ಬೆಂಗಳೂರು: ವರ್ಕ್‌ ಫ್ರಮ್‌ ಹೋಂ ಸಂದೇಶ ಕಳುಹಿಸಿ ₹1.63 ಲಕ್ಷ ವಂಚನೆ

KannadaprabhaNewsNetwork |  
Published : Feb 02, 2024, 01:03 AM ISTUpdated : Feb 02, 2024, 02:28 PM IST
ಸೈಬರ್‌ ಕ್ರೈಂ... | Kannada Prabha

ಸಾರಾಂಶ

ಮೊಬೈಲ್‌ಗೆ ವರ್ಕ್‌ ಫ್ರಂ ಹೋಂ ಸಂದೇಶ ಕಳುಹಿಸಿ ಹಣ ಪಡೆದು ವಂಚಿಸಿದ ಘಟನೆ ಸಂಬಂಧ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸೈಬರ್‌ ವಂಚಕರು ವ್ಯಕ್ತಿಯೊಬ್ಬರ ಮೊಬೈಲ್‌ಗೆ ವರ್ಕ್‌ ಫ್ರಮ್‌ ಹೋಂ ಜಾಹೀರಾತು ಸಂದೇಶ ಕಳುಹಿಸಿ ಆತನಿಂದ ₹1.63 ಲಕ್ಷ ಪಡೆದು ವಂಚಿಸಿರುವ ಸಂಬಂಧ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಎಜಿಎಸ್ ಲೇಔಟ್‌ ನಿವಾಸಿ ಅಭಿಜಿತ್‌ ಕಬಾದ್‌ ಹಣ ಕಳೆದುಕೊಂಡವರು. ಇತ್ತೀಚೆಗೆ ಅಭಿಜಿತ್‌ ಅವರ ಮೊಬೈಲ್‌ ಫೋನ್‌ಗೆ ವರ್ಕ್‌ ಫ್ರಮ್‌ ಹೋಮ್‌ ಜಾಹೀರಾತು ಸಂದೇಶ ಬಂದಿದೆ. ಗೂಗಲ್‌ನಲ್ಲಿ ರಿವೀವ್‌ ಕೊಟ್ಟು ₹150 ಗಳಿಸಬಹುದು ಎಂದು ಆ ಸಂದೇಶದಲ್ಲಿ ತಿಳಿಸಲಾಗಿದೆ. ಅದರಂತೆ ಅಭಿಜಿತ್‌ ಮೊದಲಿಗೆ ಗೂಗಲ್‌ ರಿವೀವ್‌ ಕೊಟ್ಟು ₹150 ಪಡೆದುಕೊಂಡಿದ್ದಾರೆ.

ದೊಡ್ಡ ಮೊತ್ತ ಪಡೆದು ವಂಚನೆ: ಮಾರನೇ ದಿನ ಸೈಬರ್‌ ವಂಚಕರು ಟೆಲಿಗ್ರಾಮ್‌ ಆ್ಯಪ್‌ನಲ್ಲಿ ಅಭಿಜಿತ್‌ಗೆ ಒಂದು ಲಿಂಕ್‌ ಕಳುಹಿಸಿದ್ದಾರೆ. ಆ ಲಿಂಕ್‌ ತೆರೆದು ಅಭಿಜಿತ್‌ ಗೂಗಲ್‌ ರಿವೀವ್‌ ಕೊಟ್ಟಿದ್ದಾರೆ. ಇದರಿಂದ ಅವರ ಖಾತೆಗೆ ₹150 ಬಂದಿದೆ. 

ಬಳಿಕ ಆ ಲಿಂಕ್‌ ಮೂಲಕ ₹1,300 ಪಾವತಿಸಿ, ₹1,950 ಮರಳಿ ಪಡೆದಿದ್ದಾರೆ. ಇದೇ ರೀತಿ ₹5 ಸಾವಿರ ಪಾವತಿಸಿ ₹9,980 ಪಡೆದುಕೊಂಡಿದ್ದಾರೆ. ಬಳಿಕ ಸೈಬರ್‌ ವಂಚಕರು, ₹1.25 ಲಕ್ಷ ಪಾವತಿಸಿ, ₹2 ಲಕ್ಷ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. 

ಅದರಂತೆ ಅಭಿಜಿತ್‌ ತಮ್ಮ ಮೂರು ಬ್ಯಾಂಕ್‌ಗಳಲ್ಲಿ ಇದ್ದ ₹1.63 ಲಕ್ಷವನ್ನು ವಂಚಕರ ಖಾತೆಗೆ ಪಾವತಿಸಿದ್ದಾರೆ.ಮತ್ತೆ ₹80 ಸಾವಿರಕ್ಕೆ ಬೇಡಿಕೆ

ಆದರೆ, ಮರಳಿ ಹಣ ಬಂದಿಲ್ಲ. ಈ ವೇಳೆ ಹಣ ವಾಪಾಸ್‌ ಬಂದಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ₹80 ಸಾವಿರ ಪಾವತಿಸುವಂತೆ ವಂಚಕರು ಕೇಳಿದ್ದಾರೆ. ಇದರಿಂದ ಅನುಮಾನಗೊಂಡ ಅಭಿಜಿತ್‌ ಮತ್ತೆ ಹಣ ಪಾವತಿಸಲು ನಿರಾಕರಿಸಿದ್ದಾರೆ. 

ಬಳಿಕ ಸೈಬರ್‌ ವಂಚಕರು ಸಂಪರ್ಕ ಕಡಿದುಕೊಂಡಿದ್ದಾರೆ. ಅಭಿಜಿತ್‌ಗೆ ತಾನು ಸೈಬರ್‌ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದ ಬಳಿಕ ಸದಾಶಿವನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!