ಮೇಲ್ಸೇತುವೆಯಿಂದ ಜಿಗಿದು ಗೃಹಿಣಿ ಆತ್ಮಹತ್ಯೆ ಯತ್ನ

KannadaprabhaNewsNetwork |  
Published : Dec 28, 2023, 01:45 AM IST
ಆತ್ಮಹತ್ಯೆ ಯತ್ನ | Kannada Prabha

ಸಾರಾಂಶ

ಬೆಂಗಳೂರಿನ ನೈಸ್‌ ರಸ್ತೆ ಬಳಿಯ 60 ಅಡಿ ಎತ್ತರದ ಮೇಲ್ಸೇತುವೆಯಿಂದ ಬಿದ್ದು ಗೃಹಿಣಿ ಆತ್ಮಹತ್ಯೆಗೆ ಯತ್ನಸಿದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಜಿಗುಪ್ಸೆಗೊಂಡು 60 ಅಡಿ ಎತ್ತರದ ಮೇಲ್ಸೇತುವೆಯಿಂದ ಜಿಗಿದು ಖಾಸಗಿ ಬ್ಯಾಂಕ್‌ ಅಧಿಕಾರಿಯೊಬ್ಬರ ಪತ್ನಿ ಆತ್ಮಹತ್ಯೆ ಯತ್ನಿಸಿರುವ ಘಟನೆ ಬುಧವಾರ ನಡೆದಿದೆ.

ಪ್ರಗತಿ ನಗರದ ನಿವಾಸಿ ಒಮಿಕಾ ಮಿಶ್ರಾ (28) ಎಲೆಕ್ಟ್ರಾನಿಕ್ ಸಿಟಿಯ ನೈಸ್‌ ರಸ್ತೆ ಕಡೆಯ ಮೇಲ್ಸೇತುವೆಯಿಂದ ಹಾರಿ ಆತ್ಮಹತ್ಯೆ ಯತ್ನಿಸಿದ್ದು, ಘಟನೆಯಲ್ಲಿ ಅವರ ದೇಹದ ಭಾಗಶಃ ಮೂಳೆಗಳು ಮುರಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದು, ಪ್ರಜ್ಞಾಹೀನಾ ಸ್ಥಿತಿಯಲ್ಲಿರುವ ಅವರು ಜೀವನ್ಮರಣ ಹೋರಾಟ ನಡೆಸಿದ್ದಾರೆ. ಮನೆಯಿಂದ ಬೆಳಗ್ಗೆ ವಾಯು ವಿಹಾರಕ್ಕೆ ಹೋಗುವುದಾಗಿ ಹೇಳಿ ಹೊರಬಂದ ಒಮಿಕಾ ಮೇಲ್ಸೇತುವೆಗೆ ಬಂದು ಏಕಾಏಕಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

2 ದಿನಗಳ ಹಿಂದೆ ಊರಿನಿಂದ ಮರಳಿದ್ದ ಒಮಿಕಾ:

ಮಾರ್ಚ್‌ನಲ್ಲಿ ಜಾರ್ಖಂಡ್ ರಾಜ್ಯದ ಆದಿತ್ಯ ಮಿಶ್ರಾ ಹಾಗೂ ಒಮಿಕಾ ಮಿಶ್ರಾ ವಿವಾಹವಾಗಿದ್ದು, ಪ್ರಗತಿ ನಗರದಲ್ಲಿ ದಂಪತಿ ನೆಲೆಸಿದ್ದರು. ಎಲೆಕ್ಟ್ರಾನಿಕ್ ಸಿಟಿ ಸಮೀಪ ಖಾಸಗಿ ಬ್ಯಾಂಕ್‌ನಲ್ಲಿ ಆದಿತ್ಯ ಉದ್ಯೋಗದಲ್ಲಿದ್ದಾರೆ. ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ಸತಿ-ಪತಿ ಮಧ್ಯೆ ಮನಸ್ತಾಪವಾಗಿತ್ತು ಎನ್ನಲಾಗಿದೆ.

ಪ್ರತಿದಿನ ಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮಾರ್ಗದಲ್ಲೇ ಒಮಿಕಾ ವಾಯು ವಿಹಾರಕ್ಕೆ ತೆರಳುತ್ತಿದ್ದರು. ಅಂತೆಯೇ ಬುಧವಾರ ಬೆಳಗ್ಗೆ 7 ಗಂಟೆಗೆ ಕೂಡ ಮನೆಯಿಂದ ವಾಯು ವಿಹಾರಕ್ಕೆ ಎಂದು ಹೇಳಿ ಸೀದಾ ಮೇಲ್ಸೇತುವೆಗೆ ಬಂದ ಅವರು, ಎರಡು ನಿಮಿಷ ಸೇತುವೆಯಲ್ಲಿ ನಿಂತು ದಿಢೀರನೇ ಕೆಳಗೆ ಹಾರಿದ್ದಾರೆ. ತಕ್ಷಣವೇ ಅವರನ್ನು ರಕ್ಷಿಸಿದ ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

‘ತಮ್ಮ ಪೋಷಕರ ಭೇಟಿಗೆ ಜಾರ್ಖಂಡ್‌ಗೆ ಹೋಗಿದ್ದ ಪತ್ನಿ ಅಲ್ಲಿಂದ ಎರಡು ದಿನಗಳ ಹಿಂದಷ್ಟೇ ಮರಳಿದ್ದಳು. ಊರಿನಿಂದ ಬಂದ ದಿನದಿಂದ ಆಕೆ ತುಂಬಾ ಬೇಸರದಲ್ಲಿದ್ದಳು. ಯಾಕೆ ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ ಎಂಬುದು ಗೊತ್ತಾಗಿಲ್ಲ. ಈ ಘಟನೆಯಿಂದ ನನಗೆ ಆಘಾತವಾಗಿದೆ’ ಎಂದು ಪೊಲೀಸರಿಗೆ ಒಮಿಕಾ ಪತಿ ಆದಿತ್ಯ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.

ಆತ್ಮಹತ್ಯೆ ಯತ್ನಕ್ಕೆ ಕಾರಣವೇನು ಎಂಬುದು ಖಚಿತವಾಗಿಲ್ಲ. ಮನೆಯಲ್ಲಿ ಕೂಡ ಯಾವುದೇ ಪತ್ರ ಪತ್ತೆಯಾಗಿಲ್ಲ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಒಮಿಕಾ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದಾರೆ. ಆರೋಗ್ಯ ಸುಧಾರಿಸಿಕೊಂಡ ಬಳಿಕ ಅವರ ಹೇಳಿಕೆ ಪಡೆಯಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!