ಸಮಯಕ್ಕೆ ಸರಿಯಾಗಿ ಚಿತ್ರ ಪ್ರದರ್ಶನ ಮಾಡದ ಬೆಂಗಳೂರಿನ ಪಿವಿಆರ್‌ಗೆ ₹1 ಲಕ್ಷ ದಂಡ

KannadaprabhaNewsNetwork |  
Published : Feb 20, 2025, 01:30 AM ISTUpdated : Feb 20, 2025, 06:59 AM IST
Shenoys multiplex theatre

ಸಾರಾಂಶ

ಸರಿಯಾದ ಸಮಯಕ್ಕೆ ಚಿತ್ರ ಪ್ರದರ್ಶನ ಮಾಡದಕ್ಕೆ ಬೆಂಗಳೂರಿನ ಪಿವಿಆರ್‌-ಐನಾಕ್ಸ್‌ಗೆ ₹1 ಲಕ್ಷ ದಂಡ ವಿಧಿಸಿ ಬೆಂಗಳೂರಿನ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯವು ಆದೇಶಿಸಿದೆ.

 ಬೆಂಗಳೂರು : ಸರಿಯಾದ ಸಮಯಕ್ಕೆ ಚಿತ್ರ ಪ್ರದರ್ಶನ ಮಾಡದಕ್ಕೆ ಬೆಂಗಳೂರಿನ ಪಿವಿಆರ್‌-ಐನಾಕ್ಸ್‌ಗೆ ₹1 ಲಕ್ಷ ದಂಡ ವಿಧಿಸಿ ಬೆಂಗಳೂರಿನ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯವು ಆದೇಶಿಸಿದೆ.ಬೆಂಗಳೂರಿನ ನಿವಾಸಿ ಎಂ.ಆರ್‌. ಅಭಿಷೇಕ್‌ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ಮಾಡಿದೆ. ಗ್ರಾಹಕರ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವ ಹಕ್ಕನ್ನು ನಿಮಗೆ ಯಾರು ನೀಡಿದ್ದಾರೆ ಎಂದು ಪಿವಿಆರ-ಐನಾಕ್ಸ್‌ ಆಡಳಿತ ಮಂಡಳಿಯನ್ನು ಖಾರವಾಗಿ ಪ್ರಶ್ನಿಸಿರುವ ನ್ಯಾಯಾಲಯ, ವಿಧಿಸಲಾಗಿರುವ ದಂಡ ಮೊತ್ತದಲ್ಲಿ 50 ಸಾವಿರ ರು. ಅನ್ನು ದೂರುದಾರ ಅಭಿಷೇಕ್‌ಗೆ ನೀಡಬೇಕು. ಪ್ರಕರಣವನ್ನು ದಾಖಲಿಸಿ ಅವರು ಮಾಡಿದ ಇತರೆ ವೆಚ್ಚಗಳಿಗಾಗಿ 8 ಸಾವಿರ ರು. ಪರಿಹಾರವಾಗಿ ಪಾತಿಸಬೇಕು. ಮುಂದಿನ ದಿನಗಳಲ್ಲಿ ಟಿಕೆಟ್‌ನಲ್ಲಿ ನಮೂದಿಸಿದ ಸಮಯಕ್ಕೆ ಸರಿಯಾಗಿ ಚಿತ್ರ ಪ್ರದರ್ಶನವನ್ನು ಆರಂಭಿಸಬೇಕು ಎಂದು ಆದೇಶಿಸಿದೆ.

ಪ್ರಕರಣವೇನು?: ಅಭಿಷೇಕ್‌ 2023ರ ಡಿ.26ರಂದು ಸಂಜೆ 4.05ಕ್ಕೆ ಬೆಂಗಳೂರಿನ ಪಿವಿಆರ್‌-ಐನಾಕ್ಸ್‌ನಲ್ಲಿ "ಶ್ಯಾಮ್‌ ಬಹದ್ದೂರ್‌ " ಚಿತ್ರವನ್ನು ವೀಕ್ಷಿಸಲು ಮೂರು ಟಿಕೆಟ್‌ ಖರೀದಿಸಿ, 825.66 ರು. ಪಾವತಿಸಿದ್ದರು. ಸಿನಿಮಾ 4.05ಕ್ಕೆ ಆರಂಭವಾಗಬೇಕಾದ ಜಾಹೀರಾತುಗಳ ಪ್ರದರ್ಶನದಿಂದಾಗಿ 25 ನಿಮಿಷಗಳ ಕಾಲ ಸಿನಿಮಾ ಪ್ರದರ್ಶನ ತಡವಾಗಿತ್ತು. ಇದರಿಂದ ಕಿರಿಕಿರಿ ಅನುಭವಿಸಿದ್ದ ಅಭಿಷೇಕ್‌, ಜಾಹೀರಾತು ಪ್ರದರ್ಶನವನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದರು.ನಂತರ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿ, ಟಿಕೆಟ್‌ನಲ್ಲಿ ನಮೂದಿಸಿದಂತೆ ಚಿತ್ರವು ಸಂಜೆ 4.05ಕ್ಕೆ ಆರಂಭವಾಗಿ, 6.30ಕ್ಕೆ ಸಿನಿಮಾ ಮುಗಿಯಬೇಕಿತ್ತು. ಆದರೆ, 4.28ರವರೆಗೆ ಸರಣಿ ಜಾಹೀರಾತು ಪ್ರದರ್ಶನ ಮಾಡಿದ್ದರಿಂದ ಸಿನಿಮಾ ಪ್ರದರ್ಶನ ಆರಂಭವು 25 ನಿಮಿಷ ತಡವಾಯಿತು. ಪರಿಣಾಮ ಸರಿಯಾದ ಸಮಯಕ್ಕೆ ಕಚೇರಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಆಕ್ಷೇಪಿಸಿದ್ದರು.

ಅಲ್ಲದೆ, ಚಿತ್ರಮಂದಿರದ ಆಡಳಿತ ಮಂಡಳಿಯು ತಪ್ಪಾಗಿ ಚಿತ್ರದ ಸಮಯವನ್ನು ಟಿಕೆಟ್‌ನಲ್ಲಿ ನಮೂದಿಸಿದೆ. ಚಿತ್ರ ಪ್ರದರ್ಶನ ಸಮಯದಲ್ಲಿ ಕಾನೂನು ಬಾಹಿರವಾಗಿ ಜಾಹೀರಾತು ನೀಡುವ ಮೂಲಕ ಲಾಭ ಪಡೆಯುತ್ತಿದೆ. ಜಾಹೀರಾತು ಪ್ರದರ್ಶನದಿಂದ ತಮಗೆ ಕಿರಿಕಿರಿ ಉಂಟಾಗಿದೆ ಎಂದು ಆಕ್ಷೇಪಿಸಿದೆ. ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯವು ಪಿವಿಆರ್‌-ಐನಾಕ್ಸ್‌ ಆಡಳಿತ ಮಂಡಳಿಗೆ ಒಂದು ಲಕ್ಷ ರು. ದಂಡ ವಿಧಿಸಿ ಆದೇಶಿಸಿದೆ.

PREV

Recommended Stories

ಖಿನ್ನತೆಗೆ ಒಳಗಾಗಿ ಕಾವೇರಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಮದುವೆ ಆಗುವುದಾಗಿ ಅತ್ಯಾ*ರ : ಮಾಜಿ ಶಾಸಕರ ವಿರುದ್ಧ ಎಫ್‌ಐಆರ್‌