ಬೆಂಗಳೂರು : ನಟ ದರ್ಶನ್‌ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಹು ದೊಡ್ಡ ತಿರುವು ಸಿಕ್ಕಿದ್ದು, ಪ್ರಕರಣದಲ್ಲಿ ತಮ್ಮನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ದರ್ಶನ್‌ ಆಪ್ತ ಸ್ನೇಹಿತರಾದ ಪ್ರಕರಣದ 10 ಮತ್ತು 14ನೇ ಆರೋಪಿಗಳಾಗಿರುವ ವಿನಯ್‌ ಹಾಗೂ ಪ್ರದೋಷ್‌ ಅರ್ಜಿ ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್‌ ಸೇರಿದಂತೆ ಎಲ್ಲ ಆರೋಪಿಗಳು ವಹಿಸಿದ ಪಾತ್ರವನ್ನು ಅರ್ಜಿಯಲ್ಲಿ ಪ್ರದೋಷ್‌ ವಿವರಿಸಿದ್ದಾನೆ. ಅಲ್ಲದೆ, ‘ರೇಣುಕಾಸ್ವಾಮಿ ಮೊಬೈಲ್‌ನಲ್ಲಿದ್ದ ಮೆಸೇಜ್‌ಗಳನ್ನು ಓದಿದ್ದು ಬಿಟ್ಟರೆ ಯಾವುದೇ ಅಪರಾಧ ಕೃತ್ಯ ಎಸಗಿಲ್ಲ. ಸಾಯಿಸುವುದಾಗಿ ದರ್ಶನ್‌ ಬೆದರಿಸಿದ ಹಿನ್ನೆಲೆಯಲ್ಲಿ ಆತನಿಗೆ ಸಹಾಯ ಮಾಡಿದೆ. ಆದ್ದರಿಂದ ನನ್ನನ್ನು ಕ್ಷಮಿಸಿ ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು. ಪ್ರಾಸಿಕ್ಯೂಷನ್‌ ಪರ ನಾನು ಸಾಕ್ಷ್ಯ ನುಡಿಯುತ್ತೇನೆ’ ಎಂದು ಪ್ರದೋಷ್‌ ಅರ್ಜಿಯಲ್ಲಿ ಕೋರಿದ್ದಾನೆ.

ಪ್ರಕರಣದ ತನಿಖಾಧಿಕಾರಿಗಳಾದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರನ್ನು ಪ್ರತಿನಿಧಿಸುತ್ತಿರುವ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್‌ ಲಿಖಿತವಾಗಿಯೇ ಈ ಅರ್ಜಿಗೆ ಸಮ್ಮತಿ ನೀಡಿದ್ದಾರೆ. ಮತ್ತೊಂದೆಡೆ, ‘ಈ ಅರ್ಜಿಯನ್ನು ಪುರಸ್ಕರಿಸಬಾರದು. ಅರ್ಜಿ ಸಂಬಂಧ ತಮ್ಮ ವಾದವನ್ನು ಮಂಡಿಸಲು ಅವಕಾಶ ಕೊಡಬೇಕು’ ಎಂದು ದರ್ಶನ್‌ ಹಾಗೂ ಇತರೆ ಆರೋಪಿಗಳು ನ್ಯಾಯಾಲಯವನ್ನು ಬಲವಾಗಿ ಕೋರಿದ್ದಾರೆ. ಹೀಗಾಗಿ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ವಿನಯ್‌ ಮತ್ತು ಪ್ರದೋಷ್‌ ಸಲ್ಲಿಸಿರುವ ಅರ್ಜಿ ಸಂಬಂಧ ಇತರೆ ಆರೋಪಿಗಳ ವಾದ ಆಲಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಆ.10ರಂದು ಆದೇಶ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿ ವಿಚಾರಣೆ ಮುಂದೂಡಿದೆ.


ಪ್ರದೋಷ್‌ ತನ್ನ ಅರ್ಜಿಯಲ್ಲಿ 2003ರಿಂದ ಆರಂಭವಾದ ದರ್ಶನ್‌ ಜೊತೆಗಿನ ಸ್ನೇಹ, 2024ರ ಜೂ.9ರಂದು ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳು ವಹಿಸಿದ ಪಾತ್ರವನ್ನು ವಿವರಿಸಿದ್ದಾರೆ. ಅಲ್ಲದೇ, ರೇಣುಕಾಸ್ವಾಮಿ ಮೇಲೆ ದರ್ಶನ್‌ ಮೆರೆದ ಕ್ರೌರ್ಯ, ಕೊಲೆ ನಂತರ ಪೊಲೀಸರ ಮುಂದೆ ಕೆಲ ಆರೋಪಿಗಳು ಶರಣಾಗುವ ವಿಚಾರದಲ್ಲಿ ನಡೆಸಿದ ಮಾತುಕತೆಗಳನ್ನು ಪ್ರದೋಷ್‌ ತಿಳಿಸಿದ್ದಾರೆ.

ಪ್ರದೋಷ್‌ ಹೇಳಿದ್ದೇನು?:

ಇನ್ನು ‘ರೇಣುಕಾಸ್ವಾಮಿ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಖಾತೆಯಲ್ಲಿ ಕಳುಹಿಸಿದ ಸಂದೇಶಗಳನ್ನು ನಾನು ಓದಿದೆಯಷ್ಟೇ. ವಾಸ್ತವವಾಗಿ ಕೊಲೆ ಘಟನೆ ನಡೆಯದಂತೆ ನಾನು ತಡೆಯಲು ಮುಂದಾದೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುತ್ತಿದ್ದಾಗ ದರ್ಶನ್‌ ತಡೆಯಲು ಪ್ರಯತ್ನಿಸಿದೆ. ದರ್ಶನ್‌ ನನ್ನ ಮಾತು ಕೇಳಲಿಲ್ಲ. ಕೊಲೆ ನಡೆದ ನಂತರ ದರ್ಶನ್‌ ನನ್ನ ಬಳಿ ಸಹಾಯ ಕೇಳಿದ್ದಲ್ಲದೆ, ಸಹಾಯ ಮಾಡದೆ ಹೋದರೆ ಗನ್‌ನಿಂದ ಗುಂಡು ಹಾರಿಸಿ ಸಾಯಿಸುವುದಾಗಿ ದರ್ಶನ್‌ ಬೆದರಿಸಿದರು. ಹಾಗಾಗಿ ನಾನು ದರ್ಶನ್‌ಗೆ ಸಹಾಯ ಮಾಡಿದೆ’ ಎಂದು ಹೇಳಿರುವ ಪ್ರದೋಷ್‌, ‘ನನ್ನನ್ನು ಕ್ಷಮಿಸಬೇಕು. ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು. ಪ್ರಾಸಿಕ್ಯೂಷನ್‌ಗೆ (ತನಿಖಾಧಿಕಾರಿಗಳ ತನಿಖೆ ಹಾಗೂ ವಿಚಾರಣೆಗೆ) ಪೂರಕವಾಗಿ ಸಾಕ್ಷ್ಯವನ್ನು ನುಡಿಯುತ್ತೇನೆ. ಅದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ವಿನಯ್‌ ಕೂಡ ಮಾಫಿಸಾಕ್ಷಿ:

ರೇಣುಕಾಸ್ವಾಮಿ ಕೊಲೆ ನಡೆಯುವ ಮುನ್ನ ದರ್ಶನ್‌ ಪಾರ್ಟಿ ನಡೆಸಿದ ರಾಜರಾಜೇಶ್ವರಿ ನಗರದ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನ ಮಾಲೀಕನೂ ಆದ ಪ್ರಕರಣದ 10ನೇ ಆರೋಪಿ ವಿನಯ್‌ ಸಹ ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ಕುರಿತು ಪ್ರತಿಕ್ರಿಯಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್‌, ಅರ್ಜಿಯಲ್ಲಿ ವಿನಯ್‌ ವಿವರಗಳನ್ನು ನೀಡಿಲ್ಲ. ಆತನ ಅರ್ಜಿಯನ್ನು ವಿಚಾರಣೆಗೆ ಬಾಕಿ ಇಡಬೇಕು ಎಂದು ಕೋರಿದ್ದಾರೆ.

ಅರ್ಜಿಗೆ ಆಕ್ಷೇಪ:

ಈ ಮಧ್ಯೆ ಪ್ರದೋಷ್‌ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿರುವ ದರ್ಶನ್‌ ಹಾಗೂ ಇತರೆ ಆರೋಪಿಗಳು, ಅರ್ಜಿಯ ಕುರಿತು ವಾದ ಮಂಡಿಸಲು ತಮಗೆ ಹಕ್ಕು ಕಲ್ಪಿಸಬೇಕು ಎಂದು ಕೋರಿದರು. ಆರೋಪಿಗಳ ಈ ಮನವಿಗೆ ಆಕ್ಷೇಪಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್‌ ಅವರು, ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಪ್ರಾಸಿಕ್ಯೂಷನ್‌ ಒಪ್ಪಿಗೆ ನೀಡಿದೆ. ಆತ ಪ್ರಾಸಿಕ್ಯೂಷನ್‌ಗೆ ಬೆಂಬಲಿಸುವುದಾಗಿ ತಿಳಿಸಿದ್ದಾನೆ. ಆತ ಸತ್ಯ ನುಡಿಯುತ್ತಿದ್ದಾನೆಯೋ ಅಥವಾ ಇಲ್ಲವೇ ಎಂಬುದನ್ನು ಪ್ರಾಸಿಕ್ಯೂಷನ್‌ ಖಚಿತಪಡಿಸಬೇಕು. ಇತರೆ ಆರೋಪಿಗಳ ವಿರುದ್ಧವೇ ಪ್ರದೋಷ್‌ ಸಾಕ್ಷ್ಯ ನುಡಿಯುವುದರಿಂದ, ಆತನ ಅರ್ಜಿ ಪರಿಗಣಿಸುವ ವಿಚಾರದಲ್ಲಿ ಆರೋಪಿಗಳ ವಾದ ಆಲಿಸುವ ಅಗತ್ಯವೇ ಇಲ್ಲ ಎಂದು ನ್ಯಾಯಾಲಯಕ್ಕೆ ಪ್ರತಿಪಾದಿಸಿದರು. ಅಂತಿಮವಾಗಿ ನ್ಯಾಯಾಲಯವು ಈ ಎಲ್ಲಾ ವಾದ-ಪ್ರತಿವಾದ ಆಲಿಸಿ, ಆ.10ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿತು.