‘ಸಬ್ಸಿಡಿ’ ಸೈಟ್‌ ಆಸೆ ತೋರಿಸಿ 60 ಜನರಿಗೆ ₹15 ಲಕ್ಷ ಟೋಪಿ; ಇಬ್ಬರ ಸೆರೆ

KannadaprabhaNewsNetwork |  
Published : Feb 07, 2024, 01:53 AM ISTUpdated : Feb 07, 2024, 01:51 PM IST
Crime

ಸಾರಾಂಶ

‘ಸಬ್ಸಿಡಿ’ ಸೈಟ್‌ ಆಸೆ ತೋರಿಸಿ 60 ಜನರಿಗೆ ₹15 ಲಕ್ಷ ಟೋಪಿಹಾಕುತ್ತಿದ್ದ ಇಬ್ಬರ ಸೆರೆ. ಬಿಬಿಎಂಪಿಯಲ್ಲಿ ಸಬ್ಸಿಡಿಯಲ್ಲಿ ಸೈಟ್‌, ವಾಹನ, ಕೆಲಸ ಕೊಡಿಸೋದಾಗಿ ನಂಬಿಸಿ ವಂಚನೆ. ಯಾರಿಗೂ ಹೇಳ್ಬೇಡಿ ಎಂದು ನಂಬಿಸುತ್ತಿದ್ದ ಖತರ್ನಾಕ್‌, ನಾಪತ್ತೆ ಆಗಿರುವವರಿಗೆ ಶೋಧ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಸಬ್ಸಿಡಿ ದರದಲ್ಲಿ ನಿವೇಶನ ಹಾಗೂ ಉದ್ಯೋಗಿ ಕೊಡಿಸುವುದಾಗಿ ನಂಬಿಸಿ ಜನರಿಗೆ ವಂಚಿಸುತ್ತಿದ್ದ ಇಬ್ಬರು ಚಾಲಾಕಿಗಳು ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಶ್ರೀನಗರದ ಕಾಶಿದಾಸ ಲೇಔಟ್‌ನ ದೀಪಕ್ ಅಲಿಯಾಸ್ ಕಿರಣ್ ಹಾಗೂ ವಿದ್ಯಾರಣ್ಯಪುರದ ಹರ್ಷಾ ಅಲಿಯಾಸ್ ಜಗದೀಶ್ ಬಂಧಿತರಾಗಿದ್ದು, ಆರೋಪಿಗಳಿಂದ ಎರಡು ಮೊಬೈಲ್‌ಗಳು ಹಾಗೂ ಎರಡು ಸಾವಿರ ರು. ನಗದು ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಾದ ಭಾವನ, ಭಾವನಿ ಹಾಗೂ ಸಂಜಯ್ ಪತ್ತೆ ತನಿಖೆ ಮುಂದುವರೆದಿದೆ.

ಕೆಲ ದಿನಗಳ ಹಿಂದೆ ಬಿಬಿಎಂಪಿ ಕಚೇರಿಯಲ್ಲಿ ಕಂಪ್ಯೂಟರ್‌ ಆಪರೇಟರ್ ಕೆಲಸ ಕೊಡಿಸುವುದಾಗಿ ₹8 ಸಾವಿರ ಪಡೆದು ವಂಚಿಸಿರುವ ಬಗ್ಗೆ ಸಿಇಎನ್‌ ಠಾಣೆಗೆ ದೂರು ದಾಖಲಾಯಿತು. ಈ ಪ್ರಕರಣದ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಎಸ್‌.ಶಿವರತ್ನ ನೇತೃತ್ವದ ತಂಡವು ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು.

‘ಯಾರಿಗೂ ಹೇಳಬೇಡಿ’ ಅಂತ ಟೋಪಿ:

ಕೆಲಸವಿಲ್ಲದೆ ಅಲೆಯುತ್ತಿದ್ದ ದೀಪಕ್ ಹಾಗೂ ಹರ್ಷಾ, ಮೋಜು ಮಸ್ತಿ ಜೀವನಕ್ಕಾಗಿ ಜನರಿಗೆ ಯಾಮಾರಿಸಿ ಹಣ ಸಂಪಾದಿಸಲು ಶುರು ಮಾಡಿದ್ದರು. ಖ್ಯಾತ ನಟ ಅನಂತ್ ನಾಗ್ ಅಭಿನಯದ ಕನ್ನಡಚಲನಚಿತ್ರ ‘ಯಾರಿಗೂ ಹೇಳಬ್ಬೇಡಿ’ ಸಿನಿಮಾ ಮಾದರಿಯಲ್ಲೇ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಆರೋಪಿಗಳು ಟೋಪಿ ಹಾಕುತ್ತಿದ್ದರು. ಬಿಬಿಎಂಪಿಯಲ್ಲಿ ಸಬ್ಸಿಡಿ ದರದಲ್ಲಿ ಕಾರು, ನಿವೇಶನ, ಕೆಲಸ ಹಾಗೂ ವಿಧವೆಯರಿಗೆ ಮಾಸಾಶನ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ಪಡೆದು ದೀಪಕ್ ಹಾಗೂ ಹರ್ಷಾ ಮೋಸ ಮಾಡುತ್ತಿದ್ದರು. ತಮ್ಮ ಮೋಸದ ಬಲೆಗೆ ಬಿದ್ದವರಿಂದ ಹಣವನ್ನು ತಮ್ಮ ಖಾತೆಗೆ ಆರೋಪಿಗಳು ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಇದೇ ರೀತಿ ಸುಮಾರು 60ಕ್ಕೂ ಹೆಚ್ಚು ಜನರಿಗೆ ವಂಚಿಸಿ ₹15 ಲಕ್ಷ ಅಧಿಕ ಹಣ ವಸೂಲಿ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಂತೆಯೇ ಕೆಲ ದಿನಗಳ ಹಿಂದೆ ಕಂಪ್ಯೂಟರ್ ಆಪರೇಟ್ ಕೆಲಸದ ನೆಪದಲ್ಲಿ ಯುವಕನಿಂದ ₹8 ಸಾವಿರ ಪಡೆದು ಆರೋಪಿಗಳು ವಂಚಿಸಿದ್ದರು. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ. ವಂಚಿಸಿದ ಹಣ ವರ್ಗಾವಣೆಗೆ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆಯಲು ತಪ್ಪಿಸಿಕೊಂಡಿರುವ ಆರೋಪಿಗಳಾದ ಭಾವನ ಹಾಗೂ ಭಾವನಿ ನೆರವಾಗಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬಿಬಿಎಂಪಿ ಸಬ್ಸಿಡಿ ಹೆಸರಿನಲ್ಲಿ ವಂಚನೆ ಬಗ್ಗೆ ಕೆಲವರು ದೂರು ನೀಡಿಲ್ಲ. ಈಗಲಾದರೂ ಹಣ ಕಳೆದುಕೊಂಡ ಸಂತ್ರಸ್ತರು ದೂರು ನೀಡಿದರೆ ತನಿಖೆ ನಡೆಸುತ್ತೇವೆ. ಸರ್ಕಾರದ ಸವಲತ್ತು ಕೊಡಿಸುವುದಾಗಿ ಹೇಳುವ ವಂಚಕರ ಬಗ್ಗೆ ಜನರು ಜಾಗ್ರತೆವಹಿಸಬೇಕು.

ಬಿ.ದಯಾನಂದ್, ಪೊಲೀಸ್ ಆಯುಕ್ತ

PREV

Recommended Stories

ಎಂಜಿನಿಯರಿಂಗ್‌ ಕಾಲೇಜು ಶೌಚಕ್ಕೆ ಎಳೆದೊಯ್ದು ಸಹಪಾಠಿಯ ರೇ*!
ಪ್ರೀತಿಗೊಪ್ಪದ ವಿದ್ಯಾರ್ಥಿನಿಗೆ ಚಾಕು ಇರಿದು ಕೊಲೆ ಮಾಡಿದ ಪಕ್ಕದ ಮನೆ ಯುವಕ