್ಬನನ್ನು ಇರಿದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ಡಿ.31ರಂದು ಶರಿಯತ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸೆ ಮುಂದುವರಿದಿದ್ದು, ಮತಾಂಧರು ಹಿಂದೂ ವ್ಯಕ್ತಿಯೊಬ್ಬನನ್ನು ಇರಿದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ಡಿ.31ರಂದು ಶರಿಯತ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ನೀರಿನ ಕೊಳಕ್ಕೆ ಜಿಗಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ
ವ್ಯಕ್ತಿ ತಕ್ಷಣ ನೀರಿನ ಕೊಳಕ್ಕೆ ಜಿಗಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖೋಕನ್ ದಾಸ್ (50) ದಾಳಿಗೊಳಗಾದ ವ್ಯಕ್ತಿ. ಇದು ಬಾಂಗ್ಲಾದಲ್ಲಿ ಕಳೆದ 2 ವಾರಗಳಲ್ಲಿ ಹಿಂದೂಗಳನ್ನು ಗುರಿಯಾಗಿಸಿ ನಡೆದ 4ನೇ ದಾಳಿ. ಕಳೆದ ತಿಂಗಳು ದೀಪು ಚಂದ್ರ ದಾಸ್ ಎಂಬ ಯುವಕನನ್ನು ಹತ್ಯೆ ಮಾಡಿದ ಮತಾಂಧರು, ಆತನ ರುಂಡ ಮತ್ತು ಮುಂಡವನ್ನು ಬೇರ್ಪಡಿಸಿ ಮರಕ್ಕೆ ನೇತು ಹಾಕಿ ಬೆಂಕಿ ಹಚ್ಚಿದ್ದರು. ಖೋಕನ್ ದಾಸ್ ಮೇಲೂ ಅದೇ ರೀತಿ ದಾಳಿಗೆ ಯತ್ನಿಸಿದ್ದಾರೆ. ಆದರೆ ಅದೃಷ್ಟವಶಾತ್ ಅವರು ಜೀವ ಉಳಿಸಿಕೊಂಡಿದ್ದಾರೆ.
ಆಗಿದ್ದೇನು?:
ಖೋಕನ್ ತಮ್ಮ ಮೆಡಿಕಲ್ ಶಾಪ್ ಮುಚ್ಚಿ ಮನೆಗೆ ಹಿಂದಿರುತ್ತಿದ್ದರು. ದಾರಿಯಲ್ಲಿ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಅವರ ಕೆಳಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ಆ ಬಳಿಕ ಥಳಿಸಿ, ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಆದರೆ ಕಿಡಿಗೇಡಿಗಳಿಂದ ಹೇಗೋ ತಪ್ಪಿಸಿಕೊಂಡ ಅವರು ಹತ್ತಿರದ ನೀರಿನ ಕೊಳಕ್ಕೆ ಜಿಗಿದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಢಾಕಾ ವೈದ್ಯಕೀಯ ಆಸ್ಪತ್ರೆಗೆ ಸಾಗಿಸಿದ್ದಾರೆ.
ಪತ್ನಿ ಆಕ್ರೋಶ: ಪತಿ ಮೇಲಿನ ಹಲ್ಲೆ ಕುರಿತು ಪ್ರತಿಕ್ರಿಯಿಸಿದ ಅವರ ಪತ್ನಿ, ‘ಮೆಡಿಕಲ್ ಶಾಪ್‌ನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಅವರಿಗೆ ಚಾಕು ಚುಚ್ಚಿ, ತಲೆಗೆ ಬಲವಾಗಿ ಹೊಡೆದು ಬೆಂಕಿ ಹಚ್ಚಿದ್ದಾರೆ. ಇದನ್ನು ಯಾರು ಮಾಡಿದ್ದಾರೋ ಗೊತ್ತಿಲ್ಲ. ನಮಗೆ ನ್ಯಾಯ ಬೇಕು. ನನ್ನ ಗಂಡ ಸರಳ ಮನುಷ್ಯ. ಯಾರಿಗೂ ನೋವು ಕೊಟ್ಟವರಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಭಾರತ ವಿರೋಧಿ ವಿದ್ಯಾರ್ಥಿ ನಾಯಕ ಉಸ್ಮಾನ್ ಹದಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಆ ಬಳಿಕ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ತೀವ್ರವಾಗಿದ್ದು, ದೇಶ ಸಂಘರ್ಷದಿಂದ ಹೊತ್ತಿ ಉರಿಯುತ್ತಿದೆ.
- ಭಾರತ ವಿರೋಧಿ ನಾಯಕ ಉಸ್ಮಾನ್ ಹದಿ ಹತ್ಯೆ ಬಳಿಕ ಹಿಂದುಗಳ ಮೇಲೆ ಬಾಂಗ್ಲಾದಲ್ಲಿ ದಾಳಿ ಹೆಚ್ಚಳ
- ಕಳೆದ 2 ವಾರಗಳ ಅವಧಿಯಲ್ಲಿ ಹಿಂದುಗಳನ್ನು ಗುರಿಯಾಗಿಸಿ ಮತಾಂಧರು ನಡೆಸಿದ ನಾಲ್ಕನೇ ದಾಳಿ ಇದು
- ಡಿಸೆಂಬರ್‌ನಲ್ಲಿ ದೀಪು ಚಂದ್ರದಾಸ್ ಎಂಬಾತನ ರುಂಡ ಕಡಿದು ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದು ರಾಕ್ಷಸರು
- ಅದಾದ ಬಳಿಕ ಅಮೃತ್ ಮೊಂಡಲ್ ಎಂಬ ಹಿಂದು ಯುವಕನ ಮೇಲೆ ದಾಳಿ ನಡೆಸಿ ಕೊಂದಿದ್ದ ಪಾಪಿಗಳು
- ಬಳಿಕ ಭದ್ರತಾ ಸಿಬ್ಬಂದಿಯೊಬ್ಬನನ್ನು ಗುಂಡಿಕ್ಕಿ ಕೊಂದ ಘಟನೆಗಳು ಭಾರತದ ಆಕ್ರೋಶಕ್ಕೆ ಕಾರಣವಾಗಿತ್ತು
