ಇಸ್ರೇಲ್ ಜೊತೆಗಿನ ಯುದ್ಧದಲ್ಲಿ ಇದುವರೆಗೂ 25 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಬಲಿಯಾಗಿದ್ದಾರೆ. ಮೃತರದಲ್ಲಿ ಶೇ.66ರಷ್ಟು ಮಹಿಳೆಯರು, ಮಕ್ಕಳು ಆಗಿರುತ್ತಾರೆ. ಅಲ್ಲದೆ 62000 ಜನಕ್ಕೆ ಗಾಯವಾಗಿದೆ ಎಂದು ಗಾಜಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಾಜಾ: ಇಸ್ರೇಲ್‌ನೊಂದಿಗೆ ಮೂರು ತಿಂಗಳ ಹಿಂದೆ ಯುದ್ಧ ಪ್ರಾರಂಭವಾದಾಗಿನಿಂದ ಪ್ಯಾಲೆಸ್ತೀನ್‌ನಲ್ಲಿ ಸಾವಿಗೀಡಾದವರ ಸಂಖ್ಯೆ 25 ಸಾವಿರ ದಾಟಿರುವುದಾಗಿ ಗಾಜಾ ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಆಲ್-ಕಿದ್ರಾ, ‘ಪ್ಯಾಲೆಸ್ತೀನ್‌ನಲ್ಲಿ ಅ.7ರಿಂದ ಇಲ್ಲಿಯವರೆಗೂ ಒಟ್ಟು 25,105 ಜನ ಸಾವನ್ನಪ್ಪಿದ್ದು, 62,681 ಮಂದಿ ಗಾಯಗೊಂಡಿದ್ದಾರೆ.
ಇವುಗಳ ಪೈಕಿ ಯೋಧರು ಮತ್ತು ನಾಗರೀಕರು ಎಂದು ಬೇರ್ಪಡಿಸದಿದ್ದರೂ ಸತ್ತವರ ಪೈಕಿ ಶೇ.66ರಷ್ಟು ಮಂದಿ ಮಹಿಳೆಯರು ಮತ್ತು ಮಕ್ಕಳೇ ಆಗಿದ್ದಾರೆ’ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್, ‘ಪ್ಯಾಲೆಸ್ತೀನ್‌ನಲ್ಲಿ ಉಗ್ರರು ವಸತಿ ಪ್ರದೇಶಗಳಲ್ಲೇ ಅಡಗಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚುತ್ತಿದೆ’ ಎಂದು ತಿರುಗೇಟು ನೀಡಿದೆ.
ಅ.7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿ 1200 ಮಂದಿಯನ್ನು ಬಲಿ ತೆಗೆದುಕೊಂಡಿದ್ದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಗಾಜಾ಼ ಮೇಲೆ ವಾಯು ಮತ್ತು ಭೂದಾಳಿಯನ್ನು ಮಾಡಿ ಉಗ್ರರನ್ನು ಸದೆಬಡಿಯುವ ಪಣತೊಟ್ಟಿದೆ.