ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗುರುವಾರ ಸಂಜೆಯಷ್ಟೇ ಪೊಲೀಸರು ಮನೆ ಪರಿಶೀಲಿಸಿದಾಗ ಮೂವರ ಅಸ್ಥಿಪಂಜರ ಪತ್ತೆಯಾಗಿತ್ತು. ಮತ್ತಷ್ಟು ಪರಿಶೀಲನೆ ಬಳಿಕ ಇನ್ನೆರಡು ಅಸ್ಥಿಪಂಜರ ಸಿಕ್ಕಿವೆ. ಇವು ಜಗನ್ನಾಥರೆಡ್ಡಿ, ಪತ್ನಿ ಪ್ರೇಮ, ಮೊದಲ ಪುತ್ರ ಕೃಷ್ಣ ರೆಡ್ಡಿ, ಮಗಳು ತ್ರಿವೇಣಿ ಹಾಗೂ ಕೊನೇ ಪುತ್ರ ನರೇಂದ್ರರೆಡ್ಡಿ ಅವರದ್ದು ಎಂದು ಹೇಳಲಾಗುತ್ತಿದೆ.
ತುಮಕೂರಲ್ಲಿ ಎಂಜಿನಿಯರ್: ಜಗನ್ನಾಥ ರೆಡ್ಡಿ ತುಮಕೂರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್ ಆಗಿದ್ದರು. ನಿವೃತ್ತಿ ನಂತರ ಚಿತ್ರದುರ್ಗದಲ್ಲಿ ನೆಲೆಸಿದ್ದರು. ಮೂರು ಮಕ್ಕಳಲ್ಲಿ ಇಬ್ಬರಿಗೆ ಮದುವೆಯಾಗಿಲ್ಲದ ಕಾರಣ ಜಗನ್ನಾಥ ರೆಡ್ಡಿ ಅವರು ಖಿನ್ನತೆಗೆ ಜಾರಿದ್ದರು ಎನ್ನಲಾಗಿದೆ.ದರೋಡೆ ಕೇಸಲ್ಲಿ ಬಂಧನ: ಜಗನ್ನಾಥರೆಡ್ಡಿ ಪುತ್ರ ನರೇಂದ್ರರೆಡ್ಡಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದು, ಆತನ ಮೇಲೆ 2013ರಲ್ಲಿ ಬಿಡದಿ ಬಳಿ ವಾಹನ ತಡೆದು ದರೋಡೆ ನಡೆಸಿದ ಕೇಸ್ ದಾಖಲಾಗಿತ್ತು. ಗೆಳೆಯರ ಜತೆ ತೆರಳಿ ದರೋಡೆ ಕೇಸಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ 15 ದಿನ ಜೈಲು ಪಾಲಾಗಿದ್ದ, ಈ ಕಾರಣಕ್ಕೆ ಜಗನ್ನಾಥರೆಡ್ಡಿ ತೀವ್ರ ನೊಂದಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಕೋವಿಡ್ ಸಮಯದಲ್ಲಿ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ಇದೆ. ಮನೆ ಪರಿಶೀಲಿಸಿದಾಗ ಅಲ್ಲಿ ಚೀಟಿಯೊಂದು ಪತ್ತೆಯಾಗಿದ್ದು, ಅದು ಡೆತ್‌ನೋಟೇ ಅಥವಾ ಬೇರೆ ಚೀಟಿಯೇ ಎಂಬುದನ್ನು ಪೊಲೀಸರು ಖಚಿತಪಡಿಸಿಲ್ಲ.
ವಿದ್ಯುತ್ ಸಂಪರ್ಕ ಕಡಿತ: ಜಗನ್ನಾಥ ರೆಡ್ಡಿ 2019ರ ಜನವರಿಯಲ್ಲಿ ಕೊನೆಯದಾಗಿ ತಮ್ಮ ಮನೆಯ ವಿದ್ಯುತ್ ಬಿಲ್ ಪಾವತಿ ಮಾಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಹಣ ಪಾವತಿಸಿಲ್ಲ. ₹2,850 ವಿದ್ಯುತ್ ಬಿಲ್ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ನಿವೃತ್ತ ಎಂಜಿನಿಯರ್ ಪೆನ್ಷನ್ ಹಣಕ್ಕಾಗಿ ಪ್ರತಿ ವರ್ಷ ದಾಖಲೆ ಸಲ್ಲಿಸುತ್ತಾರೆ. ಹೀಗಾಗಿ ಯಾವ ವರ್ಷದಿಂದ ಸಲ್ಲಿಸಿಲ್ಲ ಎಂಬ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅದು ಸಿಕ್ಕಲ್ಲಿ ಜಗನ್ನಾಥರೆಡ್ಡಿ ಮೃತಪಟ್ಟು ಎಷ್ಟು ವರ್ಷಗಳಾಗಿರಬಹುದೆಂಬ ಬಗ್ಗೆ ಖಚಿತತೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಯಾರಿಗೂ ಗೊತ್ತಾಗಲಿಲ್ಲವೇಕೆ?: ಈ ಮನೆಯಲ್ಲಿ ಐವರ ಸಾವಿನ ಘಟನಾವಳಿಗಳು ವಿಚಿತ್ರವಾಗಿ ಕಾಣಿಸುತ್ತಿದ್ದು, ಐದು ವರ್ಷಗಳ ಹಿಂದೆಯೇ ಸಾವು ಸಂಭವಿಸಿದ್ದರೆ ಕೊಳೆತ ಶವದ ವಾಸನೆ ಪಕ್ಕದ ಮನೆಯವರಿಗೆ ಬಂದಿಲ್ಲವೇ? ಮನೆ ಬೀಗ ಹಾಕಿದ್ದರೂ ಎಲ್ಲಿಗೆ ಹೋದರು ಎಂಬ ಕನಿಷ್ಟ ಕುತೂಹಲ ಅಕ್ಕಪಕ್ಕದವರಿಗೆ ಮೂಡಿಲ್ಲವೇ? ಕಳೆದ ಐದು ವರ್ಷಗಳಿಂದ ಸಂಬಂಧಿಕರಾರೂ ಇವರನ್ನು ಹುಡುಕಿಕೊಂಡು ಬಂದಿಲ್ಲವೇ? ಕನಿಷ್ಟ ಮದುವೆ ಮುಂತಾದ ಮಂಗಳ ಕಾರ್ಯಕ್ಕೆ ಈ ಕುಟುಂಬ ನೆನಪಾಗಿಲ್ಲವೇ? ಎಂಬ ಪ್ರಶ್ನೆಗಳು ಇದೀಗ ಹುಟ್ಟಿಕೊಂಡಿವೆ.