ತನ್ನ ತಂದೆ, ತಾಯಿ ಹಾಗೂ ತಂಗಿಯನ್ನು ಹತ್ಯೆಗೈದು ತಪ್ಪಿಸಿಕೊಂಡಿದ್ದ ಮೃತಳ ಹಿರಿಯ ಮಗಳ ಶ್ವೇತಾಳನ್ನು ಪಾಂಡಿಚೇರಿಯಲ್ಲಿ ಕೆ.ಆರ್‌.ಪುರ ಪೊಲೀಸರು ಬಂಧಿಸಿ ಬುಧವಾರ ಕರೆತಂದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ತಂದೆ, ತಾಯಿ ಹಾಗೂ ತಂಗಿಯನ್ನು ಹತ್ಯೆಗೈದು ತಪ್ಪಿಸಿಕೊಂಡಿದ್ದ ಮೃತಳ ಹಿರಿಯ ಮಗಳ ಶ್ವೇತಾಳನ್ನು ಪಾಂಡಿಚೇರಿಯಲ್ಲಿ ಕೆ.ಆರ್‌.ಪುರ ಪೊಲೀಸರು ಬಂಧಿಸಿ ಬುಧವಾರ ಕರೆತಂದಿದ್ದಾರೆ.

ಈ ಹತ್ಯೆ ಬಳಿಕ ಪರಾರಿಯಾಗಿರುವ ಶ್ವೇತಾಳ ಪ್ರಿಯಕರ ಕೆನೆತ್ ಪತ್ತೆಗೆ ಪೊಲೀಸರ ಹುಡುಕಾಟ ಮುಂದುವರೆದಿದ್ದು, ಗುರುವಾರ ಸಂಜೆ ವೇಳೆಗೆ ಆತ ಸಹ ಬಂಧನವಾಗಬಹುದು ಎಂದು ಅಧಿಕಾರಿಗಳು ವಿಶ್ವಾಸ ಹೊಂದಿದ್ದಾರೆ.

ಸೀಗೇನಹಳ್ಳಿ ಸಮೀಪದ ತಮ್ಮ ಅಪಾರ್ಟ್‌ಮೆಂಟ್‌ಗೆ ಬಂದ ತಂದೆ, ತಾಯಿ ಹಾಗೂ ತಂಗಿಯನ್ನು ಸೋಮವಾರ ರಾತ್ರಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಹತ್ಯೆಗೈದಿದ್ದರು. ಈ ತ್ರಿವಳಿ ಕೊಲೆ ಪ್ರಕರಣವು ಸಾಮಾಜಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಈ ಕೃತ್ಯದ ಹಂತಕರ ಬೆನ್ನತ್ತಿದ ಪೊಲೀಸರು, ಪಾಂಡಿಚೇರಿಯಲ್ಲಿ ಆಕೆಯನ್ನು ಬಂಧಿಸಿದ್ದಾರೆ.

ಬೆಂಗಳೂರು ಟು ಪಾಂಡಿಚೇರಿ:

ಮನೆಯಲ್ಲಿ ಸೋಮವಾರ ರಾತ್ರಿ 8.30 ಗಂಟೆಗೆ ಕುಟುಂಬದವರ ಹತ್ಯೆ ಬಳಿಕ ಬಂಧನಭೀತಿಯಿಂದ ಹೊರ ರಾಜ್ಯಕ್ಕೆ ಶ್ವೇತಾ ಹಾಗೂ ಕೆನೆತ್ ಪರಾರಿಯಾಗಿದ್ದರು. ಮನೆಯಿಂದ ಬೈಕ್‌ ತೆಗೆದುಕೊಂಡು ಕೆಲ ಹೊತ್ತು ಕೆ.ಆರ್‌.ಪುರ ಸುತ್ತಮುತ್ತ ಸುತ್ತಾಡಿದ ಅವರು, ಆನಂತರ ತಮಿಳುನಾಡಿನ ಹಾದಿ ತುಳಿದಿದ್ದರು. ಮಾರ್ಗ ಮಧ್ಯೆ ಬೈಕ್ ಅನ್ನು ನಿಲ್ಲಿಸಿ ಬಸ್ಸಿ ಹತ್ತಿದ್ದಾರೆ. ಆ ರಾಜ್ಯದ ತಿರುಣ್ಣಾಮಲೈ ಅನ್ನು ಮಂಗಳವಾರ ಮುಂಜಾನೆ ಅವರು ತಲುಪಿದ್ದಾರೆ. ಆ ಜಿಲ್ಲೆಯಲ್ಲಿ ಇಬ್ಬರು ಪ್ರತ್ಯೇಕವಾಗಿ ಬೇರೆ ಬೇರೆ ಬಸ್ಸೇರಿದ್ದಾರೆ. ಈ ಜೋಡಿ ಬೆನ್ನತ್ತಿದ್ದ ಪೊಲೀಸರಿಗೆ ಪಾಂಡಿಚೇರಿಯಲ್ಲಿ ಶ್ವೇತಾ ಸಿಕ್ಕಿಬಿದ್ದಿದ್ದಾಳೆ. ‍ಬಳಿಕ ಆಕೆಯನ್ನು ಬುಧವಾರ ಸಂಜೆ ಕರೆತಂದು ಬಂಧನ ಪ್ರಕ್ರಿಯೆಗೊಳಪಡಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಪದೇ ಪದೇ ಹೇಳಿಕ ಬದಲು

ಇನ್ನು ತ್ರಿವಳಿ ಕೊಲೆ ಪ್ರಕರಣ ಸಂಬಂಧ ಪೊಲೀಸರ ವಿಚಾರಣೆ ವೇಳೆ ಶ್ವೇತಾ ಗೊಂದಲಕಾರಿ ಹೇಳಿಕೆ ಕೊಡುತ್ತಿದ್ದಾಳೆ ಎಂದು ತಿಳಿದು ಬಂದಿದೆ. ತನ್ನ ಸ್ವತಂತ್ರ ಬದುಕಿಗೆ ಪೋಷಕರು ಅಡ್ಡಪಡಿಸಿದಾಗ ಕಾರಣಕ್ಕೆ ಹತ್ಯೆ ಮಾಡಿರುವುದಾಗಿ ಶ್ವೇತಾ ಹೇಳಿಕೆ ಕೊಟ್ಟಿದ್ದಾಳೆ. ಆನಂತರ ತಾನು ಕೊಲೆ ಮಾಡಿಲ್ಲ. ಕೆನೆತ್ ಚೂರಿ ಹಾಕಿದ್ದು ಎಂದಿದ್ದಾಳೆ. ಹೀಗಾಗಿ ಆಕೆಯ ಪ್ರಿಯಕರ ಬಂಧನವಾದ ಬಳಿಕ ಕೊಲೆ ಕೃತ್ಯದ ಸಂಪೂರ್ಣ ಚಿತ್ರಣ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.