- ಚಾಲಕ ಸೇರಿ ನಾಲ್ವರು ಮಕ್ಕಳ ಸ್ಥಿತಿ ಗಂಭೀರ । ಮೈಸೂರಿನ ಆಸ್ಪತ್ರೆಗೆ ಶಿಫ್ಟ್
---ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಖಾಸಗಿ ಶಾಲಾ ಮಕ್ಕಳನ್ನು ಮನೆಗೆ ಕರೆದೊಯುತ್ತಿದ್ದ ಶಾಲಾ ವಾಹನ ಹಾಗೂ ಟಿಪ್ಪರ್ ಡಿಕ್ಕಿ ಹೊಡೆದು ೮ ಮಂದಿ ಮಕ್ಕಳು ಸೇರಿದಂತೆ ಶಾಲಾ ವಾಹನದ ಚಾಲಕ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಚಿಕ್ಕತುಪ್ಪೂರು (ಗುಂಡ್ಲುಪೇಟೆ-ಚಾಮರಾಜನಗರ ರಸ್ತೆ) ಗೇಟ್ ಬಳಿ ಮಂಗಳವಾರ ಸಂಜೆ ನಡೆದಿದೆ.ಟಾಟಾ ಮ್ಯಾಜಿಕ್‌ನಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಗುಂಡ್ಲುಪೇಟೆ ಕಡೆಯಿಂದ ಕಂದೇಗಾಲ, ಹೊಸೂರಿಗೆ ತೆರಳುತ್ತಿದ್ದಾಗ, ಚಾಮರಾಜನಗರ ಕಡೆಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ರಭಸಕ್ಕೆ ಶಾಲಾ ವಾಹನ ಸಂಪೂರ್ಣವಾಗಿ ಜಖಂಗೊಂಡಿದೆ. ಟಾಟಾ ಮ್ಯಾಜಿಕ್‌ನ ಚಾಲಕ ಅಣ್ಣೂರು ಗ್ರಾಮದ ರಂಜಿತ್‌ಗೆ ತೀವ್ರವಾಗಿ ಪೆಟ್ಟುಬಿದ್ದಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೊತೆಗೆ ಅಪಘಾತದಲ್ಲಿ ನಾಲ್ವರು ಮಕ್ಕಳು ಗಾಯಗೊಂಡಿದ್ದು, ಖಾಸಗಿ ಆ್ಯಂಬುಲೆನ್ಸ್ ಮೂಲಕ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಕಾಲು ತುಂಡಾಗಿದೆ ಎನ್ನಲಾಗಿದೆ. ಇನ್ನೂಳಿದ ಆರಕ್ಕೂ ಹೆಚ್ಚುಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಧರ್ಮದೇಟು:
ಅಪಘಾತ ಸ್ಥಳದಲ್ಲಿದ್ದ ಜನರು ಟಿಪ್ಪರ್ ಚಾಲಕ ಗುಂಡ್ಲುಪೇಟೆಯ ವಾಸಿಂ ಅಕ್ರಂಗೆ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.ಪೊಲೀಸ್, ಆರ್‌ಟಿಒ ನಿರ್ಲಕ್ಷ್ಯ?
ಗುಂಡ್ಲುಪೇಟೆ: ತಾಲೂಕಿನಲ್ಲಿ ಓವರ್ ಲೋಡ್ ಟಿಪ್ಪರ್‌ಗಳ ಹಾವಳಿ ತಡೆಗೆ ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ನಿರ್ಲಕ್ಷ್ಯ ವಹಿಸಿರುವುದೇ ಇಂಥ ಘಟನೆಗಳು ನಡೆಯಲು ಪ್ರಮುಖ ಕಾರಣವಾಗಿದೆ ಎಂದು ಜನರು ಆರೋಪಿಸಿದ್ದಾರೆ. ಸ್ಥಳೀಯ ಗುಂಡ್ಲುಪೇಟೆ, ಬೇಗೂರು ಹಾಗೂ ತೆರಕಣಾಂಬಿ ಪೊಲೀಸರು ಟಿಪ್ಪರ್‌ಗಳ ಮಾಲೀಕರ ಜೊತೆ ಶಾಮೀಲಾಗಿರುವ ಕಾರಣ ಪೊಲೀಸರ ಕಣ್ಮುಂದೆಯೇ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಟಿಪ್ಪರ್ ಸಂಚರಿಸಿದರೂ, ಅದನ್ನು ತಡೆದು ತಪಾಸಣೆ ಮಾಡುವ ತಾಕತ್ತು ತೋರಿತ್ತಿಲ್ಲ ಎಂದು ಸಾರ್ವಜನಿಕರು ದೂರುಗಳ ಸುರಿಮಳೆಯನ್ನೇ ಸುರಿಸಿದ್ದಾರೆ.ಇನ್ನೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೂಡ ಟಿಪ್ಪರ್ ಸಂಚಾರ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಇನ್ನೂ ಜಿಲ್ಲಾಡಳಿತ ಇದ್ದು ಇಲ್ಲದಂತಾಗಿ ಹೋಗಿದೆ ಎಂದು ನೂರಾರು ಮಂದಿ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ. ಪತ್ರಿಕೆಗಳಲ್ಲಿ ಹಾಗೂ ಅಪಘಾತ ನಡೆದ ಸಮಯದಲ್ಲಿ ಮಾತ್ರ ತಪಾಸಣೆ ನಾಟಕವಾಡುತ್ತಿದ್ದಾರೆ. ಕಾರಣ ಟಿಪ್ಪರ್ ಹಾಗೂ ಕ್ವಾರಿ ಮಾಲೀಕರ ಲಾಬಿಗೆ ಸ್ಥಳೀಯ ಪೊಲೀಸರು, ಆರ್‌ಟಿಒ ಮಣಿದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇನ್ನೂ ಆಟೋ ಹಾಗೂ ಗೂಡ್ಸ್ ಆಟೋಗಳ ಶೇ.೯೦ರಷ್ಟು ಚಾಲಕರು ಸಮವಸ್ತ್ರ ಧರಿಸುತ್ತಿಲ್ಲ. ಬಹುತೇಕ ವಾಹನಗಳಿಗೆ ವಿಮೆ, ಎಫ್‌ಸಿ ಇಲ್ಲ. ಆದರೂ ಪೊಲೀಸ್ ಠಾಣೆಗಳ ಮುಂದೆಯೇ ಹೋದರೂ ತಪಾಸಣೆ ಮಾಡುತ್ತಿಲ್ಲ. ಇನ್ನಾದರೂ ಮಾಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.---ಶಾಸಕರೂ ಎಚ್ಚರಿಸಲಿ
ಗುಂಡ್ಲುಪೇಟೆ: ಸ್ಥಳೀಯ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಅವರದ್ದು ಕ್ವಾರಿ ಹಾಗೂ ಕ್ರಸರ್ ಇದೆ ಎಂದ ಮಾತ್ರಕ್ಕೆ ಓವರ್ ಲೋಡ್ ಟಿಪ್ಪರ್ ಆರ್ಭಟ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂಬ ಆರೋಪ ವಿಪಕ್ಷ ಹಾಗೂ ಸಾರ್ವಜನಿಕರು ಮಾಡುತ್ತಿದ್ದು, ಶಾಸಕರು ಇನ್ನಾದರೂ ಓವರ್ ಲೋಡ್ ಟಿಪ್ಪರ್ ಹಾಗೂ ಸುರಕ್ಷತಾ ಕ್ರಮಗಳಲ್ಲಿದೆ ಸಂಚರಿಸುವ ಟಿಪ್ಪರ್‌ಗಳ ತಪಾಸಣೆಗೆ ಸೂಚನೆ ನೀಡಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.><
೧೭ಜಿಪಿಟಿ೩ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರು ಗೇಟ್ ಬಳಿ ಟಿಪ್ಪರ್ ಡಿಕ್ಕಿ ಹೊಡೆದು ಶಾಲಾ ವಾಹನ ಜಖಂಗೊಂಡಿದೆ.
೧೭ಜಿಪಿಟಿ೪ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರು ಗೇಟ್ ಬಳಿ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದ ಟಿಪ್ಪರ್.
೧೭ಜಿಪಿಟಿ೫ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಲಾ ವಾಹನದ ಚಾಲಕ.
೧೭ಜಿಪಿಟಿ೬ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ತೆಯಲ್ಲಿ ಆ್ಯಂಬುಲೆನ್ಸ್‌ನಲ್ಲಿ ಶಾಲಾ ವಿದ್ಯಾರ್ಥಿನ ಸಾಗಿಸುವ ದೃಶ್ಯ.