ಓಮ್ನಿ ಕಾರುಗಳನ್ನೇ ಕದಿಯುತ್ತಿದ್ದ 3 ಚಾಲಾಕಿ ಖದೀಮರು ಬಂಧನ

KannadaprabhaNewsNetwork |  
Published : Jun 21, 2025, 01:49 AM ISTUpdated : Jun 21, 2025, 07:47 AM IST
driving

ಸಾರಾಂಶ

ನಗರದಲ್ಲಿ ಓಮ್ನಿ ಕಾರುಗಳನ್ನೇ ಕಳವು ಮಾಡುತ್ತಿದ್ದ ಮೂವರು ಚಾಲಾಕಿ ಖದೀಮರು ವಿದ್ಯಾರಣ್ಯಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದು, ಆರೋಪಿಗಳಿಂದ ₹12 ಲಕ್ಷ ಮೌಲ್ಯದ ಆರು ಕಾರುಗಳನ್ನು ಜಪ್ತಿ ಮಾಡಲಾಗಿದೆ.

 ಬೆಂಗಳೂರು :  ನಗರದಲ್ಲಿ ಓಮ್ನಿ ಕಾರುಗಳನ್ನೇ ಕಳವು ಮಾಡುತ್ತಿದ್ದ ಮೂವರು ಚಾಲಾಕಿ ಖದೀಮರು ವಿದ್ಯಾರಣ್ಯಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದು, ಆರೋಪಿಗಳಿಂದ ₹12 ಲಕ್ಷ ಮೌಲ್ಯದ ಆರು ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಉಮೇಶ್ ಅಲಿಯಾಸ್ ಸುಬ್ಬು, ವಿದ್ಯಾರಣ್ಯಪುರದ ರೈನ್‌ ಬೋ ಬಡಾವಣೆಯ ತಬ್ರೇಜ್‌ ಖಾನ್‌ ಅಲಿಯಾಸ್ ಸಾಹಿಲ್‌ ಹಾಗೂ ಜಬಿ ಖಾನ್ ಬಂಧಿತರು. ಕೆಲ ದಿನಗಳ ಹಿಂದೆ ಎಂ.ಎಸ್.ಪಾಳ್ಯದ ಬಳಿ ಓಮ್ನಿ ಕಾರು ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಸಿ.ಬಿ.ಶಿವಸ್ವಾಮಿ ನೇತೃತ್ವದ ಪಿಎಸ್‌ಐ ಕೆ.ಎಲ್‌.ಪ್ರಭು ತಂಡವು ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಸೆರೆ ಹಿಡಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಮೇಶ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಆರೋಪಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಕಳ್ಳತನ ಪ್ರಕರಣಗಳಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮುದ್ದೆ ಊಟ ಸಹ ಸವಿದಿದ್ದ. ಹೀಗಿದ್ದರೂ ತನ್ನ ಚಾಳಿ ಬದಲಾಯಿಸಿಕೊಳ್ಳದೆ ಮತ್ತೆ ಸಹಚರರ ಜತೆ ಜೈಲು ಸೇರಿದ್ದಾನೆ.

ಐದು ವರ್ಷಗಳ ಹಿಂದೆ ಕಾಮಾಕ್ಷಿಪಾಳ್ಯದ ಬಳಿ ಟ್ರ್ಯಾಕ್ಟರ್‌ ಕಳ್ಳತನ ಮಾಡಿ ಸಿಕ್ಕಿಬಿದ್ದು ಜೈಲು ಸೇರಿದ್ದ ಉಮೇಶ್. ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ಮಧುಗಿರಿಯಲ್ಲಿ ಗ್ಯಾರೇಜ್‌ ಇಟ್ಟುಕೊಂಡಿದ್ದ ಜಬಿಗೆ ಉಮೇಶ್ ಹಳೆಯ ಪರಿಚಯಸ್ಥನಾಗಿದ್ದು, ಕದ್ದ ವಾಹನಗಳನ್ನು ವಿಲೇವಾರಿಗೆ ಉಮೇಶ್‌ಗೆ ಆತ ನೆರವಾಗುತ್ತಿದ್ದ. ಹಣದಾಸೆಗೆ ತೋರಿಸಿ ಜಬಿ ಹಾಗೂ ತಬ್ರೇಜ್‌ನನ್ನು ತನ್ನ ಕೃತ್ಯಕ್ಕೆ ಉಮೇಶ್ ಬಳಸಿಕೊಂಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ರೈತರಿಂದ ಓಮ್ನಿ ಕಾರುಗಳಿಗೆ ಬೇಡಿಕೆ ಇತ್ತು. ಹೀಗಾಗಿ ನಗರದಲ್ಲಿ ಓಮ್ನಿ ಕಾರುಗಳ್ನು ಕದ್ದು ಮಂಡ್ಯ ಹಾಗೂ ಶಿರಸಿಯಲ್ಲಿ ಆರೋಪಿಗಳು ಮಾರಾಟ ಮಾಡಿದ್ದರು. ಅಂತೆಯೇ ಎಂ.ಎಸ್‌.ಪಾಳ್ಯದ ಬಳಿ ಸಹ ಓಮ್ನಿಯನ್ನೇ ಉಮೇಶ್ ತಂಡವು ಕಳವು ಮಾಡಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

PREV
Read more Articles on

Recommended Stories

ಸಾಲ ಕೊಟ್ಟವರ ಮನೆಯಲ್ಲೇ ಕಳ್ಳತನ : 6 ದುರುಳರ ಬಂಧನ
ಮಗು ಬಕೆಟ್‌ ನೀರು ಮುಟ್ಟಿದ್ದಕ್ಕೆ ಪಾಲಕರಿಗೆ ಬ್ಯಾಟ್‌ನಿಂದ ಹಲ್ಲೆ !