ಕನ್ನಡಪ್ರಭ ವಾರ್ತೆ ಬೆಂಗಳೂರು
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಜನನಿ ಗ್ರಾಮದ ಪವನ್, ಚೇತನ್, ಆದರ್ಶ, ಜಯನಗರದ ಸಾಧು ನಾಯ್ದು ಹಾಗೂ ಅಸ್ಸಾಂ ಮೂಲದ ಅಕ್ಮಲ್ ಬಂಧಿತರಾಗಿದ್ದು, ಆರೋಪಿಗಳಿಂದ 55 ಲ್ಯಾಪ್‌ಟಾಪ್, 28 ಮೊಬೈಲ್ ಹಾಗೂ 9 ಬೈಕ್‌ಗಳು ಸೇರಿದಂತೆ ಒಟ್ಟು ₹47 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಇತ್ತೀಚೆಗೆ ನಗರದಲ್ಲಿ ರಾತ್ರಿ ವೇಳೆ ಲ್ಯಾಪ್‌ಟಾಪ್ ಕಳ್ಳತನ ಕೃತ್ಯಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಲೇಔಟ್, ಜಯನಗರ ಹಾಗೂ ಎಚ್‌ಎಸ್‌ಆರ್ ಲೇಔಟ್ ಠಾಣೆಗಳ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಐವರನ್ನು ಸೆರೆ ಹಿಡಿದಿದ್ದಾರೆ.ಲಾಡ್ಜ್‌ನಲ್ಲಿ ವಾಸ್ತವ್ಯ-ಹಾಸ್ಟೆಲ್‌ಗಳಲ್ಲಿ ಕಾರ್ಯಾಚರಣೆ:
ಕಳ್ಳತನ ಮಾಡಲು ಸಂಪಿಗೆಹಳ್ಳಿ ಸಮೀಪ ಕಳ್ಳತನ ಮಾಡಿದ್ದ ಬೈಕ್ ಬಳಸಿಕೊಂಡು ರಾತ್ರಿ ವೇಳೆ ಜನವಸತಿ, ಪಿಜಿಗಳು ಹಾಗೂ ಹಾಸ್ಟೆಲ್‌ಗಳ ಕಡೆಗೆ ಆರೋಪಿಗಳು ಅಡ್ಡಾಡುತ್ತಿದ್ದರು. ಈ ವೇಳೆ ಕಿಟಕಿ ತೆರೆದು ನಿದ್ರೆಯಲ್ಲಿದ್ದವರಿಂದ ಮೊಬೈಲ್ ಹಾಗೂ ಮನೆಗಳ ಬೀಗ ಮುರಿದು ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಜಯನಗರ ಪೊಲೀಸರಿಗೆ ಸಾಧು ಸಿಕ್ಕಿಬಿದ್ದಿದ್ದು, ಆತನಿಂದ ₹12 ಲಕ್ಷ ಮೌಲ್ಯದ 17 ಲ್ಯಾಪ್‌ಟಾಪ್‌ಗಳು ಜಪ್ತಿ ಮಾಡಲಾಗಿದೆ. ಮತ್ತೊಬ್ಬ ಖದೀಮ ಅಕ್ಮಲ್, ಎಚ್‌ಎಸ್‌ಆರ್ ಲೇಔಟ್ ಪೊಲೀಸರ ಗಾಳಕ್ಕೆ ಬಿದ್ದಿದ್ದಾನೆ. ಈತನಿಂದ 5 ಬೈಕ್‌ಗಳು ಹಾಗೂ 4 ಲ್ಯಾಪ್‌ಟಾಪ್‌ಗಳು ಸೇರಿ ₹12 ಲಕ್ಷ ಬೆಲೆಯ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಕ್ಮಲ್ ಅಸ್ಸಾಂ ಮೂಲದವನಾಗಿದ್ದು, ಗಾರ್ವೆಪಾಳ್ಯದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ.