ಇಬ್ಬರು ಸೇನಾಧಿಕಾರಿಗಳು, ಇಬ್ಬರು ಸೈನಿಕರು ಸಾವು
ರಜೌರಿ: ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸೇನಾಪಡೆ ಮತ್ತು ಉಗ್ರರ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಕ್ಯಾಪ್ಟನ್ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಈ ನಡುವೆ, ಅಡಗಿರುವ ಇಬ್ಬರು ಉಗ್ರರಿಗಾಗಿ ಸೇನಾ ಕಾರ್ಯಾಚರಣೆ ಮುಂದಿವರೆದಿದೆ.
ಇಲ್ಲಿನ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಮತ್ತು ಪೊಲೀಸರು ಬುಧವಾರ ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಉಗ್ರರು ಹಾಗೂ ಸೇನಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಸೇನಾಧಿಕಾರಿಗಳು ಮೃತಪಟ್ಟಿದ್ದಾರೆ. ಕಾರ್ಯಾಚರಣೆ ಮುಂದುವರೆಸಲಾಗಿದ್ದು, ಅಡಗಿಕೊಂಡಿರುವ ಇಬ್ಬರು ಉಗ್ರರಿರಾಗಿ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಪ್ರದೇಶದಲ್ಲಿ ಕಳೆದ ಭಾನುವಾರದಿಂದಲೂ ಸೇನಾಪಡೆಗಳು ಶೋಧ ಕಾರ್ಯ ನಡೆಸುತ್ತಿವೆ. ಹೀಗಾಗಿ ಸ್ಥಳೀಯರನ್ನು ಮನೆ ಬಿಟ್ಟು ಹೊರಗೆ ಬರದಂತೆ ಸೂಚಿಸಲಾಗಿದೆ. ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.