ರೌಡಿ ಶೀಟರ್​ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಪ್ರಮುಖ ನಾಲ್ವರು ಆರೋಪಿಗಳಿಗೆ ಡಿಫಾಲ್ಟ್‌ ಜಾಮೀನು ಮಂಜೂರು ಮಾಡಿ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರೌಡಿ ಶೀಟರ್​ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಪ್ರಮುಖ ನಾಲ್ವರು ಆರೋಪಿಗಳಿಗೆ ಡಿಫಾಲ್ಟ್‌ ಜಾಮೀನು ಮಂಜೂರು ಮಾಡಿ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ.

ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಸಿಐಡಿ ಪೊಲೀಸರು ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ಡಿಫಾಲ್ಟ್‌ ಜಾಮೀನು ಮಂಜೂರು ಮಾಡುವಂತೆ ಕೋರಿ ಆರೋಪಿಗಳಾದ ಪಿ. ಜಗದೀಶ್‌ ಅಲಿಯಾಸ್‌ ಜಗ್ಗ, ಕೆ. ಕಿರಣ್‌, ಬಿ. ವಿಮಲ್‌ ರಾಜ್‌ ಮತ್ತು ಆರ್‌. ಮದನ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರ ಪೀಠ, ನಿಗದಿತ ಅವಧಿಯಲ್ಲಿ ತನಿಖಾಧಿಕಾರಿಗಳು ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸದೇ ಇರುವುದರಿಂದ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಐದನೇ ಆರೋಪಿಯಾದ ಬಿಜೆಪಿ ಶಾಸಕ ಬೈರತಿ ಬಸವರಾಜುಗೆ ಗುರುವಾರವಷ್ಟೇ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

ಅರ್ಜಿದಾರ ಆರೋಪಿಗಳು ತಲಾ ಒಂದು ಲಕ್ಷ ಬಾಂಡ್ ರು. ವೈಯಕ್ತಿಕ ಬಾಂಡ್‌ ನೀಡಬೇಕು. ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಬೇಕು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಸಹಕರಿಸಬೇಕು. ಸಾಕ್ಷ್ಯಾಧಾರ ನಾಶಪಡಿಸಬಾರದು ಹಾಗೂ ಸಾಕ್ಷಿಗಳಿಗೆ ಬೆದರಿಸಬಾರದು. ನಿವಾಸ ಬದಲಿಸಿದರೆ ಅದರ ವಿಳಾಸವನ್ನು ತನಿಖಾಧಿಕಾರಿಗೆ ನೀಡಬೇಕು. ಸಕ್ಷಮ ನ್ಯಾಯಾಲಯದ ಅನುಮತಿ ಪಡೆಯದೇ ರಾಜ್ಯ ತೊರೆಯುವಂತಿಲ್ಲ. ಈ ಷರತ್ತಿನಲ್ಲಿ ಯಾವುದಾದರೂ ಒಂದು ಉಲ್ಲಂಘನೆಯಾದರೂ ಜಾಮೀನು ರದ್ದಾಗಲಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಇನ್ನು ಪ್ರಕರಣದಲ್ಲಿ ಕೋಕಾ ನಿಯಮಗಳನ್ನು ಹೇರಿದ್ದ ಸರ್ಕಾರದ ಆದೇಶ ರದ್ದುಪಡಿಸಿರುವ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದರೆ ಮುಂದಿನ ಪ್ರಕ್ರಿಯೆಯನ್ನು ಅರ್ಜಿದಾರರ ಆರೋಪಿಗಳು ಪಾಲಿಸಬೇಕು. ಅರ್ಜಿದಾರರಿಗೆ ನೀಡಿರುವ ಈ ಡಿಫಾಲ್ಟ್‌ ಜಾಮೀನು ಸುಪ್ರೀಂ ಕೋರ್ಟ್‌ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಪೀಠ ಜಾಮೀನು ಮಂಜೂರಾತಿಗೆ ಷರತ್ತು ವಿಧಿಸಿದೆ.