ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಲ್ ಆಫ್ ಏಷ್ಯಾದಲ್ಲಿ ಕನ್ನಡ ನಾಮಫಲಕ ಅಳವಡಿಸುವಂತೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರಿಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿರುವ ಕುರಿತು ದೂರು ದಾಖಲಾಗಿದೆ.ಈ ಕುರಿತು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಸೇರಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದು ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಸೂಕ್ತ ಬಂದೋಬಸ್ತ್ ಒದಗಿಸಿಲ್ಲ ಎಂದು ಟಿ.ಎ.ನಾರಾಯಣಗೌಡ ಅವರು ಆರೋಪಿಸಿದರು.
ಕರವೇ ಕಚೇರಿ ಮತ್ತು ನನ್ನ ಮನೆಯನ್ನು ಸ್ಪೋಟಿಸುವುದಾಗಿ ಬೆದರಿಕೆ ಕರೆ ಬಂದಿದೆ. ಅಲ್ಲದೇ ನನ್ನನ್ನು ಮತ್ತು ನನ್ನ ಮಕ್ಕಳನ್ನು ಗುಂಡಿಟ್ಟು ಕೊಲೆ ಮಾಡಲು ಮುಂಬೈಯಿಂದ ಒಂದು ತಂಡ ಬೆಂಗಳೂರಿಗೆ ಬಂದಿದೆ ಎಂದು ಬೆದರಿಯೊಡ್ಡಿದ್ದಾರೆ. ಮಾಲ್ ಆಫ್ ಏಷ್ಯಾ ತಂಟೆಗೆ ಹೋಗಬಾರದು, ಹೋದರೆ ಗುಂಡಿಟ್ಟು ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇವೆ. ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಯಾರು ಹಣವಂತರೋ ಅಂತವರ ಪರವಾಗಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.ಹೋರಾಟದಲ್ಲಿದ್ದ ನಮ್ಮನ್ನು ಮಧ್ಯಾಹ್ನ ಬಂಧಿಸಲಾಗಿತ್ತು. ರಾತ್ರಿಯಾದರೂ ಯಾರಿಗೂ ಊಟದ ವ್ಯವಸ್ಥೆ ಮಾಡಿಲ್ಲ. ಡಿಸಿಪಿ ಲಕ್ಷ್ಮಿಪ್ರಸಾದ್ ಎನ್ನುವ ಅಧಿಕಾರಿ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಿದ್ದು ಕೆಲವರ ಕೈ, ಕಾಲುಗಳನ್ನು ಮುರಿದಿದ್ದಾರೆ. ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯೂ ಇಲ್ಲಿಲ್ಲ. 35 ವರ್ಷ ಈ ನಾಡಿಗಾಗಿ ಹೋರಾಟ ಮಾಡಿದ್ದಕ್ಕೆ ಈ ಸರ್ಕಾರ ಕೊಡುವ ದೊಡ್ಡ ಕೊಡುಗೆ ಇದು ಎಂದು ಟೀಕಿಸಿದರು.ಸರ್ಕಾರದ ವಿರುದ್ಧ ಟೀಕಾ ಪ್ರಹಾರ
ನಾಡು, ನುಡಿ, ನೆಲ, ಜಲ, ಕನ್ನಡದ ಬಗ್ಗೆ ಭಾರೀ ಅಭಿಮಾನ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕನ್ನಡಪರ ಹೋರಾಟಗಾರರ ಮೇಲೆ ಇಷ್ಟೆಲ್ಲ ದೌರ್ಜನ್ಯ ನಡೆಯುತ್ತಿದ್ದರೂ ಸಹಿಸಿಕೊಂಡಿದ್ದಾರೆ. ಗೃಹಸಚಿವರು ಏನು ಮಾಡುತ್ತಿದ್ದಾರೆ? ಹೋರಾಟಗಾರರನ್ನು ಯಾವುದೇ ಸರ್ಕಾರ, ಮುಖ್ಯಮಂತ್ರಿಯವರು ಈ ರೀತಿಯ ಕೀಳುಮಟ್ಟದಲ್ಲಿ ನಡೆಸಿಕೊಂಡಿರಲಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ಹೀಗೆ ನಡೆಸಿಕೊಳ್ಳುತ್ತಿದೆ ಎಂದು ಟಿ.ಎ.ನಾರಾಯಣಗೌಡ ಕಿಡಿಕಾರಿದರು.