ಕಂಪನಿಯ ₹1 ಕೋಟಿ ಸ್ವಂತಕ್ಕೆಬಳಸಿಕೊಂಡ ನೌಕರ: ದೂರು

KannadaprabhaNewsNetwork | Published : Dec 29, 2023 1:31 AM

ಸಾರಾಂಶ

ಕಂಪನಿಯ ಹಣ ದುರ್ಬಳಕೆ ಮಾಡಿಕೊಂಡು ಫ್ಲಾಟ್‌ ಖರೀದಿಸಿದ ನೌಕರನ ವಿಚಾರಣೆ

ಕನ್ನಪ್ರಭ ವಾರ್ತೆ ಬೆಂಗಳೂರು

ಸುಮಾರು ₹1 ಕೋಟಿಯನ್ನು ಸ್ವಂತಕ್ಕೆ ಬಳಸಿಕೊಂಡು ಕಂಪನಿಗೆ ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಮಹಾಲಕ್ಷ್ಮಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಉದ್ಯಮಿ ನಿಖಿಲ್‌ ಕಶ್ಯಪ್‌ ಎಂಬುವವರು ನೀಡಿದ ದೂರಿನ ಮೇರೆಗೆ ಸಂತೋಷ್‌ ರಾವ್‌ ಎಂಬಾತನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದು, ಆತನಕ್ಕೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಉದ್ಯಮಿ ನಿಖಿಲ್‌ ಕಶ್ಯಪ್‌ ಅವರು 2019ನೇ ಸಾಲಿನಲ್ಲಿ ಸ್ನೇಹಿತ ಸಂತೋಷ್‌ ರಾವ್‌ ಪಾಲುದಾರಿಕೆಯಲ್ಲಿ ‘ಸ್ಟೇಸ್ಮಾಂಕ್‌ ಟೆಕ್ನಾಲಜಿಸ್‌ ಪ್ರೈವೇಟ್‌ ಲಿಮಿಟೆಡ್‌’ ಹೆಸರಿನ ಬಿಲ್ಡಿಂಗ್‌ ಮ್ಯಾನೇಜ್‌ಮೆಂಟ್‌ ಸಾಫ್ಟ್‌ವೇರ್‌ ಕಂಪನಿ ಪ್ರಾರಂಭಿಸಿದ್ದರು. ಈ ಕಂಪನಿಗೆ ನಿಖಿಲ್‌ ಕಶ್ಯಪ್‌ ಅವರು ಬಂಡವಾಳದ ರೂಪದಲ್ಲಿ ₹1.50 ಕೋಟಿ ಹೂಡಿಕೆ ಮಾಡಿದ್ದರು. ಇದಕ್ಕೆ ಸಂತೋಷ್‌ ರಾವ್‌ ಯಾವುದೇ ಹಣ ಹೂಡಿಕೆ ಮಾಡಿರಲಿಲ್ಲ. ಆದರೂ ಆತನನ್ನು ಕಂಪನಿಗೆ ನಿರ್ದೇಶಕನಾಗಿ ಮಾಡಲಾಗಿತ್ತು. ಈ ನಡುವೆ ನಿಖಿಲ್‌ ಕಶ್ಯಪ್‌ ಸ್ನೇಹಿತ ಶರತ್‌ ಕುಮಾರ್‌ ಈ ಕಂಪನಿಯಲ್ಲಿ ₹15 ಲಕ್ಷ ಹೂಡಿಕೆ ಮಾಡಿ ಕಂಪನಿಯ ನಿರ್ದೇಶಕರಾಗಿದ್ದರು.

ಸಂತೋಷ್‌, ‘ಈ ಹಿಂದೆ ತಾನು ಹಲವು ಕಂಪನಿಗಳ ವ್ಯವಹಾರ ನೋಡಿಕೊಂಡಿದ್ದೇನೆ. ಕಂಪನಿಯ ಹಣಕಾಸು ವ್ಯವಹಾರ ನನಗೆ ತಿಳಿದಿದೆ’ ಎಂದು ಹೇಳಿ ಈ ಕಂಪನಿಯ ಎಲ್ಲಾ ಹಣಕಾಸಿನ ನೋಡಿಕೊಳ್ಳುತ್ತಿದ್ದ. ಬಳಿಕ ಕಂಪನಿದ ವ್ಯವಹಾರದ ಹಣವನ್ನು ಕಂಪನಿ ಖಾತೆಯಿಂದ ಸ್ವಂತ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾನೆ. ಕಂಪನಿಯ ಖಾತೆಯಿಂದ ತಂದೆ ಹಾಗೂ ಮಾವನ ತೆರಿಗೆ ಪಾವತಿಸಿದ್ದಾನೆ.

ಕಂಪನಿ ರಿಜಿಸ್ಟರ್‌ ಮಾಡುವ ಮುನ್ನ ನಿರ್ದೇಶಕರು ಕಂಪನಿಯಿಂದ ಯಾವುದೇ ಸಂಬಳ ಹಾಗೂ ಲಾಭವನ್ನು ಪಡೆದುಕೊಳ್ಳಬಾರದು ಎಂಬ ಮೌಖಿಕ ಮಾತುಕತೆಯಾಗಿತ್ತು. ಆದರೂ ಸಂತೋಷ್‌, ಸಂಬಳ ಮತ್ತು ಫಂಡ್‌ ವಿನಿಮಯದ ಹೆಸರಿನಲ್ಲಿ ಕಂಪನಿಯ ಸುಮಾರು ₹1 ಕೋಟಿಯನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಕಂಪನಿಗೆ ನಷ್ಟ ಉಂಟು ಮಾಡಿದ್ದಾನೆ.ಕಂಪನಿಯ ಹಣದಿಂದ

2 ಫ್ಲಾಟ್ ಖರೀದಿಸಿದ

ಕಂಪನಿಯ ಹಣದಲ್ಲಿ ದೇವಸಂದ್ರ ಲೇಔಟ್‌ನಲ್ಲಿ ತನ್ನ ಹಾಗೂ ತನ್ನ ಹೆಂಡತಿ ಹೆಸರಿನಲ್ಲಿ ಫ್ಲಾಟ್‌ವೊಂದನ್ನು ಸಂತೋಷ್‌ ನೋಂದಣಿ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಸಂತೋಷ್‌, ಕಂಪನಿಗೆ ಕ್ಷಮಾಪಣಾ ಪತ್ರ ನೀಡಿದ್ದಾನೆ. ಕಂಪನಿ ನಿರ್ದೇಶಕನಾಗಿದ್ದುಕೊಂಡು ಕಂಪನಿಗೆ ಆಡಳಿತ ಮಂಡಳಿಗೆ ತಿಳಿಯದಂತೆ ಕಂಪನಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿರುವ ಸಂತೋಷ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರ ನಿಖಿಲ್‌ ಕಶ್ಯಪ್‌ ಕೋರಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article