ಕನ್ನಡಪ್ರಭ ವಾರ್ತೆ ಬೆಂಗಳೂರು
ದ್ವಿಚಕ್ರ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಾಜಿನಗರದ 6ನೇ ಬ್ಲಾಕ್ ನಿವಾಸಿ ರಘು (41)ಮೃತ ಸವಾರ. ಸೋಮವಾರ ತಡರಾತ್ರಿ ಡಾ। ರಾಜ್‌ಕುಮಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುವ ರಘು, ಸೋಮವಾರ ತಡರಾತ್ರಿ 12 ಗಂಟೆಗೆ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿದ್ದರು. ಪ್ರಕಾಶನಗರ 8ನೇ ಅಡ್ಡ ರಸ್ತೆ ಕಡೆಯಿಂದ ಡಾ.ರಾಜ್‌ಕುಮಾರ್ ಮುಖ್ಯರಸ್ತೆ ನವರಂಗ್ ಬಾರ್ ಸಿಗ್ನಲ್ ಬಳಿ ರಾಜಾಜಿನಗರದ 41ನೇ ಅಡ್ಡ ರಸ್ತೆ ಕಡೆಗೆ ತೆರಳುತ್ತಿದ್ದರು. ಇದೇ ಸಮಯಕ್ಕೆ ರಾಜಾಜಿನಗರದ ಕಡೆಯಿಂದ ನವರಂಗ್ ಚಿತ್ರಮಂದಿರದ ಕಡೆಗೆ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಸವಾರ ರಘು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ.
ಮತ್ತೊಂದು ಪ್ರಕರಣದಲ್ಲಿ ದ್ವಿಚಕ್ರ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಸವಾರನ ಮೇಲೆ ಬಸ್‌ನ ಚಕ್ರ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಫುಡ್‌ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜು, ಫುಡ್ ಡೆಲಿವರಿ ಕೊಡಲು ದ್ವಿಚಕ್ರ ವಾಹನದಲ್ಲಿ ಮೈಸೂರು ರಸ್ತೆಯಲ್ಲಿ ಕೆಂಗೇರಿ ಕಡೆಗೆ ತೆರಳುತ್ತಿದ್ದ. ಈ ವೇಳೆ ತಿರುಪತಿಯಿಂದ ಬಂದಿದ್ದ ಕೆಎಸ್ಆರ್‌ಟಿಸಿ ಸ್ಯಾಟಲೈಟ್ ಬಸ್ ನಿಲ್ದಾಣ ಪ್ರವೇಶಿಸಲು ತಿರುವು ಪಡೆಯುವಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಸವಾರ ಬಸವರಾಜನ ತಲೆ ಮೇಲೆಯೇ ಬಸ್‌ನ ಚಕ್ರ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ದ್ವಿಚಕ್ರ ವಾಹನಕ್ಕೆ ಖಾಸಗಿ ಶಾಲೆಯ ಬಸ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಸವಾರನ ಮೇಲೆ ಬಸ್‌ನ ಚಕ್ರ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ಖಾಸಗಿ ಕಾಲೇಜಿನಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿದ್ದ ಮನೋಜ್, ಮಂಗಳವಾರ ಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗುತ್ತಿದ್ದ. ಇದೇ ಸಮಯಕ್ಕೆ ಬಳ್ಳಾರಿ ಮುಖ್ಯರಸ್ತೆಯ ಕನ್ನಮಂಗಲ ಗ್ರಾಮದ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ದೇವನಹಳ್ಳಿ ಕಡೆಗೆ ಸಾಗುತ್ತಿದ್ದ ಖಾಸಗಿ ಶಾಲಾ ಬಸ್, ದೇವನಹಳ್ಳಿ ಮುಖ್ಯರಸ್ತೆಗೆ ಏಕಾಏಕಿ ನುಗ್ಗಿದ ಪರಿಣಾಮ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಸವಾರ ಮನೋಜ್ ಕುಮಾರ್ ಮೇಲೆ ಚಕ್ರ ಹರಿದು ಸುಮಾರು 20 ಮೀಟರ್‌ನಷ್ಟು ಆತನನ್ನು ಮುಂದಕ್ಕೆ ಎಳೆದುಕೊಂಡು ಹೋಗಿದೆ. ಈ ವೇಳೆ ತೀವ್ರ ಗಾಯಗೊಂಡು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೆಟ್ರೋ ರೈಲು ನಿಲ್ದಾಣದ ಬಳಿ 4 ಬೈಕ್ ಬೆಂಕಿಗಾಹುತಿ