ಪಾರ್ಟಿಗಳನ್ನು ಆಯೋಜಿಸಿ ಡ್ರಗ್ಸ್‌ಮಾರುತ್ತಿದ್ದ ಡಿಜೆ ಸೇರಿ ಐವರ ಸೆರೆ

KannadaprabhaNewsNetwork | Published : Dec 29, 2023 1:31 AM

ಸಾರಾಂಶ

ಪಾರ್ಟಿ ಆಯೋಜಿಸಿ ಬಳಿಕ ಗ್ರಾಹಕರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಡಿಜೆ ಮತ್ತು ಸ್ನೇಹಿತರ ಬಂಧನ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡ್ರಗ್ಸ್ ದಂಧೆಕೋರರ ಮೇಲೆ ಸಿಸಿಬಿ ದಾಳಿ ಮುಂದುವರೆಸಿದೆ. ಈಗ ಮತ್ತೆ ಡಿಜೆ ಸೇರಿದಂತೆ ಐವರು ಪೆಡ್ಲರ್‌ಗಳನ್ನು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆಡುಗೋಡಿ ಸಮೀಪದ ನಿವಾಸಿಗಳಾದ ಲಿಂಗೇಶ್‌ ನಾರಾಯಣನ್‌, ಸೂರಜ್‌, ಶಾರುಖ್ ಖಾನ್‌, ಕೇರಳ ರಾಜ್ಯದ ಹಿರಾನ್‌, ಶ್ರೇಯಸ್‌ ಕೆ.ಪ್ರಸಾದ್‌ ಹಾಗೂ ರಾಹುಲ್‌ ಬಂಧಿತರಾಗಿದ್ದು, ಆರೋಪಿಗಳಿಂದ 3.1 ಕೇಜಿ ಗಾಂಜಾ, 200 ಗ್ರಾಂ ಎಡಿಎಂಎ ಹಾಗೂ ಮೊಬೈಲ್ ಸೇರಿದಂತೆ ₹28 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆಡುಗೋಡಿ, ಅಮೃತಹಳ್ಳಿ ಮತ್ತು ಕೆಂಗೇರಿ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಮಾಹಿತಿ ಪಡೆದು ಇನ್‌ಸ್ಪೆಕ್ಟರ್ ದೀಪಕ್‌ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದೆ.

ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ?:

ಆರೋಪಿಗಳ ಪೈಕಿ ಲಿಂಗೇಶ್‌ ನಾರಾಯಣನ್‌ ಡಿಜೆ ಆಗಿದ್ದರೆ, ಇವೆಂಟ್ ಮ್ಯಾನೇಜ್‌ಮೆಂಟ್‌ ಸಂಸ್ಥೆಯಲ್ಲಿ ಸೂರಜ್ ಕೆಲಸ ಮಾಡುತ್ತಿದ್ದ. ಇನ್ನು ಡಿಜಿಟೆಲ್‌ ಕಂಪನಿಯಲ್ಲಿ ಶಾರುಖ್‌ ಉದ್ಯೋಗದಲ್ಲಿದ್ದ. ಒಡಿಶಾ, ಆಂಧ್ರಪ್ರದೇಶ ಹಾಗೂ ಕೇರಳದ ಡ್ರಗ್ಸ್ ಮಾರಾಟ ಜಾಲದಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಬಳಿಕ ನಗರದಲ್ಲಿ ದುಬಾರಿ ಬೆಲೆಗೆ ಈ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರೆಸಾರ್ಟ್‌, ಹೋಟೆಲ್‌ ಹಾಗೂ ಪಬ್‌ಗಳಲ್ಲಿ ಸೂರಜ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದು, ಆ ಪಾರ್ಟಿಗಳಿಗೆ ನಾರಾಯಣನ್‌ ಡಿಜೆಯಾಗಿದ್ದ. ಈ ಪಾರ್ಟಿಗಳಿಗೆ ಬರುವ ಗ್ರಾಹಕರಿಗೆ ಆರೋಪಿಗಳು ಡ್ರಗ್ಸ್ ಪೂರೈಸುತ್ತಿದ್ದರು ಎಂಬ ಮಾಹಿತಿ ಇದೆ. ಈ ಬಗ್ಗೆ ತನಿಖೆ ಮುಂದುವರೆದಿದೆ. ಈ ಐವರು ಪ್ರತ್ಯೇಕವಾಗಿ ಮೂರು ತಂಡಗಳಾಗಿ ನಗರದಲ್ಲಿ ಡ್ರಗ್ಸ್ ಮಾರುತ್ತಿದ್ದರು. ಹಲವು ತಿಂಗಳಿಂದ ಆರೋಪಿಗಳು ಡ್ರಗ್ಸ್ ದಂಧೆಯಲ್ಲಿ ಸಕ್ರಿಯವಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

Share this article