ಉದ್ಯಮಿಗೆ ₹2.6 ಕೋಟಿ ವಂಚಿಸಿದ 3 ಆರೋಪಿಗಳ ಬಂಧನ

KannadaprabhaNewsNetwork |  
Published : Jun 21, 2026, 01:45 AM ISTUpdated : Jun 21, 2026, 04:25 AM IST
arrest

ಸಾರಾಂಶ

ಉದ್ಯಮಿಯೊಬ್ಬರಿಗೆ 2.6 ಕೋಟಿ ರು. ವಂಚಿಸಿದ ಆರೋಪದ ಮೇರೆಗೆ ಖಾಸಗಿ ಬ್ಯಾಂಕ್‌ ಮ್ಯಾನೇಜರ್‌ ಸೇರಿ ಮೂವರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೀಣ್ಯ ಸಮೀಪದ ಮಂಜುನಾಥನಗರದ ನಿವಾಸಿ ಉದ್ಯಮಿ ಸುಬ್ರಮಣ್ಯ ಎಂಬುವರು ನೀಡಿದ ದೂರಿನನ್ವಯ ಬಂಧಿಸಿದ್ದಾರೆ

 ಬೆಂಗಳೂರು :  ಉದ್ಯಮಿಯೊಬ್ಬರಿಗೆ 2.6 ಕೋಟಿ ರು. ವಂಚಿಸಿದ ಆರೋಪದ ಮೇರೆಗೆ ಖಾಸಗಿ ಬ್ಯಾಂಕ್‌ ಮ್ಯಾನೇಜರ್‌ ಸೇರಿ ಮೂವರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪೀಣ್ಯ ಸಮೀಪದ ಮಂಜುನಾಥನಗರದ ನಿವಾಸಿ ಉದ್ಯಮಿ ಸುಬ್ರಮಣ್ಯ ಎಂಬುವರು ನೀಡಿದ ದೂರಿನನ್ವಯ ಹೆಸರಘಟ್ಟ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ವಿನೋದ್ ಕುಮಾರ್ ಹಾಗೂ ಕೃತ್ಯಕ್ಕೆ ಸಹಕರಿಸಿದ ವಿನೋದ್‌ ಕುಮಾರ್‌ ಸಹಚರರಾದ ಅರುಣ್ ಮತ್ತು ಕಿರಣ್‌ನನ್ನು ಬಂಧಿಸಲಾಗಿದೆ.

ಸುಬ್ರಮಣ್ಯ ಅವರು ಲಾಜಿಸ್ಟಿಕ್ಸ್ ಮತ್ತು ಮಾನವ ಸಂಪನ್ಮೂಲ ವ್ಯವಹಾರ ನಡೆಸುತ್ತಿದ್ದಾರೆ. ವ್ಯವಹಾರದ ಸಂಬಂಧ ಆಗಾಗ್ಗೆ ಹೆಸರುಘಟ್ಟ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್‌ಗೆ ಹೋಗಿ ಬರುತ್ತಿದ್ದರು. ಈ ವೇಳೆ ಸುಬ್ರಮಣ್ಯ ನಡೆಸುವ ವ್ಯವಹಾರದ ಬಗ್ಗೆ ಮ್ಯಾನೇಜರ್‌ ತಿಳಿದುಕೊಂಡಿದ್ದರು.

2026 ರ ಅಕ್ಟೋಬರ್‌ನಲ್ಲಿ ಸುಬ್ರಮಣ್ಯ ಅವರಿಗೆ ರಾಹುಲ್ ಎಂಬ ಹೆಸರಿನಲ್ಲಿ ಬಂದ ವಾಟ್ಸಪ್‌ ಕರೆಯಲ್ಲಿ ತಾನು ಲಾಜಿಸ್ಟಿಕ್ಸ್ ಹಾಗೂ ನಿರ್ಮಾಣ ಕಂಪನಿಗಳ ಮಾಲೀಕನೆಂದು ಪರಿಚಯಿಸಿಕೊಂಡಿದ್ದ. ನಂತರ ರಾಹುಲ್ ನಿರಂತರವಾಗಿ ಕರೆ ಮಾಡಿ ವ್ಯವಹಾರ ಸಂಬಂಧಿತ ಚರ್ಚೆ ನಡೆಸುತ್ತಿದ್ದ. ಒಂದು ದಿನ ತನ್ನ ಕಂಪನಿಗಳ ಮೂಲಕ 25 ರಿಂದ 30 ಕೋಟಿ ರು.ಮೌಲ್ಯದ ಟ್ರಾನ್ಸ್‌ಪೋರ್ಟ್‌ ವ್ಯವಹಾರ ಮತ್ತು ಮ್ಯಾನ್‌ಪವರ್‌ ಕೊಡಿಸುತ್ತೇನೆ ಎಂದು ನಂಬಿಸಿದ್ದ. ಅದಕ್ಕಾಗಿ ಮುಂಗಡವಾಗಿ ಕಮಿಷನ್ ರೂಪದಲ್ಲಿ ಶೇ.10ರಷ್ಟು ಹಣ ಪಾವತಿಸುವಂತೆ ಹೇಳಿದ್ದನು. 

ಅನುಮಾನ ಬಂದ್ರು ಎಚ್ಚೆತ್ತುಕೊಳ್ಳದ ದೂರುದಾರ:

ಕರೆ ಮಾಡಿದ ವ್ಯಕ್ತಿಯ ಧ್ವನಿ ಬ್ಯಾಂಕ್ ವ್ಯವಸ್ಥಾಪಕ ವಿನೋದ್ ಕುಮಾರ್ ಅವರಂತೆಯೇ ಇದೆ ಎಂದು ಸುಬ್ರಮಣ್ಯರಿಗೆ ಅನಿಸಿದರೂ, ಅದನ್ನು ಅವರು ಗಂಭೀರವಾಗಿ ಪರಿಗಣಿಸಿರಲ್ಲಿಲ್ಲ. ಇದರ ಮಧ್ಯೆ, ಕಳೆದ ವರ್ಷ ನವೆಂಬರ್‌ನಿಂದ ಫೆಬ್ರವರಿವರೆಗೆ ಅವರು ರಾಹುಲ್ ಸೂಚಿಸಿದ ಖಾತೆಗೆ 2.12 ಕೋಟಿ ರು. ಹಾಗೂ ಮತ್ತೊಂದು ಖಾತೆಗೆ 54 ಲಕ್ಷ ರು.ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಆ ಎರಡೂ ಖಾತೆಗಳು ಹೆಸರಘಟ್ಟ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್ ಶಾಖೆಯಲ್ಲೇ ಇದ್ದವು.ಹಣ ಪಡೆದ ನಂತರ ರಾಹುಲ್ ಸಂಪರ್ಕಕ್ಕೆ ಸಿಗದೇ ಹೋಗಿದ್ದ. ಬಳಿಕ ಕರೆಗಳನ್ನು ಸ್ವೀಕರಿಸುವುದನ್ನೂ ನಿಲ್ಲಿಸಿದ್ದ. ಆಗ ತಾನು ಮೋಸ ಹೋಗಿರುವುದನ್ನು ಅರಿತ ಸುಬ್ರಮಣ್ಯ ಅವರು, ರಾಹುಲ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾಗ ರಾಹುಲ್‌ ಹೆಸರಿನಲ್ಲಿ ಕರೆ ಮಾಡುತ್ತಿದ್ದ ವ್ಯಕ್ತಿ ವಾಸ್ತವವಾಗಿ ವಿನೋದ್ ಕುಮಾರ್ ಆಗಿದ್ದ. 

 ಆತ ಬೇರೆ ಮೊಬೈಲ್ ಸಂಖ್ಯೆಯನ್ನು ಬಳಸಿ ತನ್ನನ್ನು ರಾಹುಲ್ ಎಂದು ಪರಿಚಯಿಸಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿತ್ತು.ಪ್ರಾಥಮಿಕ ತನಿಖೆಯಲ್ಲಿ 2.6 ಕೋಟಿ ರು. ಮಲ್ಲಿಕಾರ್ಜುನ ಎಂಬ ವ್ಯಕ್ತಿಯ ಹೆಸರಿನ ಖಾತೆಗೆ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ವಿನೋದ್ ಕುಮಾರ್ ರಾಹುಲ್ ಹೆಸರಿನಲ್ಲಿ ತನ್ನದಾಗಿವೆ ಎಂದು ಹೇಳಿದ್ದ ಕಂಪನಿಗಳೂ ಮಲ್ಲಿಕಾರ್ಜುನ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.  

ನಂಬಿಸಿ ವಂಚಿಸಲಾಗಿದೆ

ಮಲ್ಲಿಕಾರ್ಜುನ ಅವರ ವಿವರಗಳನ್ನು ಬಳಸಿಕೊಂಡು ಸುಬ್ರಮಣ್ಯ ಅವರನ್ನು ವಿನೋದ್‌ಕುಮಾರ್‌ ನಂಬಿಸಿ ವಂಚಿಸಲಾಗಿದೆ. ಈ ಪ್ರಕರಣದಲ್ಲಿ ಮಲ್ಲಿಕಾರ್ಜುನ ಅವರ ಪಾತ್ರದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಖಾಸಗಿ ಬ್ಯಾಂಕ್‌ನ ಮ್ಯಾನೇಜರ್‌ ವಿನೋದ್‌ಕುಮಾರ್‌ ಹಾಗೂ ಈತನ ಕೃತ್ಯಕ್ಕೆ ಸಹಕರಿಸಿದ ಅರುಣ್‌ ಮತ್ತು ಕಿರಣ್‌ ಎಂಬುವರನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದ್ದು, ಈ ಪ್ರಕರಣದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಪತ್ನಿಯ ಅನೈತಿಕ ಸಂಬಂಧಕ್ಕೆ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಂದೆ!
ಕೋಳಿ ವ್ಯಾಪಾರಿ ಬಳಿ ₹29 ಕೋಟಿ ಡ್ರಗ್ಸ್‌ ಪತ್ತೆ