ಸೈಬರ್‌ ವಂಚನೆಗೆ ನಕಲಿ ಬ್ಯಾಂಕ್‌ ಖಾತೆ ಪೂರೈಸುತ್ತಿದ್ದ 13 ಜನ ಸೆರೆ

Published : Feb 07, 2026, 11:28 AM IST
Karnataka police

ಸಾರಾಂಶ

ಇದೇ ಮೊದಲ ಬಾರಿ ಸೈಬರ್ ವಂಚನೆ ಜಾಲದ ವಿರುದ್ಧ ರಾಜ್ಯಮಟ್ಟದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಸೈಬರ್ ಕ್ರೈಂ ಅಧಿಕಾರಿಗಳು ಹಣ ವರ್ಗಾವಣೆಗೆ ನಕಲಿ ಬ್ಯಾಂಕ್ ಖಾತೆಗಳನ್ನು ಪೂರೈಸಿದ್ದ 13 ಮಂದಿಯನ್ನು ಬಂಧಿಸಿದ್ದಾರೆ.

  ಬೆಂಗಳೂರು :  ಇದೇ ಮೊದಲ ಬಾರಿ ಸೈಬರ್ ವಂಚನೆ ಜಾಲದ ವಿರುದ್ಧ ರಾಜ್ಯಮಟ್ಟದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಸೈಬರ್ ಕ್ರೈಂ ಅಧಿಕಾರಿಗಳು ಹಣ ವರ್ಗಾವಣೆಗೆ ನಕಲಿ ಬ್ಯಾಂಕ್ ಖಾತೆಗಳನ್ನು ಪೂರೈಸಿದ್ದ 13 ಮಂದಿಯನ್ನು ಬಂಧಿಸಿದ್ದಾರೆ.

ಬೆಂಗಳೂರು, ಮಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ಸೇರಿ 10-14 ಜಿಲ್ಲೆಗಳಲ್ಲಿ ಸೈಬರ್ ಕ್ರೈಂ ಠಾಣೆಗಳ ಪೊಲೀಸರು ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಈ ಸಂಬಂಧ 17 ಎಫ್‌ಐಆರ್‌ಗಳು ದಾಖಲಾಗಿವೆ. ಎರಡು ದಿನಗಳಿಂದ ನಿರಂತರ ಕಾರ್ಯಾಚರಣೆ ವೇಳೆ 13 ಮಂದಿ ಬಲೆಗೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳ ತನಿಖೆ ಹಾಗೂ ನಿಯಂತ್ರಣಕ್ಕೆ ಸರ್ಕಾರ ಪ್ರತ್ಯೇಕವಾಗಿ ಸೈಬರ್ ಕಮಾಂಡ್ ಸೆಂಟರ್ ರಚಿಸಿತ್ತು. ಈಗ ಸೈಬರ್ ವಂಚಕರ ವಿರುದ್ಧ ಕಮಾಂಡ್ ಸೆಂಟರ್ ಫೀಲ್ಡ್‌ಗಿಳಿದಿದೆ. ಸೈಬರ್‌ ಅಪರಾಧ ಕೃತ್ಯಗಳಲ್ಲಿ ಹಣ ವರ್ಗಾವಣೆಗೆ ಅಕ್ರಮವಾಗಿ ಬ್ಯಾಂಕ್ ಖಾತೆ ಪೂರೈಸುತ್ತಿದ್ದ ದಂಧೆಕೋರರ ಪತ್ತೆಗೆ ಸಿಐಡಿ ಸೈಬರ್ ಎಸ್ಪಿ ಉಸ್ತುವಾರಿಯಲ್ಲಿ ಸೈಬರ್ ಕ್ರೈಂ ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಎಟಿಎಂ ಹಣ ಲೆಕ್ಕ:

ಕೆಲ ತಿಂಗಳಿಂದ ಎಟಿಎಂ ಘಟಕಗಳಲ್ಲಿ ಹಣ ಪಡೆಯುವ ಗ್ರಾಹಕರ ಮೇಲೆ ಸೈಬರ್ ಕ್ರೈಂ ಅಧಿಕಾರಿಗಳು ಕಣ್ಣಿಟ್ಟಿದ್ದರು. ಖಾತೆಗೆ ಹಣ ಜಮೆಯಾದ ಕೂಡಲೇ ಹಣ ಡ್ರಾ ಮಾಡುವವರ ಪಟ್ಟಿಯನ್ನು ಅಧಿಕಾರಿಗಳು ತಯಾರಿಸಿದ್ದರು. ಬಳಿಕ ಈ ಪಟ್ಟಿಯಲ್ಲಿದ್ದ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಸೈಬರ್ ಅಪರಾಧ ಕೃತ್ಯಗಳಲ್ಲಿ ಹಣ ವರ್ಗಾವಣೆಗೆ ಬಳಕೆಯಾಗಿರುವುದು ಖಚಿತವಾಗಿದೆ. ಈ ಮಾಹಿತಿ ಮೇರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ನಕಲಿ ಖಾತೆದಾರರ ಸೆರೆಗೆ ಸೈಬರ್ ಅಧಿಕಾರಿಗಳು ಯೋಜಿಸಿದ್ದರು. ಅದರಂತೆ ಗುರುವಾರ ಏಕಕಾಲಕ್ಕೆ ವಿವಿಧ ಜಿಲ್ಲೆಗಳಲ್ಲಿ ಸೈಬರ್ ಕ್ರೈಂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಬ್ಯಾಂಕ್ ಖಾತೆಗಳಲ್ಲಿ ಹಣ ಜಪ್ತಿ:

ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ರುಪಾಯಿಯನ್ನು ಸೈಬರ್ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಹಣದ ಮೂಲ ಶೋಧಿಸಿ ಸಂತ್ರಸ್ತರಿಗೆ ಅದನ್ನು ಮರಳಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ದಾಳಿ ತಡವಾಗಿದ್ದರೆ ಹಣ ನಗದೀಕರಣವಾಗಿ ಸೈಬರ್ ವಂಚಕರ ಪಾಲಾಗುತ್ತಿತ್ತು ಎಂದು ಮೂಲಗಳು ಹೇಳಿವೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಬಿಹಾರದಲ್ಲಿ ತುಮಕೂರಿನ ಒಂದೇ ಕುಟುಂಬದ ನಾಲ್ವರ ಸಾವು
3 ತಿಂಗಳ ಹಿಂದೆ ಮದ್ವೆ, ಈಗ ಲವರ್‌ ಜತೆ ಸೇರಿ ಪತಿ ಹತ್ಯೆ!