ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದಿಂದ ಪ್ರತಿವರ್ಷ ಕೊಡಮಾಡುವ ‘ನಾಡಪ್ರಭು ಕೆಂಪೇಗೌಡ’ ರಾಷ್ಟ್ರೀಯ ಪ್ರಶಸ್ತಿಗೆ  ಟಿ.ವಿ.ಮೋಹನ್‌ ದಾಸ್‌ ಪೈ,  ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ,  ಎ.ಸಿ.ಲಕ್ಷ್ಮಣ್‌ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ 15 ಮಂದಿ ಸಾಧಕರು ಆಯ್ಕೆಯಾಗಿದ್ದಾರೆ.

 ಬೆಂಗಳೂರು : ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದಿಂದ ಪ್ರತಿವರ್ಷ ಕೊಡಮಾಡುವ ‘ನಾಡಪ್ರಭು ಕೆಂಪೇಗೌಡ’ ರಾಷ್ಟ್ರೀಯ ಪ್ರಶಸ್ತಿಗೆ ಇನ್ಫೋಸಿಸ್ ಸಂಸ್ಥೆ ಮಾಜಿ ಮುಖ್ಯಸ್ಥ ಟಿ.ವಿ.ಮೋಹನ್‌ ದಾಸ್‌ ಪೈ, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಅರಣ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ್‌ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ 15 ಮಂದಿ ಸಾಧಕರು ಆಯ್ಕೆಯಾಗಿದ್ದಾರೆ.

ಈ ಸಂಬಂಧ ಬುಧವಾರ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣೇಗೌಡ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದಿಂದ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ನಾಡಪ್ರಭು ಕೇಂಪೇಗೌಡ ರಾಷ್ಟ್ರೀಯ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ಕೆಂಪೇಗೌಡರ 517ನೇ ಜನ್ಮ ದಿನಾಚರಣೆ ಪ್ರಯುಕ್ತ ಮೂವರು ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಮತ್ತು 15 ಮಂದಿ ಸಾಧಕರಿಗೆ ರಾಜ್ಯ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜೂ.27ಕ್ಕೆ ಪ್ರಶಸ್ತಿ ಪ್ರದಾನ:

ಕೆಂಪೇಗೌಡ ಜನ್ಮದಿನಾಚರಣೆ ಪ್ರಯುಕ್ತ ಜೂ.27ರಂದು ಸಂಜೆ 4 ಗಂಟೆಗೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ.ರಾಧಕೃಷ್ಣನ್‌ ಅವರು ಸಾಧಕರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಿಗೆ 2 ಲಕ್ಷ ರು. ನಗದು ಹಾಗೂ 200 ಗ್ರಾಂ ಬೆಳ್ಳಿ ಸ್ಮರಣಿಕೆ ಮತ್ತು ರಾಜ್ಯ ಪ್ರಶಸ್ತಿ ಪುರಷ್ಕೃತರಿಗೆ 25 ಸಾವಿರ ರು. ನಗದು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಪ್ರಶಸ್ತಿಗೆ ಆಯ್ಕೆಯಾದವರು 

ಎಸ್‌.ವಿ.ರಂಗನಾಥ್, ಎಚ್.ಎ.ರಂಗನಾಥ್, ಎಂ.ಆರ್‌.ಜೈ ಶಂಕರ್, ಬಿ.ಎಂ.ಕೊಕರೆ, ಡಾ.ವಾಮದೇವಪ್ಪ, ಕೇಶವ ಆಮೈ, ವಿಕ್ರಮ್ ಮುತ್ತಣ್ಣ, ಜಯಪ್ರಕಾಶ ಗೌಡ, ರವಿಕುಮಾರ್, ಯಶಸ್ವಿನಿ ಶರ್ಮ, ಪ್ರೇಮಾ ಗಣೇಶ್, ರಶ್ಮಿ ಸಾವಂತ್, ತ್ರಿಸ್ಟಾ ರಾಮಮೂರ್ತಿ, ಧರ್ಮೇಂದ್ರ ಮತ್ತು ಮಹೇಶ್ ಗೌಡ ಅವರು ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.