ತುರುವೆಕೆರೆ: ಹಾಡುಹಗಲೇ ಗೃಹಿಣಿಯ ಕಗ್ಗೊಲೆ

KannadaprabhaNewsNetwork | Published : Oct 8, 2023 12:00 AM

ಸಾರಾಂಶ

ಹಾಡುಹಗಲೇ ಗೃಹಿಣಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಂಪಿಗೆ ಹೊಸಳ್ಳಿ ಬಳಿಯ ಡಿ.ಪಾಳ್ಯದಲ್ಲಿ ನಡೆದಿದೆ. ಕೊಲೆಗೀಡಾದ ಮಹಿಳೆಯನ್ನು ಡಿ.ಪಾಳ್ಯದ ನಿವಾಸಿ ಶಿವಮ್ಮ (೫೫) ಎಂದು ಗುರುತಿಸಲಾಗಿದೆ.
ಕನ್ನಡಪ್ರಭ ವಾರ್ತೆ, ತುರುವೇಕೆರೆ ಹಾಡುಹಗಲೇ ಗೃಹಿಣಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಂಪಿಗೆ ಹೊಸಳ್ಳಿ ಬಳಿಯ ಡಿ.ಪಾಳ್ಯದಲ್ಲಿ ನಡೆದಿದೆ. ಕೊಲೆಗೀಡಾದ ಮಹಿಳೆಯನ್ನು ಡಿ.ಪಾಳ್ಯದ ನಿವಾಸಿ ಶಿವಮ್ಮ (೫೫) ಎಂದು ಗುರುತಿಸಲಾಗಿದೆ. ಡಿ.ಪಾಳ್ಯದಲ್ಲಿ ಮೃತ ಶಿವಮ್ಮ ಟೀ ಅಂಗಡಿ ಮತ್ತು ಪ್ರಾವಿಷನ್ ಅಂಗಡಿ ನಡೆಸುತ್ತಿದ್ದರು. ಇವರ ಅಂಗಡಿಯ ಪಕ್ಕದಲ್ಲೇ ನಂದೀಶ್ (೩೫) ಸಹ ಅಂಗಡಿ ಇಟ್ಟುಕೊಂಡಿದ್ದರು. ಕಾರಣಾಂತರದಿಂದ ನಂದೀಶ್ ಅಂಗಡಿಯನ್ನು ಕೆಲ ತಿಂಗಳಿನಿಂದ ಮುಚ್ಚಿದ್ದರು. ಶನಿವಾರ ಬೆಳಗ್ಗೆ ೧೧ ರ ವೇಳೆಗೆ ನಂದೀಶ್ ಶಿವಮ್ಮರ ಅಂಗಡಿಗೆ ತೆರಳಿ ವಸ್ತುವೊಂದನ್ನು ಸಾಲವಾಗಿ ನೀಡಬೇಕೆಂದು ಕೇಳಿದ್ದಾನೆ. ಆದರೆ, ಶಿವಮ್ಮ ಈ ಹಿಂದೆಯೇ ಕೊಟ್ಟಿದ್ದ ಸಾಲ ನೀಡಿಲ್ಲದಿರುವುದರಿಂದ ಮತ್ತೆ ಸಾಲ ಕೊಡಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ. ಜನರೆದುರು ತನಗೆ ಅವಮಾನ ಮಾಡಿದರೆಂದು ಕುಪಿತಗೊಂಡ ನಂದಿಶ್ ತನ್ನೊಂದಿಗೆ ತಂದಿದ್ದ ಮಚ್ಚನ್ನು ಏಕಾಏಕಿ ಶಿವಮ್ಮರ ಕುತ್ತಿಗೆಗೆ ಬೀಸಿದನೆಂದು ಹೇಳಲಾಗಿದೆ. ಹಠಾತ್ ಆಗಿ ಮಚ್ಚಿನೇಟು ಬಿದ್ದ ಕೂಡಲೇ ಶಿವಮ್ಮ ಸ್ಥಳದಲ್ಲೇ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಶಿವಮ್ಮರ ಕೊಲೆಯಾದ ವಿಷಯವನ್ನು ಕೂಡಲೇ ದಂಡಿನಶಿವರ ಪೋಲಿಸರಿಗೆ ತಿಳಿಸಲಾಯಿತು. ದಾರಿ ಮಧ್ಯೆ ಹೋಗುತ್ತಿದ್ದ ಕೊಲೆ ಆರೋಪಿ ನಂದೀಶ್ ನನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಶಿವಮ್ಮರ ಜಮೀನು, ಅಂಗಡಿ ಮತ್ತು ನಂದೀಶ್ ರ ಅಂಗಡಿ ಮತ್ತು ಜಮೀನು ಸಹ ಅಕ್ಕಪಕ್ಕದಲ್ಲೇ ಇದ್ದು ಕೆಲವು ದಿನಗಳಿಂದ ಇಬ್ಬರಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಮೃತ ಶಿವಮ್ಮರಿಗೆ ಪತಿ, ಮೂವರು ಮಕ್ಕಳು ಇದ್ದಾರೆಂದು ತಿಳಿದು ಬಂದಿದೆ. ಕೊಲೆಯಾದ ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮೀಕಾಂತ್, ಸಿಪಿಐ ಎಂ.ನಾಯಕ್, ಎಸ್‌ಐ ರಾಮಚಂದ್ರಯ್ಯ ಭೇಟಿ ನೀಡಿದ್ದರು. ದಂಡಿನಶಿವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.

Share this article