ರಾಪಿಡೋ ಬುಕ್‌ ಮಾಡಿ ಚಾಲಕಗೆ ₹4 ಸಾವಿರ ವಂಚನೆ

KannadaprabhaNewsNetwork |  
Published : Feb 09, 2024, 01:45 AM IST
ರ್ಯಾಪಿಡೋ ಸಾಂದರ್ಭಿಕ ಚಿತ್ರ | Kannada Prabha

ಸಾರಾಂಶ

ರ್ಯಾಪಿಡೋ ಬುಕ್‌ ಮಾಡಿದ ಸೈಬರ್‌ ವಂಚಕರು, ತನ್ನ ಪತ್ನಿಗೆ ಹಣ ನೀಡಲು ಆಗುತ್ತಿಲ್ಲ ಎಂದು ಚಾಲಕನಿಂದ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದುಷ್ಕರ್ಮಿಯೊಬ್ಬ ರಾಪಿಡೋ ಬೈಕ್‌ ಟ್ಯಾಕ್ಸಿ ಚಾಲಕನಿಗೆ ₹4,300 ವರ್ಗಾಯಿಸಿರುವುದಾಗಿ ನಕಲಿ ಸಂದೇಶ ಕಳುಹಿಸಿ ವಂಚಿಸಿರುವ ಸಂಬಂಧ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ದೂರು ದಾಖಲಾಗಿದೆ.

ತುಳಿಸಿನಗರದ ಬಿಟ್ಟು ಕುಮಾರ್‌ ಯಾದವ್‌(27) ವಂಚನೆಗೆ ಒಳಗಾದ ರಾಪಿಡೋ ಬೈಕ್‌ ಟ್ಯಾಕ್ಸಿ ಚಾಲಕ. ಈತ ನೀಡಿದ ದೂರಿನ ಮೇರೆಗೆ ಅಪರಿಚಿತ ದುಷ್ಕರ್ಮಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ವಂಚನೆ?:

ದೂರುದಾರ ಬಿಟ್ಟು ಕುಮಾರ್‌ ರಾಪಿಡೋ ಬೈಕ್‌ ಟ್ಯಾಕ್ಸಿ ಚಾಲಕ. ಫೆ.4ರಂದು ಖಾಸಗಿ ಆಸ್ಪತ್ರೆಯೊಂದರ ಲೊಕೇಶನ್‌ನಿಂದ ರಾಪಿಡೋ ಬೈಕ್‌ ಟ್ಯಾಕ್ಸಿ ಬುಕ್‌ ಮಾಡಿರುವ ಸಂದೇಶ ಬಂದಿದೆ. ಅದರಂತೆ ಬಿಟ್ಟು ಕುಮಾರ್‌ ಆ ಆಸ್ಪತ್ರೆ ಬಳಿಗೆ ತೆರಳಿ ಬೈಕ್‌ ಟ್ಯಾಕ್ಸಿ ಬುಕ್‌ ಮಾಡಿದ್ದ ವ್ಯಕ್ತಿಗೆ ಕರೆ ಮಾಡಿದ್ದಾನೆ. ಆದರೆ, ಆ ವ್ಯಕ್ತಿಗೆ ಕರೆ ಹೋಗಿಲ್ಲ. ಬಳಿಕ ಮತ್ತೊಂದು ಮೊಬೈಲ್‌ ಸಂಖ್ಯೆಯಿಂದ ಬಿಟ್ಟು ಕುಮಾರ್‌ಗೆ ಕರೆ ಮಾಡಿದ್ದ ಆ ವ್ಯಕ್ತಿ, ‘ನನ್ನ ಹೆಂಡತಿ ಶಾಪಿಂಗ್‌ ಮಾಡುತ್ತಿದ್ದು, ಆಕೆಯನ್ನು ನೀವು ಪಿಕಾಪ್‌ ಮಾಡಬೇಕು. ಬೈಕ್‌ ಟ್ಯಾಕ್ಸಿ ಬಾಡಿಗೆ ದರ ₹200 ತೋರಿಸುತ್ತಿದೆ. ನಾನು ನಿನಗೆ ₹4,300 ಹಾಕುತ್ತೇನೆ. ಈ ಪೈಕಿ ₹4 ಸಾವಿರವನ್ನು ನನ್ನ ಹೆಂಡತಿಗೆ ಕೊಡು. ಉಳಿದ ₹300 ನೀನೇ ಇರಿಸಿಕೋ’ ಎಂದು ಬಿಟ್ಟು ಕುಮಾರ್‌ನ ಗೂಗಲ್‌ ಪೇ ನಂಬರ್‌ ಪಡೆದುಕೊಂಡಿದ್ದಾನೆ.

ಪತ್ನಿಗೆ ₹4 ಸಾವಿರ ವರ್ಗಾವಣೆ:

ಬಳಿಕ ಬಿಟ್ಟು ಕುಮಾರ್‌ ಗೋಗಲ್‌ ಪೇ ಮುಖಾಂತರ ₹4,300 ಬಂದಿರುವ ಸಂದೇಶ ಬಂದಿದೆ. ಬಳಿಕ ಆ ವ್ಯಕ್ತಿಯ ಪತ್ನಿಯ ಮೊಬೈಲ್‌ ಸಂಖ್ಯೆಗೆ ₹4 ಸಾವಿರವನ್ನು ಬಿಟ್ಟು ಕುಮಾರ್‌ ವರ್ಗಾಯಿಸಿದ್ದಾರೆ. ಬಳಿಕ ಬ್ಯಾಂಕ್‌ ಖಾತೆಯಲ್ಲಿರುವ ಹಣವನ್ನು ಪರಿಶೀಲಿಸಿದಾಗ, ಆತನ ಖಾತೆಗೆ ಯಾವುದೇ ಹಣ ಬಾರದಿರುವುದು ಗೊತ್ತಾಗಿದೆ. ಅಲ್ಲದೆ, ಆತನ ಖಾತೆಯಿಂದಲೇ ₹4 ಸಾವಿರ ಕಡಿತವಾಗಿರುವುದು ತಿಳಿದು ಬಂದಿದೆ. ತನಗಾದ ವಂಚನೆ ಬಗ್ಗೆ ಬಿಟ್ಟು ಕುಮಾರ್‌ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸೈಬರ್‌ ವಂಚನೆಯ ಹೊಸ ಮಾರ್ಗ

ಇತ್ತೀಚೆಗೆ ಸೈಬರ್‌ ವಂಚಕರು ಅಮಾಯಕರ ವಂಚನೆಗೆ ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ರಾಪಿಡೋ ಬೈಕ್‌ ಟ್ಯಾಕ್ಸಿ ಬುಕ್‌ ಮಾಡುವ ನೆಪದಲ್ಲಿ ವಂಚನೆಗೆ ಇಳಿದಿದ್ದಾರೆ. ಪತ್ನಿ ಶಾಪಿಂಗ್‌, ಪತ್ನಿ ಆಸ್ಪತ್ರೆಯಲ್ಲಿ ಇದ್ದಾಳೆ. ಆಕೆಯ ಖಾತೆಗೆ ಹಣ ಹೋಗುತ್ತಿಲ್ಲ. ನಾನೇ ನಿಮಗೆ ಹಣ ಹಾಕುತ್ತೇನೆ. ಆ ಹಣವನ್ನು ಆಕೆಯ ಖಾತೆಗೆ ವರ್ಗಾಯಿಸಿ ಬಳಿಕ ಆಕೆಯನ್ನು ಪಿಕ್‌ ಮಾಡಿ ಮನೆಗೆ ಬಿಟ್ಟು ಬಿಡಿ ಎಂದು ಹಣ ವರ್ಗಾವಣೆಯಾಗಿರುವ ಹಾಗೆ ನಕಲಿ ಸಂದೇಶ ಕಳುಹಿಸುತ್ತಾರೆ. ಇದು ಅಸಲಿ ಸಂದೇಶ ಎಂದು ನಂಬಿ ಬೈಕ್‌ ಟ್ಯಾಕ್ಸಿ ಚಾಲಕರು ಹಣವನ್ನು ವರ್ಗಾಯಿಸಿ ವಂಚನೆಗೆ ಒಳಗಾಗುತ್ತಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌