ಸಾರಾಂಶ
ಕೀವ್: ಉಕ್ರೇನ್-ರಷ್ಯಾ ಯುದ್ಧ ಮತ್ತೊಂದು ಮಜಲು ಮಟ್ಟಿದೆ. ಅಮೆರಿಕದ ಅವಳಿ ಕಟ್ಟಡಗಳ ಮೇಲೆ 2001ರ ಸೆ.11ರಂದು ನಡೆದಿದ್ದ ‘9/11 ದಾಳಿ’ ಮಾದರಿಯಲ್ಲಿ ಉಕ್ರೇನ್‌ನ ಡ್ರೋನ್ ಒಂದು ರಷ್ಯಾದ ಬಹುಮಹಡಿ ಕಟ್ಟಡದ ಮೇಲೆ ದಾಳಿ ನಡೆಸಿದೆ.
ಇದರಿಂದ ಸಿಟ್ಟಿಗೆದ್ದ ರಷ್ಯಾ ಸೋಮವಾರ ಪ್ರತೀಕಾರಕ್ಕೆ ಇಳಿದಿದ್ದು, ಇತ್ತೀಚಿನ ದಿನಗಳಲ್ಲೇ ಕಂಡು ಕೇಳರಿಯದ ದಾಳಿಯನ್ನು ಉಕ್ರೇನ್ ಮೇಲೆ ನಡೆಸಿದೆ. 100 ಕ್ಷಿಪಣಿ,100 ಡ್ರೋನ್ ಬಳಸಿ ದಾಳಿ ಮಾಡಿದೆ. ಉಕ್ರೇನ್ ರಾಜಧಾನಿ ಕೀವ್ ಹಾಗೂ ದೇಶದ ಇಂಧನ ಘಟಕಗಳು ಮುಖ್ಯ ಗುರಿಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ.ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್‌ಗೆ ಭೇಟಿ ನೀಡಿ ಶಾಂತಿಮಂತ್ರ ಬೋಧಿಸಿ ಹೋದ ಬೆನ್ನಲ್ಲೇ ಈ ಬೆಳವಣಿಗೆಯಾಗಿರುವುದು ಗಮನಾರ್ಹ.
9/11 ರೀತಿ ದಾಳಿ:ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದಿದ್ದ 9/11 ದಾಳಿ ಮಾದರಿಯಲ್ಲಿ ಉಕ್ರೇನ್‌ನ ಡ್ರೋನ್ ಒಂದು ರಷ್ಯಾದ ಸಾರಾಟೋವ್ ನಗರಕ್ಕೆ ನುಗ್ಗಿ, ಅಲ್ಲಿದ್ದ ಬಹುಮಹಡಿ ಕಟ್ಟಡದ ಮೇಲೆ ಭಾನುವಾರ ದಾಳಿ ನಡೆಸಿತು. ಈ ಘಟನೆಯಲ್ಲಿ ಸಾವೇನೂ ಸಂಭವಿಸಿರಲಿಲ್ಲ. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಸೇರಿದಂತೆ ನಾಲ್ವರಿಗೆ ಗಾಯಗಳಾಗಿದ್ದವು. ಇದಕ್ಕೆ ಪ್ರತಿಯಾಗಿ ರಷ್ಯಾ ವಾಯುದಾಳಿ ನಡೆಸಿದೆ.
ರಷ್ಯಾದ ಅನೇಕ ಡ್ರೋನ್‌ಗಳು, ಕ್ರೂಸ್ ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಉಕ್ರೇನ್‌ನ ಪೂರ್ವ, ಉತ್ತರ, ದಕ್ಷಿಣ ಮತ್ತು ಮಧ್ಯ ಭಾಗಗಳ ಮೇಲೆ ದಾಳಿ ಮಾಡಿವೆ. ರಾಜಧಾನಿ ಕೀವ್‌ನಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಇದರಿಂದ ನಗರದಲ್ಲಿ ವಿದ್ಯುತ್ ಮತ್ತು ನೀರು ಸರಬರಾಜಿಗೆ ಸಮಸ್ಯೆಯಾಗಿದೆ.‘100 ಡ್ರೋನ್ ಹಾಗೂ 100 ಕ್ಷಿಪಣಿ ಬಳಸಿ ರಷ್ಯಾ ನಮ್ಮ ಮೇಳೆ ದಾಳಿ ಮಾಡಿದೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಆರೋಪಿಸಿದ್ದಾರೆ ಹಾಗೂ ಇಂಥ ದಾಳಿಯಿಂದ ಏಕಾಂಗಿಯಾಗಿ ರಕ್ಷಿಸಿಕೊಳ್ಳಲು ಆಗದು ಹಾಗೂ ಪಾಶ್ಚಾತ್ಯ ನೆರವು ಬೇಕು ಎಂದು ಆಗ್ರಹಿಸಿದ್ದಾರೆ.
ಅಜೇಯ ಕೇಂದ್ರ: ಇಂತಹ ಸಂದರ್ಭಗಳಲ್ಲಿ ನೆರವಾಗಲು ಬಂಕರ್ ಮಾದರಿಯ ‘ಅಜೇಯ ಕೇಂದ್ರ’ಗಳನ್ನು ಸ್ಥಾಪಿಸಲು ಕೀವ್ ಆಡಳಿತ ಮುಂದಾಗಿದೆ. ಶಕ್ತಿ ಸಂಪನ್ಮೂಲಗಳ ಮೇಲೆ ದಾಳಿ ನಡೆದಾಗ ಜನ ಇಲ್ಲಿ ತಮ್ಮ ಎಲೆಕ್ಟ್ರಿಕ್ ಸಾಧನಗಳನ್ನು ಚಾರ್ಜ್ ಮಾಡಿಕೊಂಡು ಊಟೋಪಹಾರಗಳನ್ನು ಪಡೆಯಬಹುದಾಗಿದೆ.
ನಮ್ಮ ನೆರವಿಗೆ ಬನ್ನಿ
100 ಡ್ರೋನ್ ಹಾಗೂ 100 ಕ್ಷಿಪಣಿ ಬಳಸಿ ರಷ್ಯಾ ನಮ್ಮ ಮೇಳೆ ದಾಳಿ ಮಾಡಿದೆ. ಇಂಥ ದಾಳಿಯಿಂದ ಏಕಾಂಗಿಯಾಗಿ ರಕ್ಷಿಸಿಕೊಳ್ಳಲು ಆಗದು. ಪಾಶ್ಚಾತ್ಯ ದೇಶಗಳ ನೆರವು ಬೇಕು.
- ವೊಲೊದಿಮಿರ್ ಜೆಲೆನ್ಸ್ಕಿ, ಉಕ್ರೇನ್ ಅಧ್ಯಕ್ಷ
ಆಗಿದ್ದೇನು?
- ಎರಡೂವರೆ ವರ್ಷಗಳಿಂದ ನಡೆಯುತ್ತಿರುವ ರಷ್ಯಾ- ಉಕ್ರೇನ್ ಸಮರ ನಿಲ್ಲುತ್ತಲೇ ಇಲ್ಲ- ಭಾನುವಾರ ರಾತ್ರಿ ರಷ್ಯಾದತ್ತ 22ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹಾರಿಸಿದ ಉಕ್ರೇನ್- ಬಹುತೇಕ ಎಲ್ಲವನ್ನೂ ಹೊಡೆದುರುಳಿಸಿದ ರಷ್ಯಾ ಸೇನೆ. 1 ಮಾತ್ರ ಕಟ್ಟಡಕ್ಕೆ ಡಿಕ್ಕಿ- ಈ ದಾಳಿಯಿಂದ ಕೆರಳಿದ ರಷ್ಯಾ. ಉಕ್ರೇನ್ ಮೇಲೆ ಪ್ರತೀಕಾರದ ದಾಳಿ ತೀವ್ರ- ರಾಜಧಾನಿ ಕೀವ್ ಸೇರಿದಂತೆ ಹಲವೆಡೆ ದಾಳಿ. ವಿದ್ಯುತ್, ನೀರು ಸರಬರಾಜಿಗೆ ತೊಂದರೆ