;Resize=(412,232))
ಬೆಂಗಳೂರು : ವಿವಿಧ ವಿಷಯಗಳ ಸಂಬಂಧ ಮಾಹಿತಿ ಹಕ್ಕು ಅಧಿನಿಯಮದ ಅಡಿ ಅರ್ಜಿದಾರರು ಕೇಳಿದ ಮಾಹಿತಿ ಒದಗಿಸದೇ ಕಾಯ್ದೆ ಉಲ್ಲಂಘಿಸಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪವಿಭಾಗಾಧಿಕಾರಿ ಹಾಗೂ ದೇವನಹಳ್ಳಿ ಮತ್ತು ಕೆ.ಆರ್.ಪುರಂ ತಹಶೀಲ್ದಾರ್‌ಗೆ ಮಾಹಿತಿ ಆಯೋಗ ತಲಾ ₹25000 ದಂಡ ವಿಧಿಸಿದೆ.
ವಿಶೇಷವಾಗಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ ಅವರು ಪ್ರಕರಣದ ಸಂಬಂಧ ಸತತವಾಗಿ ವಿಚಾರಣೆಗೆ ಗೈರು ಹಾಜರಾಗದೇ ಇರುವುದಕ್ಕೆ ಹಾಗೂ ಅರ್ಜಿದಾರರಿಗೆ ಮಾಹಿತಿ ಒದಗಿಸದೇ ಕಾಯ್ದೆಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಎರಡು ಪ್ರಕರಣಗಳಿಗೆ ತಲಾ 25 ಸಾವಿರ ರು ದಂಡ ವಿಧಿಸಿದೆ. ಜೊತೆಗೆ ಒಂದು ಪ್ರಕರಣದಲ್ಲಿ ಅಧಿಕಾರಿಯ ವಿರುದ್ಧ ಇಲಾಖೆಯ ನಿಯಮಾವಳಿ ಅನ್ವಯ ಶಿಸ್ತು ಕ್ರಮ ಜರುಗಿಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿದೆ.
ಉತ್ತರಹಳ್ಳಿಯ ಸದಾಶಿವಮೂರ್ತಿ ಎಂಬುವರು ಜಮೀನು ವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ನ್ಯಾಯಾಲದಲ್ಲಿ ದಾಖಲಿಸಿರುವ ಪ್ರಕರಣ ಸಂಬಂಧ ಕೇಳಿದ ಮಾಹಿತಿಯನ್ನು ನೀಡಿರಲಿಲ್ಲ.
ಇದೇ ರೀತಿ ಕೆಂಗೇರಿ ಹೋಬಳಿಯ ತಿಪ್ಪೂರು ಗ್ರಾಮದ ಜಮೀನು ವ್ಯಾಜ್ಯ ಸಂಬಂಧ ಕೇಳಿದ ಮಾಹಿತಿ ನೀಡದ ಪ್ರಕರಣವೊಂದರಲ್ಲಿ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ವಿಶ್ವನಾಥ್ ಅವರಿಗೆ 25 ಸಾವಿರ ದಂಡ ವಿಧಿಸಿ, ಇಲಾಖಾ ವಿಚಾರಣೆಗೆ ಶಿಫಾರಸು ಮಾಡುವ ಸಂಬಂಧ ಕಾರಣ ಕೇಳಿ ಆಯೋಗ ನೋಟಿಸ್ ನೀಡಿದೆ.
ಪ್ರಕರಣದ ವಿಚಾರಣೆಗೆ ಸತತವಾಗಿ ಗೈರು ಹಾಜರಾಗಿದ್ದಲ್ಲದೇ, ಅರ್ಜಿದಾರರಿಗೆ ಮಾಹಿತಿ ನೀಡದ ಕಾರಣ ಕೆ.ಆರ್. ಪುರದ ತಹಶೀಲ್ದಾರ್ ರಾಜುಗೆ ಆಯೋಗ 25 ಸಾವಿರ ರು.,ದಂಡ ವಿಧಿಸಿ ಶೋಕಾಸ್ ನೋಟಿಸ್ ನೀಡಿದೆ. ದೇವನಹಳ್ಳಿ ತಾಲೂಕಿನ ರೈತರೊಬ್ಬರು ಸರ್ಕಾರಿ ಶಾಲೆ ಜಮೀನು ಉಳಿಸುವ ಸಂಬಂಧ ಕೇಳಿದ ಮಾಹಿತಿ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ ಕಾರಣ ದೇವನಹಳ್ಳಿ ತಹಶೀಲ್ದಾರ್ ಅನಿಲ್ ಅವರಿಗೆ ಮಾಹಿತಿ ಆಯೋಗ 25 ಸಾವಿರ ರು. ದಂಡ ವಿಧಿಸಿ ಶೋಕಾಸ್ ನೀಡಿದೆ.
ವಿವಿಧ ಪ್ರಕರಣಗಳ ವಿಚಾರಣೆ ವೇಳೆ ಮಾಹಿತಿ ನೀಡುವುದಾಗಿ ಒಪ್ಪಿಕೊಂಡ ನಂತರವೂ ಮೇಲ್ಮನವಿದಾರರಿಗೆ ಮಾಹಿತಿ ನೀಡದ ಕೆಳ ಹಂತದ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಆಯೋಗ ಹಿರಿಯ ಅಧಿಕಾರಿಗಳಿಗೆ ಆಯೋಗ ನಿರ್ದೇಶಿಸಿದೆ.