ಠಾಣೆ ಮೆಟ್ಟಿಲೇರಿದ ಕ್ರಿಕೆಟಿಗ ಕಾರ್ಯಪ್ಪ ಪ್ರೇಮ ಪ್ರಕರಣ

KannadaprabhaNewsNetwork |  
Published : Dec 26, 2023, 01:32 AM IST
ಕೆ.ಸಿ.ಕಾರ್ಯಪ್ಪ | Kannada Prabha

ಸಾರಾಂಶ

ಮಾಜಿ ಪ್ರೇಯಸಿಯ ವಿರುದ್ಧ ಕ್ರಿಕೆಟಿಗ ಕೆ.ಸಿ.ಕಾರ್ಯಪ್ಪ ಬೆಂಗಳೂರಿನಲ್ಲಿ ದೂರು

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಕ್ರಿಕೆಟಿಗ ಕೆ.ಸಿ.ಕಾರ್ಯಪ್ಪ ಪ್ರೇಮ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

ತಮ್ಮ ಮನೆಗೆ ಮಾಜಿ ಪ್ರೇಯಸಿ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೆ.ಸಿ.ಕಾರ್ಯಪ್ಪ ಬಾಗಲಗುಂಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮತ್ತೊಂದೆಡೆ ಕೆ.ಸಿ.ಕಾರ್ಯಪ್ಪ ಅವರು ಮದುವೆ ಆಗುವುದಾಗಿ ನನ್ನನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಗರ್ಭಪಾತ ಮಾಡಿಸಿ ಇದೀಗ ಮದುವೆಯಾಗದೆ ವಂಚಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಾಜಿ ಪ್ರೇಯಸಿ ಆರ್‌.ಟಿ.ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ಎರಡೂ ಪ್ರತ್ಯೇಕ ಪ್ರಕರಣಗಳ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೆ.ಸಿ.ಕಾರ್ಯಪ್ಪ ದೂರಿನಲ್ಲಿ ಏನಿದೆ?

‘ನಾನು ಕ್ರಿಕೆಟ್‌ ವೃತ್ತಿಜೀವನ ನಡೆಸಿಕೊಂಡಿದ್ದು, ಒಂದೂವರೆ ವರ್ಷದ ಹಿಂದೆ ಯುವತಿಯ ಪರಿಚಯವಾಗಿ ಸ್ನೇಹ ಬೆಳೆದು ಬಳಿಕ ಇಬ್ಬರು ಪ್ರೀತಿಸಿದೇವು. ಆಕೆಯ ಚಾರಿತ್ರ್ಯ ಸರಿ ಇಲ್ಲದ ಕಾರಣ ಹಾಗೂ ಆಕೆ ಡ್ರಗ್ಸ್, ಮದ್ಯದ ವ್ಯಸನಿ ಆಗಿರುವುದರಿಂದ ಹಲವು ಬಾರಿ ಬುದ್ಧಿವಾದ ಹೇಳಿದರೂ ಆಕೆ ಕೇಳಿದಿದ್ದಾಗ ಪ್ರೀತಿಯನ್ನು ಮುರಿದುಕೊಂಡೆ. ಇದರಿಂದ ಕೋಪಗೊಂಡ ದಿಶಾ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಕಳೆದ ವರ್ಷದ ಬಾಗಲಗುಂಟೆ ಠಾಣೆಗೆ ದೂರು ನೀಡಿದ್ದಳು. ಈ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಲಾಗಿದೆ. ಆದರೂ ಆಕೆ ಪದೇ ಪದೇ ನನಗೆ ಕಿರುಕುಳ ನೀಡುತ್ತಿದ್ದಾರೆ. ನಿನ್ನ ಕ್ರಿಕೆಟ್‌ ವೃತ್ತಿಜೀವನ ಹಾಳು ಮಾಡುತ್ತೇನೆ ಎಂದು ಬೆದರಿಸುತ್ತಾ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ. ಕ್ರಿಕೆಟ್‌ ವೃತ್ತಿ ಜೀವನ ಹಾಳಾಗುತ್ತದೆ ಎಂಬ ಕಾರಣಕ್ಕೆ ಆಕೆಯ ಕಿರುಕುಳ ಸಹಿಸಿಕೊಂಡು ಬಂದಿದ್ದೇನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮನೆಗೆ ಬಂದು ರಾದ್ಧಾಂತ:

ಮುಂದುವರೆದು, ‘ಡಿ.22ರಂದು ಸಂಜೆ 4ರ ಸುಮಾರಿಗೆ ಆಕೆ ರಾಮಯ್ಯ ಲೇಔಟ್‌ನಲ್ಲಿರುವ ನಮ್ಮ ಮನೆಗೆ ಅತಿಕ್ರಮ ಪ್ರವೇಶ ಮಾಡಿ ನನ್ನ ತಾಯಿ ಪ್ರತಿಮಾ ಹಾಗೂ ತಂದೆ ಚಮಣ್ಣ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನಾನು ನಿಮ್ಮ ಹೆಸರು ಬರೆದಿಟ್ಟು ಸಾಯುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಅದಕ್ಕಾಗಿ ಆನ್‌ಲೈನ್‌ನಲ್ಲಿ ಚಾಕುವನ್ನು ಬುಕ್‌ ಮಾಡಿ ತರಿಸಿರುವುದಾಗಿ ಹೆದರಿಸಿದ್ದಾಳೆ’ ಎಂದು ಕಾರ್ಯಪ್ಪ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.ಯುವತಿಯ ದೂರಿನಲ್ಲಿ ಏನಿದೆ?

‘ನಾನು 2018ನೇ ಸಾಲಿನಲ್ಲಿ ಮದುವೆಯಾಗಿ ಕಾರಣಾಂತರಗಳಿಂದ 2020ನೇ ಸಾಲಿನಲ್ಲಿ ವಿಚ್ಛೇದನ ಪಡೆದಿದ್ದೇನೆ. ಕಳೆದ ಒಂದೂವರೆ ವರ್ಷದ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಕೆ.ಸಿ.ಕಾರ್ಯಪ್ಪ ಪರಿಚಚಯವಾಗಿದ್ದರು. ಬಳಿಕ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ದೈಹಿಕ ಸಂಪರ್ಕ ಬೆಳೆಸಿದ್ದೆವು. ಪರಿಣಾಮ ನಾನು ಗರ್ಭವತಿಯಾಗಿದ್ದು, ಕಾರ್ಯಪ್ಪ ಗರ್ಭಪಾತ ಮಾಡಿಸಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದೆ. ಬಳಿಕ ಕಾರ್ಯಪ್ಪ ಮನವಿ ಮೇರೆಗೆ ಆ ದೂರು ವಾಪಸ್‌ ಪಡೆದಿದ್ದೆ’ ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾರೆ.

ಪೋಷಕರ ವಿರುದ್ಧವೂ ಆರೋಪ:

ಮುಂದುವರೆದು, ‘ಬಳಿಕ ಕಾರ್ಯಪ್ಪ ನನ್ನನ್ನು ಭೇಟಿಯಾಗಿ ನನ್ನಿಂದ ತಪ್ಪಾಗಿದೆ. ನಾವಿಬ್ಬರೂ ಮದುವೆಯಾಗಿ ಜೀವನ ಮಾಡೋಣ ಎಂದು ಹೇಳಿದ್ದರು. ಹಂತ ಹಂತವಾಗಿ ನನ್ನಿಂದ ₹2 ಲಕ್ಷ ಹಣವನ್ನೂ ಪಡೆದಿದ್ದರು. ಈ ನಡುವೆ ಕೆ.ಸಿ.ಕಾರ್ಯಪ್ಪ ಪೋಷಕರು, ನೀನು ಡಿವೋರ್ಸ್‌ ಆದವಳು. ನನ್ನ ಮಗನನ್ನು ಮದುವೆ ಮಾಡಿಕೊಳ್ಳಬೇಡ ಎಂದು ನಿಂದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಡಿ.18ರಂದು ಕೆ.ಸಿ.ಕಾರ್ಯಪ್ಪ ನನ್ನ ಮನೆಗೆ ಬಂದು ನಿನಗೆ ಈಗಾಗಲೇ ಡಿವೋರ್ಸ್‌ ಆಗಿದೆ. ನಿನ್ನನ್ನು ಕಂಡರೆ ನನಗೆ ಇಷ್ಟವಿಲ್ಲ. ಹೀಗಾಗಿ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ. ನಾನು ನಿನ್ನಿಂದ ಯಾವುದೇ ಹಣವನ್ನು ಪಡೆದುಕೊಂಡಿಲ್ಲ. ನಿನ್ನನ್ನು ಮದುವೆ ಸಹ ಆಗುವುದಿಲ್ಲ ಎಂದು ನನ್ನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿ ಮೋಸ ಮಾಡಿದ್ದಾರೆ’ ಎಂದು ಯುವತಿ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಬಿಲ್ಡರ್‌ ಮನೇಲಿ 18 ಕೋಟಿ ಮೌಲ್ಯದಚಿನ್ನ ಕದ್ದವರ ಪತ್ತೆಗೆ 3 ವಿಶೇಷ ತಂಡ
ಫಾರಿನ್‌ ಟೂರ್‌ ಡ್ರಗ್ಸ್ ಮಾಫಿಯಾ ವಿರುದ್ಧ ಭರ್ಜರಿ ಬೇಟೆ