ಶೀಘ್ರ ಮಾರ್ಕೆಟ್‌ ಮಳಿಗೆ ಬಾಡಿಗೆ ದರ ಪರಿಷ್ಕರಣೆ: ಮಳಿಗೆಯ ಪ್ರತಿ ಚದರದ ಅಡಿಗೆ 25.ರು ಮಾತ್ರ ನಿಗದಿ

KannadaprabhaNewsNetwork |  
Published : Jun 21, 2026, 01:45 AM IST
ಇತ್ತೀಚೆಗೆ ಕೆ.ಆರ್. ಮಾರುಕಟ್ಟೆಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹಾಗೂ ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ. ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ನಗರದ ಕೇಂದ್ರ ಭಾಗದಲ್ಲಿರುವ ಕೆ.ಆರ್‌.ಮಾರುಕಟ್ಟೆಯಲ್ಲಿ ಕೋಟ್ಯಂತರ ರು.ವಹಿವಾಟು ನಡೆಯುತ್ತಿದ್ದರೂ ಪಾಲಿಕೆಗೆ ಮಾತ್ರ ಬಿಡಿಗಾಸು ಆದಾಯ ಬರುತ್ತಿದೆ. ಇದಕ್ಕೆ ಶೀಘ್ರದಲ್ಲೇ ಮುಕ್ತಿ ದೊರಕಲಿದ್ದು, ಈ ತಿಂಗಳೊಳಗೆ ಹೊಸ ಬಾಡಿಗೆ ದರ ನಿಗದಿಪಡಿಸಲು ಪಾಲಿಕೆ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಕೇಂದ್ರ ಭಾಗದಲ್ಲಿರುವ ಕೆ.ಆರ್‌.ಮಾರುಕಟ್ಟೆಯಲ್ಲಿ ಕೋಟ್ಯಂತರ ರು.ವಹಿವಾಟು ನಡೆಯುತ್ತಿದ್ದರೂ ಪಾಲಿಕೆಗೆ ಮಾತ್ರ ಬಿಡಿಗಾಸು ಆದಾಯ ಬರುತ್ತಿದೆ. ಇದಕ್ಕೆ ಶೀಘ್ರದಲ್ಲೇ ಮುಕ್ತಿ ದೊರಕಲಿದ್ದು, ಈ ತಿಂಗಳೊಳಗೆ ಹೊಸ ಬಾಡಿಗೆ ದರ ನಿಗದಿಪಡಿಸಲು ಪಾಲಿಕೆ ಮುಂದಾಗಿದೆ.

ಸುಮಾರು 10 ವರ್ಷಗಳಳಿಂದೆ ಬಾಡಿಗೆ ದರ ಪರಿಷ್ಕರಣೆ ಮಾಡಲಾಗಿತ್ತು. ಆದರೆ ವ್ಯಾಪಾರಿಗಳು ಬಾಡಿಗೆ ಹೆಚ್ಚಾಗುತ್ತದೆ ಎಂದು ಕೋರ್ಟ್‌ ಮೊರೆ ಹೋಗಿದ್ದರು. ವಿಚಾರಣೆ ನಂತರ ಹೈಕೋರ್ಟ್‌ ಪಾಲಿಕೆಯ ಆಯುಕ್ತರೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆದೇಶ ನೀಡಿದೆ. ಹೀಗಾಗಿ, ಈ ತಿಂಗಳ ಅಂತ್ಯಕ್ಕೆ ಕೇಂದ್ರ ನಗರ ಪಾಲಿಕೆ ಆಯುಕ್ತರು ಬಾಡಿಗೆಯನ್ನು ನಿಗದಿಪಡಿಸಿ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಬಿಡಿಗಾಸು ಬಾಡಿಗೆ

ಕೆ.ಆರ್. ಮಾರುಕಟ್ಟೆಯಲ್ಲಿ ಕೋಟ್ಯಂತರ ರು. ವಹಿವಾಟು ನಡೆಯುತ್ತಿದ್ದರೂ ನಗರ ಪಾಲಿಕೆಗೆ ಬಾಡಿಗೆ ಮೂಲಕ ಬಿಡಿಗಾಸು ಪಾವತಿಯಾಗುತ್ತಿದೆ, ಕೆ.ಆರ್. ಮಾರುಕಟ್ಟೆಯಲ್ಲಿನ ಮಳಿಗೆಗಳಿಂದ ಪ್ರತಿ ಚದರಡಿಗೆ ಪಾಲಿಕೆಗೆ ಸರಾಸರಿ 25 ರು. ಮಾತ್ರ ಸಂಗ್ರಹಿಸಲಾಗುತ್ತಿದೆ. ಉದಾಹರಣೆಗೆ ಗ್ರೌಂಡ್ ಫ್ಲೋರ್‌ನಲ್ಲಿರುವ 58 ಚದರಡಿ ವಿಸ್ತೀರ್ಣದ ಅಂಗಡಿಯೊಂದಕ್ಕೆ ಚದರಡಿಗೆ 23 ರು.ನಂತೆ ತಿಂಗಳಿಗೆ ಕೇವಲ 1,350 ರು. ಬಾಡಿಗೆಯನ್ನು ಸಂಗ್ರಹಿಸಲಾಗುತ್ತಿದೆ.

ದಶಕದಿಂದ ವ್ಯಾಜ್ಯ, ಬಾಡಿಗೆ ಇಲ್ಲ:

ಕೆ.ಆರ್.ಮಾರುಕಟ್ಟೆಯ ಒಟ್ಟು ವಿಸ್ತೀರ್ಣ 7.96 ಎಕರೆ. ಅದರಲ್ಲಿ 3.09 ಎಕರೆ ಪ್ರದೇಶದಲ್ಲಿ ಮಾರುಕಟ್ಟೆ ಕಟ್ಟಡವನ್ನು ನಿರ್ಮಿಸಲಾಗಿದೆ. ಬೇಸ್ಮೆಂಟ್‌ನಲ್ಲಿ ಪಾರ್ಕಿಂಗ್‌ ಸ್ಥಳವಿದೆ. ಅಪ್ಪರ್‌ ಬೇಸ್ಮೆಂಟ್, ಗ್ರೌಂಡ್‌ ಫ್ಲೋರ್ ಜೊತೆಗೆ 2 ಮಹಡಿಗಳಲ್ಲಿ ವಿವಿಧ ಗಾತ್ರದ ಒಟ್ಟು 1,269 ಅಂಗಡಿಗಳಿವೆ. ಸುಮಾರು 12-15 ವರ್ಷಗಳಿಂದ ಚದರಡಿಗೆ ಸರಾಸರಿ 25 ರು. ಬಾಡಿಗೆಯನ್ನು ಮಳಿಗೆದಾರರು ಪಾವತಿಸುತ್ತಿದ್ದಾರೆ. ಆದರೆ, ಈ ಪ್ರದೇಶದಲ್ಲಿ ಸಣ್ಣ ಮಳಿಗೆಗೂ ಲಕ್ಷಾಂತರ ರು. ಬಾಡಿಗೆ ಇದೆ.

10 ವರ್ಷಗಳಿಂದ ಬಾಡಿಗೆ ಇಲ್ಲ!:

ಕಳೆದ 12 ವರ್ಷಗಳಿಂದ ಕೆ.ಆರ್. ಮಾರುಕಟ್ಟೆಯಲ್ಲಿನ 400 ಮಳಿಗೆದಾರರು ಮಾತ್ರ ದಶಕಗಳ ಹಿಂದೆ ನಿಗದಿಪಡಿಸಿದ್ದ ಬಾಡಿಗೆ ಪಾವತಿಸುತ್ತಿದ್ದಾರೆ. ಉಳಿದವರು ಬಾಡಿಗೆ ಪಾವತಿಸುತ್ತಿಲ್ಲ. ನೂತನ ದರ ನಿಗದಿಯಾದ ಬಳಿಕ ಹಿಂದಿನ ಎಲ್ಲ ಬಾಡಿಗೆ ವಸೂಲಿ ಮಾಡಲಾಗುತ್ತದೆ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ. ಜಗದೀಶ್ ತಿಳಿಸಿದರು. ಪರಿಷ್ಕರಣೆ ವಿರೋಧಿಸಿ ನ್ಯಾಯಾಲಯಕ್ಕೆ: 2014ರಲ್ಲಿ ಮೌಲ್ಯಮಾಪಕರ ವರದಿಯಲ್ಲಿ ಪ್ರತಿ ಚದರಡಿಗೆ ಸರಾಸರಿ 98 ರು. ಬಾಡಿಗೆ ನಿಗದಿಪಡಿಸಲು ಶಿಫಾರಸ್ಸು ಮಾಡಲಾಗಿತ್ತು. 2015ರ ಜುಲೈ ತಿಂಗಳಲ್ಲಿ ಬಿಬಿಎಂಪಿ ಆಯುಕ್ತರು ಚದರಡಿಗೆ ಕನಿಷ್ಠ 18 ರು.ಯಿಂದ ಗರಿಷ್ಠ 31 ರು. ನಿಗದಿಪಡಿಸಿದ್ದರು. ಆದರೆ, ಮಾರುಕಟ್ಟೆ ವರ್ತಕರು ಬಾಡಿಗೆ ದುಬಾರಿಯಾಗುತ್ತದೆ ಎಂದು ಕೋರ್ಟ್ ಮೊರೆ ಹೋಗಿದ್ದರು.

ಪಾಲಿಕೆ ಆಸ್ತಿ ಬಾಡಿಗೆಗೆ!

ಬಾಡಿಗೆಗೆ ಪಡೆದಿರುವ ವರ್ತಕರು ತಾವೇ ವ್ಯಾಪಾರ ಮಾಡದೇ ಬೇರೆಯವರಿಗೆ ದುಬಾರಿ ದರಕ್ಕೆ ಬಾಡಿಗೆಗೆ ನೀಡಿದ್ದಾರೆ. ಪಾಲಿಕೆಗೆ ಮಾತ್ರ ಬಿಡಿಗಾಸು ಬಾಡಿಗೆ ಕಟ್ಟುವ ಮೂಲಕ ಪಾಲಿಕೆಗೆ ಕೋಟ್ಯಂತರ ರು. ಆದಾಯ ಖೋತಾ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ಮಾರುಕಟ್ಟೆಗೆ ಹೊಸ ರೂಪ

ಇತ್ತೀಚೆಗೆ ಕೆ.ಆರ್.ಮಾರುಕಟ್ಟೆಗೆ ಭೇಟಿ ನೀಡಿದ್ದ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್ ಫೈರ್ ಆಡಿಟ್ ನಡೆಸುವ ಜೊತೆಗೆ ಅಕ್ರಮ ವ್ಯಾಪಾರಿಗಳು, ಒತ್ತುವರಿ ತೆರವು, ಸ್ವಚ್ಛತಾ ಕಾರ್ಯ ಕೈಗೊಳ್ಳಲು ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಒತ್ತುವರಿ ತೆರವು ಮತ್ತು ಸ್ವಚ್ಛತಾ ಕಾರ್ಯ ನಡೆಯುತ್ತಿದೆ.

12 ವರ್ಷಗಳಿಗೂ ಹೆಚ್ಚು ಕಾಲದಿಂದ ಕೆ.ಆರ್.ಮಾರುಕಟ್ಟೆ ಮಳಿಗೆಗಳ ಬಾಡಿಗೆ ಪರಿಷ್ಕರಣೆಯಾಗಿಲ್ಲ. ಈ ತಿಂಗಳ ಅಂತ್ಯದೊಳಗೆ ದರ ಪರಿಷ್ಕರಿಸುವ ಉದ್ದೇಶವಿದೆ.

-ಜಿ ಜಗದೀಶ್, ಕೇಂದ್ರ ಪಾಲಿಕೆ ಆಯುಕ್ತ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಉದ್ಯಮಿಗೆ ₹2.6 ಕೋಟಿ ವಂಚಿಸಿದ 3 ಆರೋಪಿಗಳ ಬಂಧನ
ಸುಳ್ಳು ಜಾತಿ ನಿಂದನೆ ಕೇಸ್‌ಗೆ ಬೇಸತ್ತ ವ್ಯಾಪಾರಿ ವಿಷ ಕುಡಿದು ಆತ್ಮಹತ್ಯೆ