;Resize=(412,232))
ಜೈಪುರ : ಜೈಪುರದ ಹೋಟೆಲ್ ಒಂದರಲ್ಲಿ 40000 ರು. ಲಂಚ ಪಡೆದ ಆರೋಪದ ಮೇಲೆ ಬೆಂಗಳೂರು ಪೊಲೀಸ್ ಇಲಾಖೆಯ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳನ್ನು ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
ಆರೋಪಿಗಳನ್ನು ಬೆಂಗಳೂರಿನ ಎಚ್‌ಎಎಲ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅನಿತಾ ಕೆ. ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳಾದ ಉಳವಪ್ಪ ತೇಗೂರ್, ಯತೀಶ್ ಎಂದು ಗುರುತಿಸಲಾಗಿದೆ.
ಒಬ್ಬ ವ್ಯಕ್ತಿ ಹಾಗೂ ಆತನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪದ ಮೇಲೆ ಎಚ್‌ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವ್ಯಕ್ತಿಯ ಕುಟುಂಬಸ್ಥರು ರಾಜಸ್ಥಾನದವರಾದ ಕಾರಣ ಇದರ ತನಿಖೆ ನಡೆಸಲು ಸದ್ಯ ಬಂಧಿತರಾಗಿರುವ ಪೊಲೀಸರು ಜೈಪುರಕ್ಕೆ ಆಗಮಿಸಿದ್ದರು. ಆಗ 2 ಲಕ್ಷ ರು. ಲಂಚ ನೀಡಿದರೆ ಪ್ರಕರಣ ಖುಲಾಸೆ ಮಾಡಿ, ಕುಟುಂಬವನ್ನು ಆರೋಪದಿಂದ ಮುಕ್ತಗೊಳಿಸುವುದಾಗಿ ಆಮಿಷ ಒಡ್ಡಿದ್ದರು. ಆದರೆ ವ್ಯಕ್ತಿ ಮರುದಿನ ಹಣದ ವ್ಯವಸ್ಥೆ ಮಾಡುವುದಾಗಿ ತಿಳಿಸಿ, ಎಸಿಬಿಗೆ ದೂರು ಸಲ್ಲಿಸಿದ್ದರು.
ಮರುದಿನ ಜೈಪುರದ ಗಂಗೌರ್ ಹೋಟೆಲ್‌ನಲ್ಲಿ ಉಳವಪ್ಪ ತೇಗೂರ್ 40,000 ರು. ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾನೆ. ವಿಚಾರಣೆ ನಡೆಸಿದಾಗ ಇನ್ನೋರ್ವ ಹೆಡ್ ಕಾನ್‌ಸ್ಟೇಬಲ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಭಾಗಿಯಾಗಿದ್ದನ್ನು ಬಾಯಿಬಿಟ್ಟಿದ್ದಾನೆ. ಸದ್ಯ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದ್ದು, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.