ಒಂದೇ ಸೈಟ್‌ಗೆ 22 ಬ್ಯಾಂಕಲ್ಲಿ ₹ 10 ಕೋಟಿ ಸಾಲ !

KannadaprabhaNewsNetwork | Updated : Apr 20 2024, 06:02 AM IST

ಸಾರಾಂಶ

ಒಂದೇ ಸೈಟನ್ನು ಬೇರೆ ಬೇರೆ ಸರ್ವೇ ನಂ.ನಲ್ಲಿ ನೋಂದಾಯಿಸಿ ನಕಲಿ ದಾಖಲೆ ಸೃಷ್ಟಿಸಿದ ಕಿರಾತಕರು, 22 ಬ್ಯಾಂಕ್‌ಗಳಲ್ಲಿ 10 ಕೋಟಿ ಸಾಲ ಮಾಡಿ ವಂಚಿಸಿದ್ಧಾರೆ.

 ಬೆಂಗಳೂರು :  ಒಂದೇ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ ಸುಮಾರು 22ಕ್ಕೂ ಹೆಚ್ಚಿನ ಬ್ಯಾಂಕ್‌ಗಳಿಂದ ₹10 ಕೋಟಿ ಸಾಲ ಪಡೆದು ವಂಚಿಸಿದ್ದ ಒಂದೇ ಕುಟುಂಬದ ಐವರು ಸೇರಿ 6 ಮಂದಿ ಜಯನಗರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಬೇಗೂರು ನಿವಾಸಿಗಳಾದ ನಾಗೇಶ್ ಭಾರದ್ವಾಜ್‌, ಆತನ ಪತ್ನಿ ಸುಮಾ, ಷಡ್ಕ ಶೇಷಗಿರಿ, ನಾದಿನಿ ಶೋಭಾ, ಬಾಮೈದ ಸತೀಶ್‌ ಹಾಗೂ ಸ್ನೇಹಿತೆ ವೇದಾ ಬಂಧಿತರಾಗಿದ್ದು, ಆರೋಪಿಗಳಿಂದ ನಕಲಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಎರಡು ವರ್ಷಗಳ ಹಿಂದೆ ತಮ್ಮ ಬ್ಯಾಂಕ್‌ನಲ್ಲಿ ಬೇಗೂರು ಗ್ರಾಮದ 2100 ಅಡಿ ಉದ್ದಳತೆಯ ಜಾಗದ ಕಟ್ಟಡವಿದೆ ಎಂದು ಹೇಳಿ ₹1.3 ಕೋಟಿ ಸಾಲ ಪಡೆದು ವಂಚಿಸಿದ್ದಾರೆ ಎಂದು ನಾಗೇಶ್ ದಂಪತಿ ವಿರುದ್ಧ ಜಯನಗರದ 3ನೇ ಹಂತದ ಸಹಕಾರಿ ಬ್ಯಾಂಕ್‌ನ ವ್ಯವಸ್ಥಾಪಕ ದೂರು ನೀಡಿದ್ದರು. ಈ ಹಳೇ ಪ್ರಕರಣದ ತನಿಖೆಯನ್ನು ಜಯನಗರದ ಉಪ ವಿಭಾಗದ ಎಸಿಪಿ ಎಸಿಪಿ ವಿ.ನಾರಾಯಣಸ್ವಾಮಿ ಅವರಿಗೆ ವಹಿಸಲಾಯಿತು. ಆಗ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ವಂಚನೆ ಕೃತ್ಯ ಬಯಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.

ಹೇಗೆ ವಂಚನೆ?:

ಬೇಗೂರಿನಲ್ಲಿ ನಾಗೇಶ್ ಭಾರದ್ವಾಜ್ ದಂಪತಿಗೆ ಸೇರಿದ 2100 ಅಡಿ ಅಳತೆಯ ನಿವೇಶನದಲ್ಲಿ ಕಟ್ಟಡವಿದೆ. ಈ ಕಟ್ಟಡಕ್ಕೆ ವಿವಿಧ ಸರ್ವೆ ನಂಬರ್‌ ಹಾಗೂ ವಿವಿಧ ನಿವೇಶನ ನಂಬರ್‌ಗಳನ್ನು ನಮೂದಿಸಿ ಹಾಗೂ ನಿವೇಶನ ಉದ್ದಳತೆಯಲ್ಲಿ ಸಹ ಬದಲಾವಣೆ ಮಾಡಿ ನಕಲಿ ದಾಖಲೆಗಳನ್ನು ನಾಗೇಶ್ ದಂಪತಿ ಸೃಷ್ಟಿಸಿದ್ದರು. ಈ ದಾಖಲೆಗಳಿಂದ ಡೀಡ್ ಮಾಡಿಸಿ ನಂತರ ಸಬ್ ರಿಜಿಸ್ಟ್ರರ್ ಕಚೇರಿಯಲ್ಲಿ ತಮ್ಮ ಕುಟುಂಬದ ಸದಸ್ಯರಿಗೆ ಮಾರಾಟ ಮಾಡಿದಂತೆ ದಂಪತಿ ನೋಂದಣಿ ಮಾಡಿಸಿದ್ದರು.

ಈ ಭೂ ದಾಖಲೆಗಳನ್ನು ಬಳಸಿ ಅಡಮಾನವಿಟ್ಟು ಕಂತು ಸಾಲ ಮತ್ತು ಯಂತ್ರೋಪಕರಣ ಸಾಲವೆಂದು ರಾಷ್ಟ್ರೀಕೃತ ಹಾಗೂ ಸಹಕಾರ ಸೇರಿ 22 ಬ್ಯಾಂಕ್‌ಗಳಲ್ಲಿ ₹10 ಕೋಟಿ ಸಾಲವನ್ನು ಆರೋಪಿಗಳು ಪಡೆದು ವಂಚಿಸಿದ್ದರು. ಆದರೆ ನಿಗದಿತ ಸಮಯಕ್ಕೆ ಸಾಲ ತೀರಿಸದೆ ಡಿಫಾಲ್ಟರ್‌ ಆಗಿದ್ದರು. ಆಗ ಬ್ಯಾಂಕ್‌ಗಳು ಆ ನಿವೇಶನದ ದಾಖಲೆಗಳನ್ನು ಪರಿಶೀಲಿಸಿದಾಗ ಮೋಸ ನಡೆದಿರುವ ಸಂಗತಿ ಪತ್ತೆಯಾಗಿದೆ. ಅಂತೆಯೇ 2022ರಲ್ಲಿ ಜಯನಗರ 3ನೇ ಹಂತದ ಕೋ ಆಪರೇಟಿವ್‌ ಬ್ಯಾಂಕ್‌ನಲ್ಲಿ ನಕಲಿ ದಾಖಲೆ ನೀಡಿ ₹1.3 ಕೋಟಿ ಸಾಲ ಪಡೆದು ವಂಚನೆ ಸಹ ಬೆಳಕಿಗೆ ಬಂದಿತ್ತು ಎಂದು ಆಯುಕ್ತರು ವಿವರಿಸಿದ್ದಾರೆ.

ಆದರೆ ಈ ಬಗ್ಗೆ ಅಂದೇ ಪ್ರಕರಣ ದಾಖಲಾಗಿದ್ದರೂ ತನಿಖೆ ನಡೆಯದೆ ಕಡತಗಳು ಧೂಳು ತಿನ್ನುತ್ತಿದ್ದವು. ಕೊನೆಗೆ ಹಳೇ ಪ್ರಕರಣ ವಿಲೇವಾರಿಗೆ ಆಯುಕ್ತರು ಸೂಚಿಸಿದಾಗ ಬ್ಯಾಂಕ್ ವಂಚನೆ ಪ್ರಕರಣದ ಕುರಿತು ಮರು ತನಿಖೆ ಶುರುವಾಗಿ ಆರೋಪಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವಂತಾಗಿದೆ.

22ರಲ್ಲಿ 4 ಬ್ಯಾಂಕ್‌ಗಳಷ್ಟೇ ದೂರು

ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ವಂಚಿಸಿದ್ದರು ಸಹ 22 ಬ್ಯಾಂಕ್‌ಗಳ ಪೈಕಿ 4 ಬ್ಯಾಂಕ್‌ಗಳು ಮಾತ್ರ ದೂರು ನೀಡಿವೆ. ಇನ್ನುಳಿದ ಬ್ಯಾಂಕ್‌ಗಳು ಉದಾಸೀನತೆಗೆ ಕಾರಣ ಸ್ಪಷ್ಟವಾಗಿಲ್ಲ. ಕಮಿಷನ್ ಆಸೆಗೆ ಆರೋಪಿಗಳಿಗೆ ಸಾಲ ನೀಡಿಕೆಯಲ್ಲಿ ಕೆಲ ಬ್ಯಾಂಕ್ ಅಧಿಕಾರಿಗಳು ಸಹ ಶಾಮೀಲಾಗಿರುವ ಅನುಮಾನವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ವಜಾಗೊಂಡ ಸರ್ಕಾರಿ ನೌಕರ, ಈಗ ವಂಚಕ

ಮೈಸೂರಿನ ನಾಗೇಶ್ ಭಾರದ್ವಾಜ್‌, ತನ್ನ ಪತ್ನಿ ಜತೆ ಬೇಗೂರಿನಲ್ಲಿ ವಾಸವಾಗಿದ್ದ. ಅಪಾರ್ಟ್‌ಮೆಂಟ್‌ಗಳಲ್ಲಿ ಅಡುಗೆ ಕೆಲಸ ಮಾಡಿಕೊಂಡು ದಂಪತಿ ಜೀವನ ಸಾಗಿಸುತ್ತಿದ್ದರು. ಅಲ್ಲದೆ ಆತನ ಷಡ್ಕ ಹಾಗೂ ಬಾಮೈದ ಸಹ ಅಡುಗೆ ಕೆಲಸಗಾರರು. ಈ ಮೊದಲು ಎಜೆ ಕಚೇರಿಯಲ್ಲಿ ನಾಗೇಶ್ ಕೆಲಸ ಮಾಡುತ್ತಿದ್ದ. ಆಗ ಕರ್ತವ್ಯ ಲೋಪದ ಆರೋಪದ ಮೇರೆಗೆ ಆತನನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಇದಾದ ಬಳಿಕ ತನ್ನ ಕುಟುಂಬದ ಸದಸ್ಯರ ಜತೆ ಸೇರಿ ಬ್ಯಾಂಕ್‌ಗಳಿಗೆ ವಂಚಿಸಿ ಹಣ ದೋಚುವ ಕೃತ್ಯಕ್ಕಿಳಿದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ವಂಚನೆ ಹಣದಲ್ಲಿ ಹಂಚಿಕೆ: ಬ್ಯಾಂಕ್‌ಗಳಿಗೆ ವಂಚಿಸಿದ ಹಣದಲ್ಲಿ ಆರೋಪಿಗಳು ಹಂಚಿಕೊಂಡಿದ್ದರು. ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಶ್ಯೂರಿಟಿಗೆ ಸಹಿ ಹಾಕಿ ಹಣ ಪಡೆದ ತಪ್ಪಿಗೆ ನಾಗೇಶ್‌ನ ಸ್ನೇಹಿತ ವೇದಾ ಸಹ ಜೈಲೂಟ ಸವಿಯಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article