ಬೀಗ ಹಾಕಿದ ಮನೆ ಗುರಿಯಾಗಿಸಿಕೊಂಡು ಬೀಗ ಮುರಿದು ಕಳವು ಮಾಡುತ್ತಿದ್ದ 3 ಮನೆಗಳ್ಳರ ಬಂಧನ

KannadaprabhaNewsNetwork |  
Published : Dec 14, 2024, 01:31 AM ISTUpdated : Dec 14, 2024, 04:32 AM IST
Bhopal museum theft

ಸಾರಾಂಶ

ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ಬೀಗ ಮುರಿದು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 18 ಲಕ್ಷ ರು. ಮೌಲ್ಯದ 180 ಗ್ರಾಂ ಚಿನ್ನಾಭರಣ, 4 ಕೆ.ಜಿ. 800 ಗ್ರಾಂ ಬೆಳ್ಳಿವಸ್ತುಗಳು ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.

 ಬೆಂಗಳೂರು : ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ಬೀಗ ಮುರಿದು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 18 ಲಕ್ಷ ರು. ಮೌಲ್ಯದ 180 ಗ್ರಾಂ ಚಿನ್ನಾಭರಣ, 4 ಕೆ.ಜಿ. 800 ಗ್ರಾಂ ಬೆಳ್ಳಿವಸ್ತುಗಳು ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.

ಕೋಲಾರದ ಕೆಜಿಎಫ್‌ನ ಚಾಮರಾಜಪೇಟೆ ನಿವಾಸಿ ಸಂಜಯ್‌ ಜರಾಮೇಸ್‌(22), ಆಂಡ್ರಸನ್‌ ಪೇಟೆಯ ಸಂಜಿತ್‌(20) ಹಾಗೂ ರಾಬರ್ಟ್‌ಸನ್‌ ಪೇಟೆಯ ಸೂರ್ಯ(19) ಬಂಧಿತರು. ಬಾಣಸವಾಡಿ ಸಂಪನ್ನ ಲೇಔಟ್‌ನ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಬಾಡಿಗೆ ಇದ್ದ ನಿವಾಸಿಯೊಬ್ಬರು ಅ.30ರಂದು ಮನೆಗೆ ಬೀಗ ಹಾಕಿಕೊಂಡು ವೆಲ್ಲೂರಿಗೆ ತೆರಳಿದ್ದರು. ನ.2ರಂದು ಮನೆಯ ಮಾಲೀಕರು ಮನೆಯ ಬಾಗಿಲು ಮುರಿದಿರುವುದಾಗಿ ಮಾಹಿತಿ ನೀಡಿದ್ದಾರೆ. ಮನೆಗೆ ಬಂದು ನೋಡಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ.24ರಂದು ಪೊಲೀಸರು ಗಸ್ತಿನಲ್ಲಿದ್ದಾಗ ನಂಬರ್‌ ಪ್ಲೇಟ್‌ ಇಲ್ಲದ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಮೂವರು ಅಪರಿಚಿತರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದು, ಬಾಣಸವಾಡಿ ಠಾಣಾ ವ್ಯಾಪ್ತಿ ಸೇರಿ ಹಲವು ಕಡೆ ಮನೆಗಳವು ಮಾಡಿರುವ ಬಗ್ಗೆಯೂ ಬಾಯ್ಬಿಟ್ಟಿದ್ದಾರೆ. ಹೆಚ್ಚಿನ ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಚಿಕ್ಕಪೇಟೆಯ ಚಿನ್ನಾಭರಣ ಅಂಗಡಿಯಲ್ಲಿ ಮಾರಾಟ ಮಾಡಲಾಗಿದ್ದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

11 ಪ್ರಕರಣ ಪತ್ತೆ:

ಈ ಮೂವರು ಆರೋಪಿಗಳ ಬಂಧನದಿಂದ ಬಾಣಸವಾಡಿ ಠಾಣೆಯಲ್ಲಿ ದಾಖಲಾಗಿದ್ದ 9 ಮನೆಗಳವು ಪ್ರಕರಣಗಳು, ರಾಮಮೂರ್ತಿನಗರದ ಮನೆಗಳವು ಮತ್ತು ದ್ವಿಚಕ್ರ ವಾಹನ ಕಳವು ಪ್ರಕರಣ ಸೇರಿ ಒಟ್ಟು 11 ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!