ಗೃಹಲಕ್ಷ್ಮೀ ಯೋಜನೆಯ 2 ತಿಂಗಳ ಹಣವನ್ನು ಫಲಾನುಭವಿಗಳಿಗೆ ನೀಡದೆ ರಾಜ್ಯದ ಮಹಿಳೆಯರಿಗೆ ವಂಚಿಸಿದ ರಾಜ್ಯ ಸರಕಾರದ ವಿರುದ್ಧವೂ ಪ್ರತಿಭಟನೆ ನಡೆಸಲಿ ಎಂದು ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ಹೇಳಿದ್ದಾರೆ.

ಉಡುಪಿ: ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ದುರುದ್ದೇಶದಿಂದ ಆಧಾರ ರಹಿತ ಮತ ಚೋರಿ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರಿಗೆ ಮಹಿಳೆಯರ ಬಗ್ಗೆ ಕಿಂಚಿತ್ ಕಾಳಜಿ ಇದ್ದರೆ ಗೃಹಲಕ್ಷ್ಮೀ ಯೋಜನೆಯ 2 ತಿಂಗಳ ಹಣವನ್ನು ಫಲಾನುಭವಿಗಳಿಗೆ ನೀಡದೆ ರಾಜ್ಯದ ಮಹಿಳೆಯರಿಗೆ ವಂಚಿಸಿದ ರಾಜ್ಯ ಸರಕಾರದ ವಿರುದ್ಧವೂ ಪ್ರತಿಭಟನೆ ನಡೆಸಲಿ ಎಂದು ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ಹೇಳಿದ್ದಾರೆ.

ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಧಾನಸಭೆ ಅಧಿವೇಶನದಲ್ಲಿ ಗೃಹಲಕ್ಷ್ಮೀ ಯೋಜನೆ ಬಗ್ಗೆ ತಪ್ಪು ಮಾಹಿತಿ ನೀಡಿ ರಾಜ್ಯದ ಜನತೆಗೆ ಮೋಸ ಮಾಡಿದ್ದಾರೆ. ಸುಮಾರು 5 ಸಾವಿರ ಕೋಟಿ ಹಣ ದುರ್ಬಳಕೆ ಮಾಡಿದ ಆರೋಪ ಸಚಿವರ ಮೇಲಿದ್ದರೂ ಈ ಬಗ್ಗೆ ಮಹಿಳಾ ಕಾಂಗ್ರೆಸ್ ಜಾಣ ಮೌನ ವಹಿಸಿದೆ. ರಾಜ್ಯದ ಗೃಹ ಸಚಿವರು, ಹೊಸ ವರ್ಷಾಚರಣೆ ಸಂದರ್ಭದಲ್ಲಿ ವಿಪರೀತ ಮದ್ಯ ಸೇವಿಸಿದ ವ್ಯಕ್ತಿಯನ್ನು ಪೋಲಿಸ್ ವಾಹನದಲ್ಲಿ ಮನೆಗೆ ಕರೆದೊಯ್ಯಲು ಸರ್ಕಾರ ಮುಂದಾಗಿದೆ ಎಂಬ ಹೇಳಿಕೆ ನೀಡುವ ಮೂಲಕ ರಾಜ್ಯ ಸರ್ಕಾರ ಮದ್ಯಪಾನಿಗಳಿಗೆ ಉತ್ತೇಜನ ನೀಡುತ್ತಿರುವುದನ್ನು ಸಾಬೀತುಪಡಿಸಿರುವುದು ದುರದೃಷ್ಟಕರ.ಪಾನ ನಿಷೇಧದ ವಿರುದ್ಧ ಸಮರ ಸಾರಿದ್ದ ಮಹಾತ್ಮಾ ಗಾಂಧಿ ಅವರ ಕಟ್ಟೆಯಲ್ಲಿ ಕುಳಿತು ಪ್ರತಿಭಟನೆ ನಡೆಸುವ ಮಹಿಳಾ ಕಾಂಗ್ರೆಸ್ ನಾಯಕಿಯರು ರಾಜ್ಯ ಗೃಹ ಸಚಿವರ ಮದ್ಯಪಾನಕ್ಕೆ ಪ್ರೇರಣೆ ನೀಡುವ ಹೇಳಿಕೆಯನ್ನು ಖಂಡಿಸುವ ಧೈರ್ಯ ತೋರದಿರುವುದು ವಿಷಾದನೀಯ ಎಂದು ನೀತಾ ಪ್ರಭು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.