ಬೆಂಗಳೂರು ದಕ್ಷಿಣ : ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದ 14 ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸುವ ಮೂಲಕ ಅಕ್ರಮ ಜಾಲವನ್ನು ಭೇದಿಸುವಲ್ಲಿ ಜಿಗಣಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇತ್ತೀಚೆಗಷ್ಟೆ ಜಿಗಣಿಯಲ್ಲಿ ಪಾಕಿಸ್ತಾನ ಪ್ರಜೆ ಹಾಗೂ ಆತನ ಬಾಂಗ್ಲಾ ದೇಶದ ಪತ್ನಿ, ಆಕೆಯ ತಂದೆ, ತಾಯಿಯನ್ನು ಪೊಲೀಸರು ಬಂಧಿಸಿದ್ದರು. ಅವರ ವಿಚಾರಣೆ ವೇಳೆ ಪೊಲೀಸರಿಗೆ ದೊಡ್ಡ ಆಘಾತಕಾರಿ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಬಂಧಿತರ ವಿಚಾರಣೆಯ ವೇಳೆ ದೊರೆತ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಜಿಗಣಿ ಪೊಲೀಸರು 14 ಮಂದಿ ಪಾಕ್ ಜನರನ್ನು ಜೈಲಿಗಟ್ಟಿದ್ದಾರೆ.
ಮಾಸ್ಟರ್ ಮೈಂಡ್ ಬಂಧನ:
ಪಾಕ್ ಪ್ರಜೆಗಳಿಗೆ ಭಾರತದ ಆಧಾರ್ ಕಾರ್ಡ್, ಪಾಸ್ಪೋರ್ಟ್‌ಗಳನ್ನು ಮಾಡಿಸಿಕೊಡುತ್ತಿದ್ದ ಉತ್ತರ ಪ್ರದೇಶದಲ್ಲಿ ವಾಸವಾಗಿದ್ದ ಪಾಕಿಸ್ತಾನದ ಪ್ರಜೆ ಪರ್ವೇಜ್‌ನನ್ನು ಪೊಲೀಸರು 3 ದಿನಗಳ ಹಿಂದೆ ಬಂಧಿಸಿದ್ದರು. ಈತ ಪಾಕ್ ಪ್ರಜೆಗಳಿಗೆ ಭಾರತೀಯ ನಕಲಿ ಸೇರಿದಂತೆ ಅಕ್ರಮ ವಾಸಕ್ಕೆ ವ್ಯವಸ್ಥೆ ಕಲ್ಪಿಸುತ್ತಿದ್ದ. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಉಳಿದ ಪಾಕ್ ಪ್ರಜೆಗಳ ಮಾಹಿತಿ ಸಿಕ್ಕಿತು. ಆತ ನೀಡಿದ ಮಾಹಿತಿ ಆಧರಿಸಿ ದೇಶದ ನಾನಾ ಭಾಗಗಳಲ್ಲಿ ಅಡಗಿ ಕುಳಿತ್ತಿದ್ದ 14 ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಆನೇಕಲ್ ಉಪವಿಭಾಗದ ಪೊಲೀಸರು ಯಶಸ್ವಿಯಾಗಿದ್ದರು.
ಪರ್ವೇಜ್ ಸಂಪರ್ಕದಲ್ಲಿದ್ದ ಸಫೀಕ್ ಉರ್ ರೆಹಮಾನ್, ಸೈಫ್ ಅಲಿ, ಸಲೀಂ ಖಾನ್, ಫರಾಜ್ ಅಹ್ಮದ್, ಮೆಹನೂರ್, ರುಕ್ಸಾನಾ, ಹಮೀದಾ ನುಸ್ರತ್, ನೈಜೀನಾ, ಫರ್ಜಾನಾ, ನಿಸ್ಸಾರ್ ಅಹ್ಮದ್, ಇರ್ರಾಮ್ ಬಂಧಿತರು. ಇವರಲ್ಲಿ ಇಬ್ಬರು ಆರೋಪಿಗಳಾದ ನಿಸಾರ್ ಅಹಮದ್, ಇರ್ರಾಮ್‌ನನ್ನು ಹೆಚ್ಚಿನ ತನಿಖೆಗಾಗಿ ಎಫ್.ಆರ್.ಓ ವಶಕ್ಕೆ ನೀಡಲಾಗಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಮೊಹಮ್ಮದ್ ಹನೀಫ್, ರುಬಿನಾ ಹನೀಫ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೆಹದಿ ಪಂಥ ಪ್ರಚಾರ
ಸದ್ಯ ಈ ಪ್ರಕರಣದಲ್ಲಿ ಇಲ್ಲಿಯವರೆಗೆ 22 ಮಂದಿಯನ್ನು ಬಂಧನ ಮಾಡಲಾಗಿದೆ. ಬಂಧಿತರೆಲ್ಲರೂ ದೇಶದ ನಾನಾ ಭಾಗಗಳಲ್ಲಿ ಮೆಹದಿ ಫೌಂಡೇಷನ್ ಧರ್ಮಗುರು ಯೂನಸ್ ಅಲ್ಗೋರ್ ಪ್ರವಚನಗಳನ್ನು ಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಇನ್ನಷ್ಟು ಮಂದಿ ಬಂಧನ ಸಾಧ್ಯತೆ:
ಮೆಹದಿ ಫೌಂಡೇಷನ್ ಮೂಲಕ ಧರ್ಮ ಪ್ರಚಾರಕ್ಕೆ ಸಾಕಷ್ಟು ಮಂದಿ ಭಾರತಕ್ಕೆ ಬಂದಿರುವ ಸಾಧ್ಯತೆಯಿದೆ. ಈ ಬಗ್ಗೆ ಪೊಲೀಸರ ತನಿಖೆಯಲ್ಲಿ ದೃಢವಾಗಿದ್ದು, ದೇಶದ ನಾನಾ ಭಾಗಗಳಲ್ಲಿ ಅಡಗಿ ಕುಳಿತಿರುವ ಪಾಕ್ ಪ್ರಜೆಗಳ ಪತ್ತೆ ಕಾರ್ಯ ತೀವ್ರಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪಾಕ್ ಪ್ರಜೆ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.