ಕಟ್ಟಡ ಸಾಮಗ್ರಿಗಳ ಪೂರೈಕೆ ಮಾಡಿರುವುದಾಗಿ ನಕಲಿ ಬಿಲ್ ಸೃಷ್ಟಿಸಿ 1,464 ಕೋಟಿ ರು. ಅವ್ಯವಹಾರ ಎಸಗಿದ್ದ ಅಂತರಾಜ್ಯ ನಕಲಿ ಬಿಲ್ಲಿಂಗ್ ದಂಧೆಯನ್ನು ಕರ್ನಾಟಕ ಹಾಗೂ ತಮಿಳುನಾಡು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದು, ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಬೆಂಗಳೂರು : ಕಟ್ಟಡ ಸಾಮಗ್ರಿಗಳ ಪೂರೈಕೆ ಮಾಡಿರುವುದಾಗಿ ನಕಲಿ ಬಿಲ್ ಸೃಷ್ಟಿಸಿ 1,464 ಕೋಟಿ ರು. ಅವ್ಯವಹಾರ ಎಸಗಿದ್ದ ಅಂತರಾಜ್ಯ ನಕಲಿ ಬಿಲ್ಲಿಂಗ್ ದಂಧೆಯನ್ನು ಕರ್ನಾಟಕ ಹಾಗೂ ತಮಿಳುನಾಡು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದು, ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಬೆಂಗಳೂರಿನ ರೇವತಿ, ಇಡಲ್ಲ ಪ್ರತಾಪ್ ಮತ್ತು ತಮಿಳುನಾಡಿನ ನಫೀಜ್ ಮತ್ತು ಇರ್ಬಾಜ್ ಬಂಧಿತರು. ಇವರನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರು ಸಿಮೆಂಟ್, ಕಬ್ಬಿಣ-ಉಕ್ಕು ಸೇರಿ ಕಟ್ಟಡ ಸಾಮಾಗ್ರಿಗಳನ್ನು ಪೂರೈಕೆ ಮಾಡುವುದಾಗಿ ನೋಂದಾಯಿಸಿಕೊಂಡಿದ್ದರು. ಅಸಲಿಗೆ ಯಾವುದೇ ಸರಕುಗಳನ್ನು ಪೂರೈಸದೆ, ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಅಂದಾಜು 1,464 ಕೋಟಿ ರು. ವ್ಯವಹಾರ ನಡೆಸಲಾಗಿದೆ ಎಂದು ತೋರಿಸಿ ಸರ್ಕಾರಕ್ಕೆ ವಂಚಿಸಿದ್ದಾರೆ.
ಅಲ್ಲದೆ, ನಕಲಿ ಬಿಲ್‌ಗಳು ಮೂಲಕ ಸುಮಾರು 355 ಕೋಟಿ ರು. ಇನ್‌ಪೂಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದು, ಕಟ್ಟಡ ಕೆಲಸ ಮಾಡುವ ಗುತ್ತಿಗೆದಾರರು ಮತ್ತು ಕೆಲ ವ್ಯಾಪಾರಿಗಳಿಗೆ ಈ ವಂಚನೆ ಹಣ ವರ್ಗಾವಣೆ ಮಾಡಿರುವುದು ತನಿಖೆ ವೇಳೆ ಕಂಡುಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಎಸ್‌ಟಿ ನೋಂದಣಿ ರದ್ದುಪಡಿಸಿದ್ದರು:
ಈ ನಕಲಿ ವ್ಯಾಪಾರಿಗಳು ಆನ್‌ಲೈನ್‌ನಲ್ಲಿ ಪಡೆದ ಸ್ಟಾಂಪ್ ಪೇಪರ್‌ಗಳನ್ನು ತಿದ್ದಿ, ಸುಳ್ಳು ಬಾಡಿಗೆ ಒಪ್ಪಂದಗಳನ್ನು ಸೃಷ್ಟಿಸಿ, ನಕಲಿ ಸಹಿಗಳು, ತೆರಿಗೆ ರಸೀದಿಗಳು ಮತ್ತು ನೋಟರಿ ದೃಢೀಕರಣಗಳನ್ನು ಬಳಸಿ ಜಿಎಸ್‌ಟಿ ನೋಂದಣಿ ಪಡೆದಿದ್ದರು. ಇಂಥ ಕೃತಕ ದಾಖಲೆಗಳ ಮೂಲಕ ಅನೇಕ ನಕಲಿ ಕಂಪನಿ ತೆರೆದಿದ್ದರು ಎಂಬುದು ಗೊತ್ತಾಗಿದೆ.
ಆರೋಪಿಗಳು ಇದಕ್ಕೂ ಮುನ್ನ ದೊಡ್ಡ ಪ್ರಮಾಣದಲ್ಲಿ ತೆರಿಗೆ ಕ್ರೆಡಿಟ್ ವರ್ಗಾಯಿಸಿದ್ದಾರೆ. ಬಳಿಕ ಇಲಾಖೆಗೆ ಅನುಮಾನ ಬರಬಹುದು ಎಂದು ತಾವೇ ತಮ್ಮ ಜಿಎಸ್‌ಟಿ ನೋಂದಣಿ ರದ್ದುಪಡಿಸಿಕೊಳ್ಳುತ್ತಿದ್ದರು. ಅದರಿಂದ ಆಡಿಟ್ ಮತ್ತು ಪರಿಶೀಲನೆಗಳಿಂದ ತಪ್ಪಿಸಿಕೊಳ್ಳುವ ಹೊಸ ತಂತ್ರ ಬಳಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಣಿಜ್ಯ ತೆರಿಗೆ ಅಧಿಕಾರಿಗಳ ಜತೆ ದಾಳಿ
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ತಮಿಳುನಾಡಿನ ವಾಣಿಜ್ಯ ತೆರಿಗೆ ಅಧಿಕಾರಿಗಳ ಜತೆ ಸೇರಿ ಬೆಂಗಳೂರು, ಚೆನ್ನೈ, ವೆಲ್ಲೂರು ಮತ್ತು ಪೆರ್ನಂಪಟ್ಟುವಿನಲ್ಲಿ ಒಂದೇ ಸಮಯದಲ್ಲಿ ದಾಳಿ ನಡೆಸಲಾಗಿತ್ತು. ದಾಳಿ ವೇಳೆ 24 ಮೊಬೈಲ್‌ಗಳು, 51 ಸಿಮ್ ಕಾರ್ಡ್‌ಗಳು, 2 ಪೆನ್‌ಡ್ರೈವ್‌ಗಳು, ಹಲವು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ವಿವಿಧ ಕಂಪನಿಗಳ ರಬ್ಬರ್ ಸ್ಟ್ಯಾಂಪ್‌ಗಳನ್ನು ಜಪ್ತಿ ಮಾಡಲಾಗಿದೆ.
ವಾಣಿಜ್ಯ ಇಲಾಖೆಯ ಹೆಚ್ಚುವರಿ ಆಯುುಕ್ತರ ನೇತೃತ್ವದಲ್ಲಿ ಉಪ ಆಯುಕ್ತ ಎಸ್.ಎಂ.ಭರತೇಶ್ ಮತ್ತು ಸಿ. ಮಹಾದೇವ ಮತ್ತು ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
