ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಘಟನೆ ಮಂಡ್ಯ: ಮಂಡ್ಯದ ಮಿಮ್ಸ್ ಆಸ್ಪತ್ರೆ ಬಿಲ್ಲಿಂಗ್ ಕೌಂಟರ್‌ನಲ್ಲಿ ₹1.20 ಲಕ್ಷ ಕಳ್ಳತನವಾಗಿರುವ ಪ್ರಕರಣ ತಡವಾಗಿ ವರದಿಯಾಗಿದೆ. ಕಳೆದ ಶುಕ್ರವಾರ ರಾತ್ರಿ ಪಾಳಿಯಲ್ಲಿ ಭದ್ರತಾ ಸಿಬ್ಬಂದಿ ಕಾರ್ತಿಕ್ ಮತ್ತು ರಕ್ಷಿತ್ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ತಡರಾತ್ರಿಯಾಗಿದ್ದ ವೇಳೆ ಒಬ್ಬರು ವಿಶ್ರಾಂತಿಗೆ ತೆರಳಿದ್ದಾರೆ. ಮತ್ತೋರ್ವ ಸಿಬ್ಬಂದಿ ಶೌಚಾಲಯಕ್ಕೆ ತೆರಳಿದಾಗ ಮುಖಕ್ಕೆ ಬಟ್ಟಿಕಟ್ಟಿಕೊಂಡು ಬಂದ ವ್ಯಕ್ತಿ ಬಿಲಿಂಗ್ ಕೌಂಟರ್ ಪ್ರವೇಶಿಸಿ ಅಲ್ಲಿದ್ದ ₹1.20 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದಾನೆ. ಮುಖಕ್ಕೆ ಬಟ್ಟಿ ಕಟ್ಟಿಕೊಂಡಿದ್ದ ವ್ಯಕ್ತಿ ಹಣ ದೋಚಿದ್ದ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಂಡ್ಯ ವೈದ್ಯಕೀಯ ಕಾಲೇಜಿನ ಭದ್ರತಾ ಸಿಬ್ಬಂದಿ ಸೇವೆಯನ್ನು ಕೆ.ಎಸ್.ಎಫ್-9 ಏಜೆನ್ಸಿ ನೀಡಿದ್ದು, ಮುದ್ದನಘಟ್ಟ ಮಹಾಲಿಂಗೇಗೌಡ ಎಂಬುವರು ಟೆಂಡರ್ ಪಡೆದಿದ್ದಾರೆ. ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಶೌಚಾಲಯಕ್ಕೆ ತೆರಳಿದ್ದ ವೇಳೆ ಕಾದು ಕುಳಿತಿದ್ದ ಅಪರಿಚಿತ ವ್ಯಕ್ತಿ ಈ ದುಷ್ಕೃತ್ಯ ಎಸಗಿ ಪರಾರಿಯಾಗಿದ್ದಾನೆ. ಈ ಸಂಬಂಧ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.