ಕನ್ನಡಪ್ರಭ ವಾರ್ತೆ ಬೆಂಗಳೂರು
ಅಡುಗೆ ಕೋಣೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿದ ಪರಿಣಾಮ 7 ಮಂದಿ ಗಾಯಗೊಂಡು, ಐದು ಮನೆಗಳಿಗೆ ಹಾನಿಯಾಗಿರುವ ಘಟನೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಯಲಹಂಕದ ಲಾಲ್‌ಬಹದ್ದೂರ್ ಶಾಸ್ತ್ರಿ ಬಡಾವಣೆ ನಿವಾಸಿಗಳಾದ ಅಸ್ಮಾ ಬಾನು (58) ಎಂಬುವವರ ಮನೆಯಲ್ಲಿ ಮಂಗಳವಾರ ಬೆಳಗ್ಗೆ 7.45ರ ಸುಮಾರಿಗೆ ಈ ಘಟನೆ ನಡೆದಿದೆ. ಸ್ಫೋಟದಿಂದ ಅಸ್ಮಾ ಬಾನು, ಷರಿಯಾ ಬಾನು (50), ಸಲ್ಮಾ (22), ಶಾಹಿದ್ (16), ಅಸ್ಮಾ (50) ಅಫ್ರೋಜ್ (23) ಮತ್ತು ಮೀನಾಕ್ಷಿ ತಮ್ಮಯ್ಯ (38) ಗಾಯಗೊಂಡಿದ್ದಾರೆ. ಈ ಪೈಕಿ ಅಸ್ಮಾ ಬಾನು ಮತ್ತು ಷರಿಯಾ ಬಾನು ಸ್ಥಿತಿ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ:ಲಾಲ್ ಬಹುದೂರ್‌ಶಾಸ್ತ್ರಿನಗರದಲ್ಲಿ ವಠಾರ ಮಾದರಿಯ ಸಣ್ಣ ಮನೆಗಳಿದ್ದು, ಹಲವು ಕುಟುಂಬಗಳು ನೆಲೆಸಿವೆ. ಇದೇ ವಠಾರದಲ್ಲಿ ಅಸ್ಮಾ ಬಾನು ಬಾಡಿಗೆಗೆ ಇದ್ದಾರೆ. ರಾತ್ರಿ ಊಟದ ಬಳಿಕ ಗ್ಯಾಸ್ ಸಿಲಿಂಡರ್ ಬಂದ್ ಮಾಡುವುದನ್ನು ಮರೆತು ನಿದ್ದೆಗೆ ಜಾರಿರುವ ಸಾಧ್ಯತೆಯಿದೆ. ಇಡೀ ರಾತ್ರಿ ಅನಿಲ ಸೋರಿಕೆಯಾಗಿ ಅಡುಗೆ ಮನೆಗೆ ವ್ಯಾಪಿಸಿದೆ. ಬೆಳಗ್ಗೆ ಅಸ್ಮಾ ಬಾನು ಗ್ಯಾಸ್ ಸ್ಟೌವ್ ಹಚ್ಚಲು ಬೆಂಕಿ ಕಡ್ಡಿ ಗೀರಿದಾಗ ಏಕಾಏಕಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ.
ಐದು ಮನೆಗಳಿಗೆ ಹಾನಿಸ್ಫೋಟದ ರಭಸಕ್ಕೆ ಅಕ್ಕಪಕ್ಕದ ಮನೆಯವರಿಗೂ ಗಾಯಗಳಾಗಿದ್ದು, ಐದಾರು ಮನೆಗಳ ಗೋಡೆಗಳು, ಕಿಟಕಿಗಳು, ಬಾಗಿಲುಗಳಿಗೆ ಹಾನಿಯಾಗಿದೆ. ಸ್ಫೋಟದ ತೀವ್ರತೆಗೆ ಗೋಡೆಗಳ ಇಟ್ಟಿಗೆಗಳು ಕಿತ್ತು ಬಿದ್ದಿವೆ. ಪೀಠೋಪಕರಣಗಳು, ಸರಕು-ಸರಂಜಾಮುಗಳಿಗೆ ಹಾನಿಯಾಗಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಮೂರು ಅಗ್ನಿಶಾಮಕ ವಾಹನಗಳೊಂದಿಗೆ ದೌಡಾಯಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲಿಸಿದ್ದಾರೆ.
ಸ್ಫೋಟದಿಂದ ಗಾಯಗೊಂಡಿದ್ದ ಏಳು ಮಂದಿ ಗಾಯಾಳುಗಳನ್ನು ಯಲಹಂಕದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ.ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.