ಬೆಂಗಳೂರು : ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಭೂ ಪರಿಹಾರಕ್ಕೆ ಯತ್ನಿಸಿದ ಪ್ರಕರಣ ಸಂಬಂಧ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ಸೇರಿದಂತೆ ಐವರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜರಾಜೇಶ್ವರಿ ನಗರದ ನಿವಾಸಿ ನಾಗರಾಜ್, ಚಳಘಟ್ಟದ ಶ್ರೀನಿವಾಸ್, ರವಿಕುಮಾರ್, ಭರತ್ ಹಾಗೂ ಸ್ವಾಮಿ ಬಂಧಿತರಾಗಿದ್ದು, ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ಸೇರಿದಂತೆ ಇನ್ನಿತರ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇತ್ತೀಚೆಗೆ ಚಳ್ಳಘಟ್ಟದ ಭೂ ಪರಿಹಾರ ಕುರಿತು ದಾಖಲೆಗಳನ್ನು ಬಿಡಿಎ ವಿಚಕ್ಷಣಾ ದಳದ ಅಧಿಕಾರಿಗಳು ಪರಿಶೀಲಿಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ಈ ಬಗ್ಗೆ ಬಿಡಿಎ ವಿಚಕ್ಷಣಾ ದಳದ ಡಿವೈಎಸ್ಪಿ ಮಲ್ಲೇಶ್ ನೀಡಿದ ದೂರು ಆಧರಿಸಿ ಕಾರ್ಯಾಚರಣೆಗಿಳಿದ ಇನ್‌ಸ್ಪೆಕ್ಟರ್ ಹೇಮಂತ್ ಕುಮಾರ್ ನೇತೃತ್ವದ ತಂಡ, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದೆ. ಬಳಿಕ ನಾಗರಾಜ್ ಹೊರತುಪಡಿಸಿ ಇನ್ನುಳಿದ ನಾಲ್ವರು ಆರೋಪಿಗಳನ್ನು ವಿಚಾರಣೆ ನಡೆಸಿ ಜೈಲಿಗೆ ಕಳುಹಿಸಿದ್ದು, ಹೆಚ್ಚಿನ ತನಿಖೆ ಸಲುವಾಗಿ ನಾಗರಾಜ್‌ನನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಗರಣದ ವಿವರ:
ಚಳ್ಳಘಟ್ಟದ ಸರ್ವೆ ನಂ.13 ಮತ್ತು ಹೊಸ ಸರ್ವೆ ನಂಬರ್ 58ರಲ್ಲಿ 6 ಎಕರೆ ಜಮೀನಿಗೆ ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿದ್ದರು. ಈ ಆಸ್ತಿಯ ಮೂಲ ಮಾಲಿಕರಾದ ಮೂಡಪ್ಪ ಅವರಿಗೂ ಆರೋಪಿಗಳು ರಕ್ತ ಸಂಬಂಧವಿಲ್ಲದಿದ್ದರೂ ಪಿತ್ರಾರ್ಜಿತ ಆಸ್ತಿ ಎಂದು ನಕಲಿ ದಾಖಲೆ ಸೃಷ್ಟಿಸಿದ್ದರು. ಬಳಿಕ ಬಿಡಿಎಗೆ ಸುಮಾರು ₹70 ಕೋಟಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಆಸ್ತಿಯನ್ನು ಪರಿಶೀಲಿಸಿ ವರದಿ ನೀಡಲು ನೇಮಕಗೊಂಡಿದ್ದ ಬಿಡಿಎ ವಿಶೇಷ ಭೂಸ್ವಾಧೀನಾಧಿಕಾರಿ ಡಾ। ಸುಧಾ ಹಾಗೂ ಸರ್ವೇಯರ್ ಪಿ.ಎನ್ ರವಿಪ್ರಕಾಶ್ ಅವರು ಭೂ ಪರಿಹಾರಕ್ಕೆ ಶಿಫಾರಸು ಮಾಡಿದ್ದರು. ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ಪರವಾಗಿ ಬಿಡಿಎ ಅಧಿಕಾರಿಗಳು ವರದಿ ನೀಡಿ ಕರ್ತವ್ಯಲೋಪವೆಸಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಈ ಭೂಮಿಯಲ್ಲಿ ಅಕ್ರಮವಾಗಿ ರೆವಿನ್ಯೂ ಸೈಟ್‌ಗಳನ್ನು ಆರೋಪಿಗಳು ಅಭಿವೃದ್ಧಿಪಡಿಸಿದ್ದರು. ಆಶ್ರಯ ಯೋಜನೆಗೆ ಕಾಯ್ದಿರಿಸಿರುವ ಜಮೀನಾಗಿದ್ದರೂ ಸರ್ವೇಯರ್ ರವಿಪ್ರಕಾಶ್ ಮತ್ತು ವಿಶೇಷ ಭೂಸ್ವಾಧೀನಾಧಿಕಾರಿ ಡಾ। ಸುಧಾ ಭೂ ಪರಿಹಾರಕ್ಕೆ ಅರ್ಹವಾಗಿರುವ ಜಮೀನು ಎಂದು ಸುಳ್ಳು ನಕಾಶೆ ತಯಾರು ಮಾಡಿದ್ದರು. ಅಲ್ಲದೆ ಆ ಆಸ್ತಿಯ ನಿಜವಾದ ಮಾಲೀಕರ ಬಗ್ಗೆ ವಿಚಾರಿಸದೆ ಆರೋಪಿ ಪುಟ್ಟಮ್ಮ ಅವರ ಹೆಸರಿಗೆ ಖಾತೆ ಮಾಡಲು ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಸೀಲ್ದಾರ್ ಅವರಿಗೆ ಉಪ ವಿಭಾಗಾಧಿಕಾರಿ ಡಾ। ಎಂ.ಜಿ.ಶಿವಣ್ಣ ಆದೇಶಿಸಿ ನಂಬಿಕೆ ದ್ರೋಹ ಮಾಡಿದ್ದರು. ಈ ಕೃತ್ಯದಲ್ಲಿ ಅಂದಿನ ದಕ್ಷಿಣ ವಿಭಾಗದ ತಹಸೀಲ್ದಾರ್ ಮತ್ತು ಕಂದಾಯ ಅಧಿಕಾರಿ- ಸಿಬ್ಬಂದಿ ಭಾಗಿಯಾಗಿದ್ದರು.ಈ ಅಕ್ರಮದ ಕುರಿತು ಬಿಡಿಎಗೆ ಗೋವಿಂದರಾಜು ಎಂಬುವರು ದೂರು ನೀಡಿದ್ದರು. ಆಗ ಬಿಡಿಎ ವಿಚಕ್ಷಣಾ ದಳ ಚಳ್ಳಘಟ್ಟದ ಭೂ ಪರಿಹಾರ ಕುರಿತು ಪರಿಶೀಲಿಸಿದಾಗ ಅಕ್ರಮ ಬಯಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
1976ರಲ್ಲೇ ಈ ಆಸ್ತಿಯ ಮೂಲ ಮಾಲೀಕ ಮೂಡಪ್ಪ ಮೃತಪಟ್ಟಿದ್ದಾರೆ. 1992ರಲ್ಲಿ ಆ ಆಸ್ತಿಯ ಪೋಡಿ ಆಗಿದೆ. 2019-2020ನೇ ಸಾಲಿನಲ್ಲಿ ಆ ಆಸ್ತಿಗೆ ಸಂಬಂಧಿಸಿದಂತೆ ರಿಲೀಸ್ ಡೀಡ್ ಮಾಡಿದ್ದ ಆರೋಪಿಗಳು, ಬಳಿಕ ಬಿಡಿಎಗೆ 57498 ಚ.ಅಡಿಗೆ ಪುಟ್ಟಮ್ಮ ಹೆಸರಿನಲ್ಲಿ ಭೂ ಪರಿಹಾರ ಕೋರಿ ಮನವಿ ಸಲ್ಲಿಸಿದ್ದರು. ಆದರೆ ಬಿಡಿಎ ಪರಿಹಾರ ನೀಡಿರಲಿಲ್ಲ. ಈ ಅಕ್ರಮದಲ್ಲಿ ಬಿಡಿಎ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುತ್ತಿಗೆದಾರನ ಕರಾಮತು!
ಈ ಅಕ್ರಮ ಭೂ ವ್ಯವಹಾರದಲ್ಲಿ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ನಾಗರಾಜ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ಮಾಸ್ಟರ್ ಮೈಂಡ್‌ಗಳಾಗಿದ್ದಾರೆ. ಮೂಡಪ್ಪನ ವಂಶಸ್ಥರು ಎಂದು ಶ್ರೀನಿವಾಸ್, ಭರತ್, ಸ್ವಾಮಿ ಹಾಗೂ ರವಿಕುಮಾರ್ ಅವರನ್ನು ಉಮೇಶ್ ತೋರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.