ಕನ್ನಡಪ್ರಭ ವಾರ್ತೆ ಬೆಂಗಳೂರು

ಎರಡು ಪ್ರತ್ಯೇಕ ಪ್ರಕರಣದಲ್ಲಿ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಸಂಕಷ್ಟದಲ್ಲಿದ್ದ ಮಹಿಳೆ ಸೇರಿ ಇಬ್ಬರನ್ನು ರಕ್ಷಿಸಿದ್ದಾರೆ.

25 ಅಡಿ ಆಳದ ಗುಂಡಿಗೆ ಬಿದ್ದಿದ್ದ ಮಹಿಳೆಯನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

ಶುಕ್ರವಾರ ಬೆಳಗಿನ ಜಾವ ನಾಗರಭಾವಿಯ ಸಾರ್ವಜನಿಕ ಉದ್ಯಾನವನದ ಸಮೀಪ ವಾಕಿಂಗ್‌ ಮಾಡುತ್ತಿದ್ದ ಸುಮಾರು 56 ವರ್ಷದ ಸುಧಾ ಪರಿಮಳ ಎಂಬ ಮಹಿಳೆಯು 25 ಅಡಿ ಆಳದ ಗುಂಡಿಗೆ ಆಕಸ್ಮಿಕವಾಗಿ ಬಿದ್ದರು. ಮೇಲಕ್ಕೆ ಬರಲು ಸಾಧ್ಯವಾಗದೆ ಸಂಕಷ್ಟಕ್ಕೀಡಾಗಿ ಆತಂಕಗೊಂಡಿದ್ದರು.

ಆಕೆಯ ರಕ್ಷಣೆಗಾಗಿ ಅವರ ಮಗ ಕೂಡಲೇ ತುರ್ತು ಸಹಾಯವಾಣಿಯಾದ ನಮ್ಮ 112ಗೆ ಕರೆ ಮಾಡಿದರು. ಕೂಡಲೇ 112 ಸಿಬ್ಬಂದಿಯ ಚಂದ್ರಾಲೇಔಟ್ ಪೊಲೀಸ್ ಠಾಣೆಯ ಹೊಯ್ಸಳದಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಶ್ರೀನಿವಾಸ್‌ ಮೂರ್ತಿ ಹಾಗೂ ಹೆಡ್ ಕಾನ್‌ಸ್ಟೇಬಲ್‌ ವಿನೋದಾ ಅವರಿಗೆ ಮಾಹಿತಿ ರವಾನಿಸಿದರು. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಿಳೆ ಬಿದ್ದಿದ್ದ ಪ್ರದೇಶವನ್ನು ತೀವ್ರ ಶೋಧಿಸಿದರು.


ನಂತರ ಮಹಿಳೆಯ ಮೊಬೈಲ್ ಫೋನ್‌ನ ಸಹಾಯದಿಂದ ಅವರು ಇರುವ ಸ್ಥಳವನ್ನು ಪತ್ತೆಹಚ್ಚಿದರು. ಗುಂಡಿಯೊಳಗೆ ಇದ್ದ ಮಹಿಳೆಯು ದಣಿದು ದುರ್ಬಲ ಸ್ಥಿತಿಯಲ್ಲಿ ಇದ್ದರು. ಅಧಿಕಾರಿಗಳು ಹಗ್ಗದ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ, ಮಹಿಳೆಯನ್ನು ಸುರಕ್ಷಿತವಾಗಿ ಗುಂಡಿಯಿಂದ ಮೇಲಕ್ಕೆ ಎತ್ತಿ ರಕ್ಷಿಸಿದರು. ನಂತರ ಅವರನ್ನು ಚಿಕಿತ್ಸೆಗಾಗಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ರಕ್ಷಣೆ

ಮತ್ತೊಂದು ಪ್ರಕರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಮಲ್ಲೇಶ್ವರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

ಮಾ.5 ರಂದು ಮಧ್ಯಾಹ್ನದ ವೇಳೆ ಸುಬ್ರಹ್ಮಣ್ಯನಗರದ ರೈಲು ಹಳಿಯ ಸಮೀಪ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತನ್ನ ಕುಟುಂಬಸ್ಥರಿಗೆ ಕರೆ ಮಾಡಿ ಹೇಳಿದ್ದ. ಈ ಮಾಹಿತಿಯನ್ನು ಕುಟುಂಬಸ್ಥರು ಕೂಡಲೇ ನಮ್ಮ 112 ಕರೆಮಾಡಿ ತಿಳಿಸಿದರು. ತಕ್ಷಣ 112 ಸಿಬ್ಬಂದಿ, ಮಲ್ಲೇಶ್ವರ ಪೊಲೀಸ್ ಠಾಣೆಯ ಹೊಯ್ಸಳದಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಜಗದೀಶ್ ಮತ್ತು ಪೊಲೀಸ್ ಕಾನ್‌ಸ್ಟೇಬಲ್‌ ನಿಜಲಿಂಗ ಅವರಿಗೆ ಮಾಹಿತಿಯನ್ನು ರವಾನಿಸಿದರು.

ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿ ಬಳಿಕ ಆತನನ್ನು ವಿಚಾರಣೆ ನಡೆಸಿದ್ದಾಗ ವೈಯಕ್ತಿಕ ಸಮಸ್ಯೆಯಿಂದ ಮನನೊಂದು, ಮದ್ಯಪಾನ ಮಾಡಿ, ರೈಲು ಹಳಿಯ ಸಮೀಪ ಆತ್ಮಹತ್ಯೆಗೆ ಯತ್ನಿಸುತ್ತಿರುವುದಾಗಿ ತಿಳಿಸಿದ್ದಾನೆ. ಬಳಿಕ ಪೊಲೀಸರು ಆತನನ್ನು ಸಂತೈಸಿ, ಸಮಾಲೋಚನೆ ನಡೆಸಿ, ಆತನನ್ನು ಸುರಕ್ಷಿತವಾಗಿ ಕುಟುಂಬದ ಸದಸ್ಯರಿಗೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.